Advertisement
ಕೋವಿಡ್ ದಿಂದ ಕೆಲಸವಿಲ್ಲದೇ ಕಂಗಾಲಾದ ರೈತರಿಗೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ಸರ್ಕಾರ ಹೆಚ್ಚಿನ ಹಣ ಒದಗಿಸಿ ರೂಪಿಸಿರುವ ನರೇಗಾ ಯೋಜನೆಯ ಮಹತ್ವವನ್ನು ಹಳ್ಳಿಗರು ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ. ಯಂತ್ರಗಳ ಬಳಕೆ ಮಾಡಿಯೇ ಅನೇಕ ಕಾಮಗಾರಿಗಳನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕಿನಲ್ಲಿಯೇ ಅತೀ ಹೆಚ್ಚು ಯಂತ್ರೋಪಕರಣಗಳ ಬಳಕೆ ಇದ್ದು, ಬದು ನಿರ್ಮಾಣ ಮತ್ತು ಕೃಷಿ ಹೊಂಡ ತೋಡಿಸಲು ಹಳ್ಳಿಗರು ಜೆಸಿಬಿಗಳನ್ನು ಬಳಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 4578 ಕ್ಕೂ ಅಧಿಕ ಕಾಮಗಾರಿಗಳು ಪ್ರಸ್ತುತ ಪ್ರಗತಿಯಲ್ಲಿವೆ. ತಾಲೂಕಾವಾರು ಕಲಘಟಗಿ ತಾಲೂಕಿನಲ್ಲಿ ಹೆಚ್ಚಿನ ಕಾಮಗಾರಿಗಳು ಚಾಲ್ತಿಯಲ್ಲಿವೆ.
Related Articles
Advertisement
ಅನಿವಾರ್ಯವಾಗಿ ಯಂತ್ರಕ್ಕೆ ಮೊರೆ? : ಒಂದೆಡೆ ಜನರಿಗೆ ಉದ್ಯೋಗವಿಲ್ಲ ಎನ್ನುವ ಕೂಗು ಕೇಳುತ್ತಲೇ ಇದೆ. ಇನ್ನೊಂದೆಡೆ ಹಳ್ಳಿಗರು ತಮ್ಮ ಹೊಲಗಳಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡುವಂತೆ ಒತ್ತಾಯ ಕೂಡ ಮಾಡುತ್ತಿದ್ದಾರೆ. ಆದರೆ ಬದು ನಿರ್ಮಾಣ, ಕೃಷಿಹೊಂಡದಂತಹ ಹೊಲದ ಕಾಮಗಾರಿಗಳಿಗೂ ಇಂದು ಹಳ್ಳಿಗರು ಹಿಂದೇಟು ಹಾಕುತ್ತಿದ್ದಾರೆ. ನಿಗದಿತ ಸಮಯದಲ್ಲಿ ತಮ್ಮ ಹೊಲದಲ್ಲಿನ ಕೆಲಸ ಮಾಡಿಸಿಕೊಳ್ಳಲು ಕೂಲಿಯಾಳುಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಅನಿವಾರ್ಯವಾಗಿ ಜೆಸಿಬಿ ಮೊರೆ ಹೋಗುತ್ತಿದ್ದೇವೆ ಎನ್ನುತ್ತಿದ್ದಾರೆ.
ಉದ್ಯೋಗ ಒದಗಿಸಿದ ವಿವರ : ಕೋವಿಡ್ ನಂತರ ಜನರ ಅನುಕೂಲಕ್ಕಾಗಿ ನರೇಗಾದಲ್ಲಿ ಜಿಪಂ ವ್ಯವಸ್ಥಿತವಾಗಿ ಅತೀ ಹೆಚ್ಚು ಮಾನವ ದಿನಗಳ ಸೃಜನೆಗೆ ಒತ್ತು ನೀಡಿದೆ. ಒಂದೇ ತಿಂಗಳಿನಲ್ಲಿ ಎಲ್ಲಾ ತಾಲೂಕಿನಲ್ಲಿಯೂ 10 ಪಟ್ಟು ಹೆಚ್ಚು ಮಾನವ ದಿನಗಳ ಸೃಜನೆ ಮಾಡಲಾಗಿದೆ.ಒಟ್ಟು 2,84,911 ಮಾನವ ದಿನಗಳ ಸೃಜನೆಯಾಗಿದ್ದು, 12987 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ. ಕೋವಿಡ್ ಸಂಕಷ್ಟದಿಂದ ಹೊರಜಿಲ್ಲೆಗಳಿಂದ ಮರಳಿ ಧಾರವಾಡ ಜಿಲ್ಲೆಗೆ ಆಗಮಿಸಿದ ಒಟ್ಟು 837 ಜನರಿಗೆ ನೂತನವಾಗಿ ಉದ್ಯೋಗ ಚೀಟಿ ನೀಡಲಾಗಿದೆ.
ಜೆಸಿಬಿ ಬಳಸಿ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸ್ಥಳೀಯ ಗ್ರಾಪಂಗಳ ಪಿಡಿಒ ಮತ್ತು ಪಂಚಾಯ್ತಿಯನ್ನೇ ಹೊಣೆ ಮಾಡಲಾಗುವುದು. –ಡಾ| ಬಿ.ಸಿ. ಸತೀಶ, ಜಿಪಂ ಸಿಇಒ
ಸರ್ಕಾರದವರು ಗುದ್ದಲಿ, ಬುಟ್ಟಿ ಬಳಸಿಯೇ ಬದು ನಿರ್ಮಿಸಿ ಅಂತಾರ. ಆದರ ನಡಾ ಬಗ್ಗಿಸಿ ಕೆಲಸ ಮಾಡೋದಕ್ಕ ಕೂಲಿಯಾಳು ಬರಿ¤ಲ್ಲಾ. ಅದಕ್ಕೆ ಜೆಸಿಬಿ ಬಳಸಿ ಬದು ನಿರ್ಮಿಸುವುದು ಅನಿವಾರ್ಯವಾಗಿದೆ. – ಶಂಕರಪ್ಪ ತಳವಾರ, ಬಮ್ಮಿಗಟ್ಟಿ ರೈತ
-ಬಸವರಾಜ ಹೊಂಗಲ್