ಬೆಂಗಳೂರು:ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಬಿಎಸ್ ಪ್ರಹ್ಲಾದ್ ಬಾಬುಗೆ ಟಿಕೆಟ್ ನೀಡಿದ್ದಕ್ಕೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಪಕ್ಷದ ಪರ ದುಡಿಯದ, ಯಾರ ಪರಿಚಯವೂ ಇಲ್ಲದ ವ್ಯಕ್ತಿಗೆ ಜಯನಗರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರದ ಬಿಜೆಪಿ ನಾಯಕರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ ಎಂದು ಮಾಧ್ಯಮದ ವರದಿ ಹೇಳಿದೆ.
ಜಯನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಆಯೋಗ ಮುಂದೂಡಿತ್ತು. ಅಲ್ಲದೇ ಮರು ಚುನಾವಣೆಗಾಗಿ ಬಿಜೆಪಿ ವಿಜಯ್ ಕುಮಾರ್ ಅವರ ಸಹೋದರ ಬಿಎನ್ ಪ್ರಹ್ಲಾದ್ ಬಾಬುಗೆ ಟಿಕೆಟ್ ನೀಡಿರುವುದು ವಿರೋಧಕ್ಕೆ ಕಾರಣವಾಗಿದೆ.
ಪಟ್ಟಾಭಿರಾಮ ನಗರ ವಾರ್ಡ್ ಮಾಜಿ ಕಾರ್ಪೋರೇಟರ್ ಸಿಕೆ ರಾಮಮೂರ್ತಿ, ಭೈರಸಂದ್ರ ವಾರ್ಡ್ ಕಾರ್ಪೋರೇಟರ್ ನಾಗರಾಜ್, ಮಾಜಿ ಮೇಯರ್ ಎಸ್ ಕೆ ನಟರಾಜ್ ಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಕಾಂಗ್ರೆಸ್ ನಿಂದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ, ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜೂನ್ 11ರಂದು ಜಯನಗರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಜೂ.13ಕ್ಕೆ ಮತಎಣಿಕೆ ನಡೆಯಲಿದೆ.