Advertisement

ಕ್ಯಾನ್ಸರ್‌ಗೆ 6 ಬಾರಿ ಸಿಕ್ಸರ್‌ ಹೊಡೆದ ಜೇಮ್ಸ್‌ ಬಾಂಡ್‌ ಜಯಂತ್‌!

06:47 PM Aug 01, 2021 | Team Udayavani |

ಹೌದಲ್ಲವಾ?

Advertisement

6 ಬಾಲ್‌ಗೆ 6 ಸಿಕ್ಸರ್‌ ಹೊಡೆದವರು, 6 ಓವರ್‌ನಲ್ಲಿ ಆರು ವಿಕೆಟ್‌ ಪಡೆದವರು, 6 ನಿಮಿಷದಲ್ಲಿ 6 ಗೋಲು ಹೊಡೆದವರು, 6 ಬಾರಿ ಪದಕ ಗೆದ್ದವರು, 6 ಬಾರಿ ಸಚಿವರಾದವರು, 6 ಬಾರಿ ಉಪವಾಸ ಕುಳಿತವರು- ಇಂಥ ಹಿನ್ನೆಲೆಯ ಜನರ ಬಗ್ಗೆ ಖಂಡಿತ ಗೊತ್ತಿರುತ್ತದೆ. ಆದರೆ, 6 ಬಾರಿ ಕ್ಯಾನ್ಸರ್‌ಗೆ ತುತ್ತಾಗಿ ಪ್ರತೀ ಬಾರಿಯೂ “ಪವಾಡ’ ಅನ್ನುವಂತೆ ಗೆಲ್ಲುತ್ತಲೇ ಇರುವವರ ಬಗ್ಗೆ ಗೊತ್ತಾ? ಅಂಥ ಧೀರನೊಬ್ಬನ ಹೋರಾಟದ ಬದುಕಿನ ಕಥೆಯನ್ನು ನೀವೀಗ ಓದಲಿದ್ದೀರಿ…

ಅಂದಹಾಗೆ ಅವರ ಹೆಸರು- ಜಯಂತ್‌ ಕಂಡಾಯ್ ರಾಜಸ್ಥಾನದ ಅಜ್ಮಿàರ್‌ನವರಾದ ಜಯಂತ್‌, ಎಂಬಿಎ ಪದವೀಧರ. ಅವರಿಗೆ ಈಗಿನ್ನೂ 24 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಒಂದಲ್ಲ, ಎರಡಲ್ಲ, ಆರು ಬಾರಿ ಕ್ಯಾನ್ಸರ್‌ ಎದುರಿಸಿ ಗೆಲ್ಲುವುದೆಂದರೆ, ಅದು ಸಾಮಾನ್ಯñ ಸಂಗತಿಯಂತೂ ಅಲ್ಲ.  ಕ್ಯಾನ್ಸರ್‌ ಎಂಬ ಮಹಾಮಾರಿಗೆ ಒಮ್ಮೆ ಸಿಕ್ಕಿಕೊಂಡರೆ ಸಾಕು; ಎಂಥವರೂ ತತ್ತರಿಸಿ ಹೋಗುತ್ತಾರೆ. ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡು ತ್ತಾರೆ. ವೈದ್ಯರು ಹೇಳುವ ಪಥ್ಯ ಅನುಸರಿಸಲು ಆಗದೆ ಕಂಗಾಲಾಗುತ್ತಾರೆ. ಚಿಕಿತ್ಸೆ ಅನಂತರ ಜತೆಯಾಗುವ ಸೈಡ್‌ ಎಫೆಕ್ಟ್ಗಳನ್ನೂ ಎದುರಿಸಲಾಗದೆ ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಕೆಲವರು ಕೊರಗಿನಿಂದ, ಹಲವರು ಹೆದರಿಕೆಯಿಂದ ಸತ್ತುಹೋಗುತ್ತಾರೆ.

ವಾಸ್ತವ ಹೀಗಿರುವಾಗ ಕ್ಯಾನ್ಸರ್‌ ವಿರುದ್ಧ 6 ಬಾರಿ ತೊಡೆತಟ್ಟಿ ನಿಲ್ಲಲು, ಪ್ರತೀ ಬಾರಿಯೂ ಗೆಲುವು ಸಾಧಿಸಲು ಜಯಂತ್‌ಗೆ ಸಾಧ್ಯವಾಗಿದ್ದು ಹೇಗೆ? ಚಿಕಿತ್ಸೆಗೆ ಈತ ಹಣ ಹೊಂದಿಸಿಕೊಂಡಿದ್ದು ಹೇಗೆ? ಈತ ಲಕ್ಷಾಧಿಪತಿಯ ಮಗನಾ? ಜೀವ ಹಿಂಡುವ ಕೀಮೋಥೆರಪಿ, ಆಪರೇಷನ್‌ ಗಳಿಂದ ಪಾರಾಗಲು ಈತ ಅನುಸರಿಸಿದ ಸೂತ್ರ ಯಾವುದು? – ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಉತ್ತರವನ್ನು ಜಯಂತ್‌ ಅವರ ಮಾತುಗಳಲ್ಲೇ ಕೇಳ್ಳೋಣ. ಓವರ್‌ ಟು ಜಯಂತ್‌…

****

Advertisement

ನನ್ನ ತಂದೆ ಅಶೋಕ್‌ ಕಂಡಾಯ್, ಸರಕಾರಿ ನೌಕರ. ಅಮ್ಮ ಗೃಹಿಣಿ. ನಾವು ಮೂವರು ಮಕ್ಕಳು; ಅಕ್ಕ, ತಮ್ಮ , ನಾನು. “ಜನ ನಮ್ಮಿಂದ ಅನ್ನ ಕಿತ್ಕೊàಬಹುದು, ಅಕ್ಷರ ಕಿತ್ಕೊಳ್ಳೋಕೆ ಆಗಲ್ಲ. ಕಾಸು ಕಿತ್ಕೊàಬಹುದು, ಜ್ಞಾನ ಕಿತ್ಕೊಳ್ಳೋಕೆ ಆಗಲ್ಲ. ಕಲಿತ ವಿದ್ಯೆ ನಿಮ್ಮನ್ನು ಸದಾ ಕಾಪಾಡುತ್ತೆ. ಶ್ರದ್ಧೆಯಿಂದ ಓದಬೇಕು. ಯಾವ ಕಾರಣಕ್ಕೂ ಶಾಲೆ ತಪ್ಪಿಸಬಾರದು’- ಇದು, ಹೆತ್ತವರು ಹೇಳಿದ ಕಿವಿಮಾತು. ನಾವು ಮೂವರೂ ಈ ಮಾತನ್ನು ಪಾಲಿಸಿದೆವು. ಪರಿಣಾಮ; ಪ್ರತೀ ವರ್ಷವೂ ಅಟೆಂಡೆನ್ಸ್‌ನಲ್ಲೂ ಪರೀಕ್ಷೆಯಲ್ಲೂ ನೂರಕ್ಕೆ ನೂರು! ಅಪ್ಪ ಆಗೆಲ್ಲ ಹೆಮ್ಮೆಯಿಂದ-“ನಾನು ಮಕ್ಕಳಿಗಾಗಿ ಆಸ್ತಿ ಮಾಡಿಲ್ಲ, ಮಕ್ಕಳೇ ನನ್ನ ಆಸ್ತಿ’ ಎನ್ನುತ್ತಿದ್ದರು.

ಅದು 2013ರ ಮಾತು. ನಾನಾಗ 10ನೇ ತರಗತಿಯಲ್ಲಿದ್ದೆ. ಅದೊಮ್ಮೆ ಕುತ್ತಿಗೆಯ ಎಡಭಾಗದಲ್ಲಿ ಗಂಟು ಕಾಣಿಸಿ ಕೊಂಡಿತು. ನೋವಾಗಲಿ, ಕೆರೆತವಾಗಲಿ ಇರಲಿಲ್ಲ. ಅಲರ್ಜಿ ಕಾರಣಕ್ಕೆ ಹೀಗಾಗಿರಬಹುದು ಎಂದು ಅದನ್ನು ನಿರ್ಲಕ್ಷಿಸಿದೆ. ದಿನಗಳೆದಂತೆ ಅದು ದಪ್ಪವಾಗತೊಡಗಿತು. ತತ್‌ಕ್ಷಣವೇ ಆಸ್ಪತ್ರೆಗೆ ಹೋದರೆ, ಹಲವು ಬಗೆಯ ಪರೀಕ್ಷೆ ನಡೆಸಿದ ವೈದ್ಯರು, “ಇದು ಕ್ಯಾನ್ಸರ್‌ ಹುಣ್ಣು. ಈಗಿನ್ನೂ ಫ‌ಸ್ಟ್‌ ಸ್ಟೇಜ್‌ನಲ್ಲಿದೆ. ತತ್‌ಕ್ಷಣ ಟ್ರೀಟೆ¾ಂಟ್‌ ಶುರು ಮಾಡೋಣ’ ಅಂದರು. ಮರುದಿನವೇ ಅಜ್ಮಿàರ್‌ನ ಭಗವಾನ್‌ ಮಹಾವೀರ ಕ್ಯಾನ್ಸರ್‌ ಆಸ್ಪತ್ರೆಗೆ ದಾಖಲಾದೆ. ಅನಂತರ ನಾಲ್ಕು ತಿಂಗಳ ಕಾಲ ಆಸ್ಪತ್ರೆ ವಾಸ, 12 ಸುತ್ತಿನ ಕೀಮೋಥೆರಪಿ ನಡೆಯಿತು. ಅದರ ಮಧ್ಯೆಯೇ ನನ್ನ ಓದೂ ಸಾಗಿತು. ಕಡೆಗೊಂದು ದಿನ, “ನೀನೀಗ ಕ್ಯಾನ್ಸರ್‌ ಮುಕ್ತ. ಮನೆಗೆ ಹೋಗಬಹುದು’ ಎಂದು ವೈದ್ಯರು ಘೋಷಿಸಿದರು. ಅನಂತರ ಜಿÇÉೆಗೇ ಮೊದಲಿಗನಾಗಿ 10 ನೇ ತರಗತಿ ಮುಗಿಸಿದೆ.

2015ರಲ್ಲಿ, ಕುತ್ತಿಗೆಯ ಬಲಭಾಗದಲ್ಲಿ ಮತ್ತೆ ಹುಣ್ಣು ಕಾಣಿಸಿಕೊಂಡಿತು. ಈ ಹಿಂದಿನ ಸಂದರ್ಭ ನೆನಪಿತ್ತಲ್ಲ; ಹೀಗಾಗಿ ತತ್‌ಕ್ಷಣವೇ ಆಸ್ಪತ್ರೆಗೆ ಧಾವಿಸಿದೆವು. ಪರೀಕ್ಷಿಸಿದ ವೈದ್ಯರು-“ಅಯ್ಯೋ ಇದೇನ್ರೀ, ಕ್ಯಾನ್ಸರ್‌ ಮತ್ತೆ ಕಾಣಿಸಿಕೊಂಡಿದೆ!’ ಅಂದರು. 2015ರ ಫೆ.14 ರಂದು ಉಳಿದವರೆಲ್ಲ ವ್ಯಾಲೆಂಟೈನ್‌ ಡೇ ನೆಪದಲ್ಲಿ ಮೈಮರೆತಿದ್ದಾಗ, ಕ್ಯಾನ್ಸರ್‌ಗೆ ನನ್ಮೆàಲೆ ಲವ್ವಾಗಿದೆ ಅಂದುಕೊಂಡು ಆಸ್ಪತ್ರೆಗೆ ದಾಖಲಾದೆ. ಮತ್ತೆ ನಾಲ್ಕು ತಿಂಗಳು ಆಸ್ಪತ್ರೆ ವಾಸ. ಈ ಬಾರಿ 60 ಸಲ ರೇಡಿಯೋಥೆರಪಿ ಚಿಕಿತ್ಸೆ ನೀಡಿದ ವೈದ್ಯರು-” ಕ್ಯಾನ್ಸರ್‌ ಹೋಯ್ತು. ನೀವಿನ್ನು ಮನೆಗೆ ಹೊರಡಿ’ ಅಂದರು. ಕೆಲವು ದಿನಗಳ ಅನಂತರ ಪಿಯುಸಿ ಪರೀಕ್ಷೆ ಬರೆದೆ. ಜಿಲ್ಲೆಗೆ ಮೊದಲಿಗನಾಗಿ ಪಾಸಾದೆ.

ಮೂರನೇ ಬಾರಿಗೆ ಕ್ಯಾನ್ಸರ್‌ ಜತೆಯಾದದ್ದು 2017ರಲ್ಲಿ. ನಾನಾಗ ದಿಲ್ಲಿ ವಿವಿಯಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದೆ. ಮೇಲಿಂದ ಮೇಲೆ ಹೊಟ್ಟೆ ನೋವಿನ ಸಮಸ್ಯೆ ಜತೆಯಾದಾಗ ಆಸ್ಪತ್ರೆಗೆ ಹೋದರೆ, ವೈದ್ಯರು ಅದಕ್ಕೆ “ಪ್ಯಾಂಕ್ರಿಯಸ್‌ ಕ್ಯಾನ್ಸರ್‌’ ಎಂಬ ಹೆಸರು ಕೊಟ್ಟರು. ಕ್ಯಾನ್ಸರ್‌ ಹುಣ್ಣು ಒಂದು ಸೆಂಟಿ ಮೀಟರ್‌ನಷ್ಟು ಮಾತ್ರ ಇದೆ. ಆಪರೇಷನ್‌ ಮೂಲಕ ಅದನ್ನು ತೆಗೆದುಬಿಡೋಣ ಅಂದರು. ಆದರೆ ಆಪರೇಷನ್‌ ಮುಗಿದಾಗ, 9 ಸೆಂಟಿಮೀಟರ್‌ನಷ್ಟು ಉದ್ದಕ್ಕೆ ಗಾಯವಾಗಿತ್ತು. ಅಬ್ಟಾ, ಅಂತೂ ಮೂರನೇ ಸಲ ಕೂಡ ಕ್ಯಾನ್ಸರ್‌ನಿಂದ ಬಚಾವ್‌ ಆದೆ ಅಂದುಕೊಂಡೆ.

ಡಿಗ್ರಿ ಮುಗಿಯುವ ವೇಳೆಗೆ, ಕ್ಯಾನ್ಸರ್‌ಗೆ ತುತ್ತಾದವರು ಅನುಭವಿಸುವ ಕಷ್ಟಗಳನ್ನು, ಅವರಿಗೆ ಎದುರಾಗುವ ತೊಂದರೆಗಳನ್ನು ಪ್ರತ್ಯಕ್ಷ ಕಂಡಿದ್ದೆ. ನನಗೇನೋ ತಂದೆಯ ಶ್ರೀರಕ್ಷೆಯಿತ್ತು. ಆದರೆ ಎಲ್ಲರಿಗೂ ಅಂಥ ಅದೃಷ್ಟ ಇರುವುದಿಲ್ಲವಲ್ಲ; ಅಂಥವರಿಗೆ ಸಹಾಯ ಮಾಡಲೆಂದೇ ಸಿಟಿ ಸ್ಟಾರ್‌ ಕ್ಲಬ್‌ ಎಂಬ ಎನ್‌ಜಿಒ ಆರಂಭಿಸಿದೆ. ಅದರ ಮೂಲಕ ಕ್ಯಾನ್ಸರ್‌ ರೋಗಿಗಳಿಗೆ ಸಹಾಯ ಮಾಡುವ ತಂಡ ಕಟ್ಟಿದೆ. ಹೀಗಿದ್ದಾಗಲೇ 2019 ರಲ್ಲಿ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಮತ್ತೆ ಆಸ್ಪತ್ರೆಗೆ ಓಡಿದೆ. ಪರೀಕ್ಷಿಸಿದ ವೈದ್ಯರ ಮುಖ ಸಪ್ಪಗಿತ್ತು. ಕಾರಣ, ಪ್ಯಾಂಕ್ರಿಯಸ್‌ ಮತ್ತೆ ಅಮರಿಕೊಂಡಿತ್ತು. ಪರಿಣಾಮ, ಮತ್ತೆ ಆಸ್ಪತ್ರೆ ವಾಸ, ಕಿಮೋಥೆರಪಿ, ರೇಡಿಯೋಥೆರಪಿ.. ಕಡೆಗೊಮ್ಮೆ ಕ್ಯಾನ್ಸರ್‌ ಹೋಯ್ತು ಎಂಬ ಘೋಷಣೆ, ನಾಲ್ಕನೇ ಬಾರಿಯೂ ಸಾವು ಗೆದ್ದ ಭಾವದೊಂದಿಗೆ ಮನೆಗೆ ಪಯಣ…

ಕ್ಯಾನ್ಸರ್‌ ಮತ್ತೆ ನನ್ನ ಹೆಗಲು ತಟ್ಟಿದ್ದು 2020ರಲ್ಲಿ. ಈ ಬಾರಿ ಅಹ್ಮದಾಬಾದ್‌ ನಲ್ಲಿರುವ  ಗುಜರಾತ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಗೆಲುವು ನನ್ನದೇ ಎನ್ನುತ್ತಾ ಮನೆಗೆ ವಾಪಸಾಗಿ ನಾಲ್ಕು ತಿಂಗಳು ಕಳೆದಿಲ್ಲ; ಮತ್ತೆ ಕಿಬ್ಬೊಟ್ಟೆ  ಭಾಗದಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡಿತು. ಪರೀಕ್ಷಿಸಿದ ವೈದ್ಯರು- “ಛೆ, ಮತ್ತೆ ಕ್ಯಾನ್ಸರ್‌’ ಅಂದರು. ಈ ಬಾರಿ ಅಸ್ಥಿಮಜ್ಜೆ ಕಸಿ( ಬೋನ್‌ ಮಾರೋ ಟ್ರಾನ್ಸ್‌ ಪ್ಲಾಂಟ್) ಮಾಡಿದರು. ಯಸ್‌, ಯಮರಾಜನ ಹಿಡಿತದಿಂದ ನಾನು 6ನೇ ಬಾರಿಯೂ ತಪ್ಪಿಸಿಕೊಂಡೆ!

ಕ್ಯಾನ್ಸರ್‌ಗೆ ಚಿಕಿತ್ಸೆ ಎಂದು ರೇಡಿಯೋಥೆರಪಿ, ಕಿಮೋಥೆರಪಿಗೆ ಒಳಗಾದಾಗ ಆಗುವ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಜತೆಗೆ ಚಿಕಿತ್ಸೆಯ ಸೈಡ್‌ ಎಫೆಕ್ಟ್ ಎಂಬಂತೆ ತಲೆ ಕೂದಲು ಉದುರುತ್ತದೆ, ಧ್ವನಿ ಒಡೆಯುತ್ತದೆ. ಕೆಲವೊಮ್ಮೆ ಆಹಾರದ ರುಚಿಯೇ ತಿಳಿಯುವುದಿಲ್ಲ. ತಲೆನೋವು, ತಲೆಸುತ್ತು, ನಿದ್ರಾಹೀನತೆ,  ಸುಸ್ತು, ಜ್ವರ, ವಾಂತಿ… ಮುಂತಾದ ತೊಂದರೆಗಳು ಬಿಡದೆ ಕಾಡುತ್ತವೆ. ಕ್ಯಾನ್ಸರ್‌ಗೆ 6 ಬಾರಿ ಚಿಕಿತ್ಸೆ ಪಡೆದೆನಲ್ಲ; ಅಷ್ಟೂ ಸಂದರ್ಭದಲ್ಲಿ ಮೇಲೆ ಹೇಳಿದ ಎಲ್ಲ ಸಮಸ್ಯೆಗಳು ನನ್ನನ್ನು ದಿನವೂ ಬೇಟೆಯಾಡಿದವು. ಕೆಲವೊಮ್ಮೆ ಹುಚ್ಚು ಹಿಡಿದಂತೆ ಆಗುತ್ತಿತ್ತು. ಆಗೆಲ್ಲ ನನಗೆ ಸಮಾಧಾನ ಹೇಳುತ್ತಿದ್ದವರು ನನ್ನ ತಂದೆ. “ಸ್ಕೂಲ್‌ ನ ಪರೀಕ್ಷೆಗಳಲ್ಲಿ ರ್‍ಯಾಂಕ್‌ ಬಂದವನು ನೀನು. ಲೈಫ್ನ ಪರೀಕ್ಷೆಯಲ್ಲಿ ಕೂಡ ರ್‍ಯಾಂಕ್‌ ಬರ್ತೀಯ. ಅದೆಷ್ಟೇ ಖರ್ಚಾದರೂ ಪರವಾಗಿಲ್ಲ, ನಿನ್ನನ್ನು ಉಳಿಸಿಕೊಳ್ತೇನೆ, ಧೈರ್ಯವಾಗಿರು’ ಅನ್ನುತ್ತಿದ್ದರು.

ಇಲ್ಲಿ ಬಂಧುಗಳು ಮತ್ತು ಗೆಳೆಯರ ಬಗ್ಗೆಯೂ ನಾಲ್ಕು ಮಾತು ಹೇಳಬೇಕು. ನನಗೆ ಕ್ಯಾನ್ಸರ್‌ ಎಂದು ಗೊತ್ತಾಗುತ್ತಿ ದ್ದಂತೆಯೇ, ಧನಸಹಾಯ ಮಾಡಬೇಕಾಗು ತ್ತದೆ ಎಂಬ ಆತಂಕದಿಂದ ಬಂಧುಗಳು ದೂರವಾದರು. ಮಾತುಬಿಟ್ಟರು. ನನಗೆ ನಾಲ್ಕನೇ ಬಾರಿ ಕ್ಯಾನ್ಸರ್‌ ಅಮರಿಕೊಂಡ ಸುದ್ದಿ ತಿಳಿದ ಕೆಲವರು, ಅವನು ಸತ್ತುಹೋದ ಎಂದೂ ಹೇಳಿಬಿಟ್ಟರು. ಕ್ಯಾನ್ಸರ್‌ ರೋಗಿಯಿಂದ ಏನುಪಯೋಗ ಅನ್ನುತ್ತಾ ಗೆಳೆಯರೂ ಬಿಟ್ಟುಹೋದರು. ಆದರೆ ಕಲಿತ ವಿದ್ಯೆ ನನ್ನ ಕೈ ಬಿಡಲಿಲ್ಲ.

ಈಗ ಏನಾಗಿದೆ ಗೊತ್ತೇ? ಕ್ಯಾನ್ಸರ್‌ ನ ಕಪಿಮುಷ್ಟಿಯಿಂದ ನಾನು ಕಳಚಿಕೊಂಡಿದ್ದೇನೆ. 2 ಸ್ಟಾರ್ಟ್‌ಅಪ್‌ ಆರಂಭಿಸಿದ್ದೇನೆ. ಹತ್ತಾರು ಮಂದಿಗೆ ಕೆಲಸ ಕೊಟ್ಟಿದ್ದೇನೆ. ಎನ್‌ಜಿಒ ಮೂಲಕ ನೂರಾರು ಜನರಿಗೆ ನೆರವಾಗುತ್ತಿದ್ದೇನೆ. ನನ್ನ ಆತ್ಮಚರಿತ್ರೆಯೂ ಸೇರಿದಂತೆ 3 ಪುಸ್ತಕ ಬರೆದಿದ್ದೇನೆ. ಕ್ಯಾನ್ಸರ್‌ ರೋಗಿಗಳಿಗೆ ಕೌನ್ಸೆಲಿಂಗ್‌ ಮಾಡುತ್ತೇನೆ. ಯುಟ್ಯೂಬ್‌ ಚಾನೆಲ್‌ ಮಾಡಿ ದ್ದೇನೆ. ವ್ಯಕ್ತಿತ್ವ ವಿಕಸನ ತರಗತಿಗಳಲ್ಲಿ ಭಾಷಣ ಮಾಡುತ್ತೇನೆ. ಈ ಮೊದಲು ಕ್ಯಾನ್ಸರ್‌ನಿಂದ ಜಯಂತ ಸತ್ತುಹೋದ ಎಂದು ಸುದ್ದಿ ಹಬ್ಬಿಸಿದ್ದ ಬಂಧುಗಳೇ, ಈ ಹುಡುಗ ನಮ್ಮ ರಿಲೇಟಿವ್‌ ಕಣ್ರೀ ಎಂದು ಹೊಗಳುತ್ತಿದ್ದಾರೆ. “ಮನೆಗೆ ಬಂದು ಹೋಗಪ್ಪಾ’ ಎಂದು ಕರೆಯುತ್ತಿದ್ದಾರೆ. ಗೆಳೆಯರು, ಯಾವುದೋ ನೆಪ ಮಾಡಿಕೊಂಡು ಮೆಸೇಜ್‌ ಕಳಿಸುತ್ತಾರೆ. ಅಂಥ ಸಂದರ್ಭದಲ್ಲೆಲ್ಲ ಅಪ್ಪ ಹೇಳಿದ್ದ ಮಾತುಗಳು ನೆನಪಾಗುತ್ತವೆ: “ಜನ ನಿನ್ನಿಂದ ಕಾಸು ಕಿತ್ಕೊàಬಹುದು, ಆದರೆ ನಿನ್ನ ವಿದ್ಯೆಯನ್ನು ಕಿತ್ಕೊಳ್ಳಲು ಆಗಲ್ಲ…’

ನನ್ನ ಕಥೆ ಕೇಳಿದವರೆಲ್ಲ ಕುತೂಹಲದಿಂದ ಕೇಳುತ್ತಾರೆ: “ಕ್ಯಾನ್ಸರ್‌ನ  ಕಾರಣಕ್ಕೇ ಸಾವಿರಾರು ಜನ ಆರೆಂಟು ತಿಂಗಳಲ್ಲಿ ಸತ್ತುಹೋಗುತ್ತಾರೆ. ಆದರೆ ನೀವು ಆರು ಸಲ ಕ್ಯಾನ್ಸರ್‌ ಗೆದ್ದೇ ಅನ್ನುತ್ತೀರಿ, ಕ್ಯಾನ್ಸರ್‌ನ ನಿಜಕ್ಕೂ ಗೆಲ್ಲಬಹುದಾ?’ ಅದಕ್ಕೆ ನನ್ನ ಉತ್ತರವಿಷ್ಟೇ: ಕ್ಯಾನ್ಸರ್‌ ಜತೆಯಾಗಿದೆ ಎಂದು ಗೊತ್ತಾದ ತತ್‌ಕ್ಷಣ ಚಿಕಿತ್ಸೆ ಪಡೆಯಬೇಕು. ವೈದ್ಯರ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಚಿಕಿತ್ಸೆಗೆ ಹಣದ ವ್ಯವಸ್ಥೆ ಮಾಡಿಕೊಳ್ಳಬೇಕು. ಕ್ಯಾನ್ಸರ್‌ನ ಅಡ್ಡ ಪರಿಣಾಮಗಳಿಗೆ ಹೆದರಬಾರದು. ಜ್ವರ, ಕೆಮ್ಮು, ತಲೆನೋವಿನಂತೆ ಕ್ಯಾನ್ಸರ್‌ ಕೂಡ ಒಂದು ಕಾಯಿಲೆ ಅಷ್ಟೇ. ಇದೂ ಬೇಗ ವಾಸಿಯಾಗುತ್ತೆ ಎಂದು ನಮಗೆ ನಾವೇ ಧೈರ್ಯ ಹೇಳಿಕೊಳ್ಳಬೇಕು. ಇಷ್ಟಾದರೆ ಖಂಡಿತ ಕ್ಯಾನ್ಸರ್‌ ಜಯಿಸಬಹುದು. ಈ ಮಾತಿಗೆ ಸಾಕ್ಷಿಯಾಗಿ ನಾನೇ ಇದ್ದೇನಲ್ಲ, ಅನ್ನುತಾನೆ ಜಯಂತ್‌.

ಐದನೇ ಬಾರಿ ಕ್ಯಾನ್ಸರ್‌ಗೆ ತುತ್ತಾದಾಗ, “ನಮ್ಮ ಪ್ರಯತ್ನ ವನ್ನು ನಾವು ಮಾಡ್ತೇವೆ. ಯಾವ ಭರವಸೆಯನ್ನೂ ಕೊಡಲು ಆಗಲ್ಲ. ಪವಾಡ ನಡೆದರೆ ಮಾತ್ರ ಜೀವ ಉಳಿಯಬಹುದು’ ಅಂದಿದ್ದರು ಡಾಕ್ಟರ್‌. ಕಡೆಗೊಮ್ಮೆ ಪವಾಡ ನಡೆದೇ ಬಿಟ್ಟಿತು. ನಾನು ಬದುಕುಳಿದೆ. ಆಗ ಡಾಕ್ಟರ್‌ “ನೋಡಯ್ನಾ, ಈ ಕ್ಷಣಕ್ಕೆ ನಾನೇ ದೇವರು! ನಾನು ಚಿಕಿತ್ಸೆ ನೀಡಿದ್ದಕ್ಕೇ ನೀನು ಬದುಕಿದ್ದೀಯ’ ಎಂದು ತಮಾಷೆ ಮಾಡಿದ್ದನ್ನು ನೆನಪಿಸಿ ಕೊಳ್ಳುವ ಜಯಂತ್‌, ಈ ಕಾಯಿಲೆ ವಿರುದ್ಧ ಹೋರಾಡಿ ಗೆಲ್ಲುವವರ ಸಂಖ್ಯೆ ಹೆಚ್ಚಾಗಲಿ ಅನ್ನುವುದು ನನ್ನ ಪ್ರಾರ್ಥನೆ ಎನ್ನುತ್ತಾ ತಮ್ಮ ಮಾತಿಗೆ ಫ‌ುಲ್‌ ಸ್ಟಾಪ್‌ ಹಾಕಿದರು.

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವುದು ಅಂದರೆ ತಮಾಷೆ ಯಲ್ಲ. ಅಪ್ಪ ಒಮ್ಮೆ ಕೂಡ ಆ ಬಗ್ಗೆ ಯೋಚಿಸಲಿಲ್ಲ. ತಮ್ಮ ಸಂಪಾದನೆಯನ್ನೆಲ್ಲ ನನ್ನ ಚಿಕಿತ್ಸೆಗೆ ಸುರಿದರು. ತಂದೆಯ ರೂಪದಲ್ಲಿ ನನಗೆ ದೇವರು ಕಾಣಿಸಿದ ಎನ್ನುವ ಜಯಂತ್‌, ತಮ್ಮ ಮೇಲ್‌ ಐಡಿಯಲ್ಲಿ 007 ಸೇರಿಸಿಕೊಂಡಿದ್ದಾರೆ! ಏನಪ್ಪಾ ಇದೂ ಅಂದರೆ, 007 ಅಂದಾಕ್ಷಣ ಎಲ್ಲರಿಗೂ ಜೇಮ್ಸ್ ಬಾಂಡ್‌ ನೆನಪಾಗ್ತಾನೆ ಅಲ್ಲವಾ? ಯಾವುದೇ ಸಮಸ್ಯೆ ಎದುರಾದರೂ ಈಗ ನಾನೂ ಜೇಮ್ಸ್ ಬಾಂಡ್‌ ಥರಾನೇ ಎದುರಿಸಬಲ್ಲೇ ಅನ್ನಿಸ್ತು. ಹೀಗಾಗಿ… ಎಂದು ನಗುತ್ತಾರೆ. ಕ್ಯಾನ್ಸರ್‌ ನ ವಿರುದ್ಧ 6 ಬಾರಿ ಸಿಕ್ಸರ್‌ ಹೊಡೆದು ಗೆದ್ದಿರುವ ಈ ಸಾಹಸಿಗೆ ಅಭಿನಂದನೆ ಹೇಳಬೇಕೆಂದರೆ- jkandoi007@gmail.com

 

-ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next