ಬಸವನಬಾಗೇವಾಡಿ: ಅಣ್ಣ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯ ಬಸವ ಜನ್ಮಸ್ಮಾರಕದಲ್ಲಿ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ ಸಡಗರ-ಸಂಭ್ರಮದಿಂದ ನೆರವೇರಿತು.
ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ಮಾಡುವ ಮೂಲಕ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಾರಾಷ್ಟ್ರ ಬೀಳೂರ-ಸಂಕದ ವಿರಕ್ತಮಠದ ಮುರಘೇಂದ್ರ ಮಹಾಸ್ವಾಮಿಗಳು ಹಾಗೂ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಸಕಲ ವಾದ್ಯ ವೈಭವದೊಂದಿಗೆ ಮಠದಿಂದ ಮೆರವಣಿಗೆ ಮಾಡುತ್ತ ಬಸವಸ್ಮಾರಕಕ್ಕೆ ಬರಮಾಡಿಕೊಳ್ಳಲಾಯಿತು.
ನಂತರ ಶ್ರೀಗಳ ಅಧ್ಯಕ್ಷತೆಯಲ್ಲಿ ಬಾಲ ಬಸವಣ್ಣನ ಬೆಳ್ಳಿಯ ಮೂರ್ತಿಯನ್ನು ಆರೋಗ್ಯ ಸಚಿವ ಶಿವಾನಂದ ಪಾಟೀಲ ತೊಟ್ಟಿಲಿಗೆ ಹಾಕುವ ಮೂಲಕ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸುಮಂಗಲೆಯರು ಜೋಗುಳ ಹಾಡಿ ತೊಟ್ಟಿಲು ತೂಗಿದರು. ನಂತರ ನಾಮಕರಣ ಮಾಡಲಾಯಿತು.
ಕೊಪ್ಪಳ, ರಾಯಚೂರು, ಗದಗ, ಹುಬ್ಬಳ್ಳಿ, ಬಳ್ಳಾರಿ, ಕಲಬುರಗಿ, ದಾವಣಗೆರೆ ಸೇರಿ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ ಭಕ್ತರು ಬಸವಣ್ಣನ ತೊಟ್ಟಿಲು ತೂಗಿ ಪುನೀತರಾದರು.
ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ಮೂಲ ನಂದೀಶ್ವರನಿಗೆ ವಿಶೇಷ ಅಭಿಷೇಕ-ಪೂಜೆ ನೆರವೇರಿತು. ಸಚಿವ ಪಾಟೀಲ ಮೂಲ ನಂದೀಶ್ವರನ ದರ್ಶನ ಪಡೆದು, ಬಸವ ಮೂರ್ತಿಗೆ ಮಾಲಾರ್ಪಣೆ ಮಾಡಿದರು.