Advertisement

ಕಟ್ಟಡವಿಲ್ಲದೆ ಸೊರಗುತ್ತಿದೆ ಜಯಂತಿ ನಗರ ಪ್ರಾಥಮಿಕ ಶಾಲೆ

10:32 PM Dec 10, 2019 | mahesh |

ಕಾರ್ಕಳ: 2018 ಆ. 13 ರಂದು ಬೀಸಿದ ಬಿರುಗಾಳಿಗೆ ಸ‌ಂಪೂರ್ಣವಾಗಿ ಹಾನಿಗೊಂಡ ಜಯಂತಿ ನಗರ ಪ್ರಾಥಮಿಕ ಶಾಲೆ ಯೀಗ ಶೋಚನೀಯ ಸ್ಥಿತಿಯಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅನತಿ ದೂರದಲ್ಲಿರುವ ಕುಕ್ಕುಂದೂರು ಗ್ರಾಮದ ಈ ಸರಕಾರಿ ಶಾಲೆ ಮುಚ್ಚುವ ಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳ ಹೆತ್ತವರನ್ನು ಚಿಂತಿಗೀಡು ಮಾಡಿದೆ.

Advertisement

ಅಂದು ಬೀಸಿದ ಗಾಳಿ-ಮಳೆಗೆ ಶಾಲಾ ಗೋಡೆ ನೆಲಸಮವಾಗಿದ್ದು, ಮರುದಿನವೇ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿದ್ದರೂ ಶಾಲೆಗೆ ನೂತನ ಕಟ್ಟಡ ಒದಗಿಸುವಲ್ಲಿ ಮುತುವರ್ಜಿ ವಹಿಸಿಲ್ಲ. 1ರಿಂದ 7ನೇ ತರಗತಿ ತನಕ ವಿರುವ ಈ ಶಾಲೆಯಲ್ಲೀಗ ಕೇವಲ ಮೂರು ಕೊಠಡಿಗಳಿವೆ. ಹಾಗಾಗಿ ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗಳನ್ನು ನಡೆಸುವಂತಹ ಅನಿವಾರ್ಯತೆ ಶಿಕ್ಷಕಿಯರದ್ದು. ಈ ಶಾಲೆಯಲ್ಲೀಗ ಇಬ್ಬರು ಖಾಯಂ, ಒಬ್ಬರು ಅತಿಥಿ, ಮತ್ತೂಬ್ಬರು ನಿಯೋಜನೆ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೂಲ ಸೌರ್ಕಯವೇ ಇಲ್ಲ
1973ರಲ್ಲಿ ಸ್ಥಾಪನೆಯಾದ ಜಯಂತಿ ನಗರ ಶಾಲೆಯಲ್ಲೀಗ ಯಾವೊಂದು ಮೂಲ
ಸೌಕರ್ಯವೂ ಇಲ್ಲ. ಪ್ರಮುಖವಾಗಿ ಶಾಲಾ ತರಗತಿ ನಡೆಸಲು ಕನಿಷ್ಠ 5 ತರಗತಿ ಕೊಠಡಿಯ ಅಗತ್ಯವಿದೆ. ಸುಸಜ್ಜಿತ ಶೌಚಾಲಯವೂ ಇಲ್ಲ. ಗ್ರಂಥಾಲಯ, ಪ್ರಯೋಗಾಲಯ, ಆಟದ ಸಾಮಗ್ರಿ ಹೀಗೆ ಇಲ್ಲಗಳ ಪಟ್ಟಿಯೇ ದೊಡ್ಡದಾಗಿ ಬೆಳೆಯುತ್ತಿದೆ.

ಕಿಡಿಗೇಡಿಗಳಿಂದ ಹಾನಿ
ಇದ್ದ ಕೊಠಡಿಗಳನ್ನು ಹಾನಿಗೊಳಿಸುವ ಪ್ರಯತ್ನ ಕೆಲವು ಕಿಡಿಗೇಡಿಗಳಿಂದ ಆಗುತ್ತಿದೆ. ರಾತ್ರಿ ವೇಳೆ ಕೊಠಡಿಗಳ ಕಿಟಕಿ ಗಳ ಕನ್ನಡಿಯನ್ನು ಒಡೆಯುವುದು, ನಳ್ಳಿ ಹಾನಿಗೊಳಿಸುವುದು, ಮದ್ಯದ ಬಾಟಲಿ, ಪ್ಲಾಸ್ಟಿಕ್‌, ಇನ್ನಿತರ ತ್ಯಾಜ್ಯಗಳನ್ನು ಹಾಕಲಾಗಿದ್ದು ಶಾಲೆಯ ಸುಂದರ ಪರಿಸರಹಾಳುಗೆಡವುತ್ತಿದ್ದಾರೆ.

ಪೊಲೀಸರೂ ಮೌನ
ರಾತ್ರಿ ವೇಳೆಯಲ್ಲಿ ಕಿಡಿಗೇಡಿಗಳಿಂದ ತೊಂದರೆಯಾಗುತ್ತಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಪೊಲೀಸ್‌ ಠಾಣೆಯ ಪಕ್ಕದಲ್ಲೇ ಈ ಶಾಲೆ ಇದೆ. ಇದರಿಂದ ಪೊಲೀಸರ ವಿರುದ್ಧವೂ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Advertisement

ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ
ಕಟ್ಟಡ ಚೆನ್ನಾಗಿದ್ದ ಸಮಯದಲ್ಲಿ 60ರಷ್ಟಿದ್ದ ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಇದೀಗ ತೀರಾ ಕಡಿಮೆಯಾಗುತ್ತಿದೆ. ಪ್ರಸ್ತುತವಿಲ್ಲಿ 1ನೇ ತರಗತಿಯಲ್ಲಿ 3, 2ರಲ್ಲಿ 3, 3ರಲ್ಲಿ 5, 4ರಲ್ಲಿ 4, 5ರಲ್ಲಿ 6, 6ರಲ್ಲಿ 3, 7ರಲ್ಲಿ 4 ಹೀಗೆ ಒಟ್ಟು 28 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ತರಗತಿ ಇಲ್ಲದ ಕಾರಣ ಈ ವರ್ಷಕ್ಕೆ ಕೇವಲ ಮೂವರು ವಿದ್ಯಾರ್ಥಿಗಳ ದಾಖಲಾತಿಯಾಗಿದೆ.

ಗುಣಮಟ್ಟದ ಶಿಕ್ಷಣ
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರೂ ಉತ್ತಮ ಶಿಕ್ಷಕರು ಇಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದು ಹೆತ್ತವರು ಹೇಳುತ್ತಾರೆ. ಇಲ್ಲಿಂದ ತೇರ್ಗಡೆಯಾದ ಹಲವು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ನೆನಪಿಸುತ್ತಾರೆ.
ವಿಲೀನಗೊಳಿಸಬಹುದಲ್ಲವೇ ? ಕಟ್ಟಡವೂ ಇಲ್ಲ. ಮೂಲ ಸವಲತ್ತೂ ಇಲ್ಲಿನ ವಿದ್ಯಾರ್ಥಿಗಳಿಗೆ ಇಲ್ಲವೆಂದಾದರೆ ಸ್ಥಳೀಯ ಶಾಲೆಯೊಂದಿಗೆ ಈ ಶಾಲೆಯನ್ನು ವಿಲೀನಗೊಳಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಸಹಕಾರಿಯಾಗಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ.

ಶಿಕ್ಷಕರಿಂದಲೇ ವೇತನ ಪಾವತಿ
ಕಳೆದ ಹತ್ತು ವರ್ಷಗಳಿಂದ ಇಲ್ಲಿ ಗೌರವ ಶಿಕ್ಷಕಿಯೋರ್ವರು ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ ಇಲ್ಲಿನ ಖಾಯಂ ಶಿಕ್ಷಕರೇ ವೇತನ ನೀಡುತ್ತಿದ್ದರು. ಪ್ರತಿ ತಿಂಗಳು ತಲಾ 1,500 ರೂ.ವಿನಂತೆ ಹತ್ತು ವರ್ಷಗಳಿಂದ ಇಲ್ಲಿನ ಮೂವರು ಶಿಕ್ಷಕಿಯರು ಗೌರವ ಶಿಕ್ಷಕಿಗೆ ಗೌರವ ಧನ ನೀಡುತ್ತಿದ್ದರು. ಇದೀಗ ಆ ಶಿಕ್ಷಕಿ ಅತಿಥಿ ಶಿಕ್ಷಕಿಯಾಗಿ ನೇಮಕಗೊಂಡಿದ್ದಾಗ್ಯೂ ಖಾಯಂ ಶಿಕ್ಷಕರು ಆ ಹಣವನ್ನು ಮುಂದುವರಿಸಿಕೊಂಡು ಬಂದಿದ್ದು ಇದೊಂದು ಶ್ಲಾಘನೀಯ ಕಾರ್ಯ.

ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ
ಮೂರು ಕೊಠಡಿಗಳನ್ನು ತುರ್ತಾಗಿ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆಯುವ ನಿರೀಕ್ಷೆಯಲ್ಲಿದ್ದೇವೆ.
-ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ

ಮೂರೇ ಕೊಠಡಿಯಲ್ಲಿ ತರಗತಿ
ಕಟ್ಟಡ ಕುಸಿದು ವರ್ಷ ಕಳೆದರೂ ಈ ಕುರಿತು ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯಾಗಲಿ ಗಮನ ಹರಿಸಿಲ್ಲ. 7 ತರಗತಿ ಕೊಠಡಿ ನೆಲಸಮವಾದ ಕಾರಣ ಇದೀಗ ಮೂರೇ ಕೊಠಡಿಯಲ್ಲಿ ತರಗತಿಗಳು ನಡೆಯುತ್ತಿವೆ.
-ಪ್ರತಾಪ್‌ ಮಾಬಿಯಾನ್‌, ಮಾಜಿ ಅಧ್ಯಕ್ಷರು, ಎಸ್‌ಡಿಎಂಸಿ

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next