ವಿಜಯಪುರ: ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎ ಮೀಸಲಾತಿಗೆ ಸೇರಿಸುವವರೆಗೆ ನಾನು ಹೋರಾಟದಿಂದ ವಿಶ್ರಮಿಸಲಾರೆ. ನಮ್ಮ ಸಮುದಾಯಕ್ಕೆ ಮೀಸಲು ಕಲ್ಪಿಸುವ ಕುರಿತು ಹಲವು ಬಾರಿ ಮಾಡಿದ ಮನವಿ, ನಡೆಸಿದ ಹೋರಾಟಗಳು ಹಾಗೂ ಆಗೆಲ್ಲ ಸರ್ಕಾರ ನೀಡಿದ ಭರವಸೆಗಳು ಹುಸಿಯಾಗಿವೆ. ಹೀಗಾಗಿ ಈ ಬಾರಿಯ ಹೋರಾಟ ಮೀಸಲಾತಿ ಸಿಗುವವರೆಗೆ ನಿರಂತರವಾಗಿ ನಡೆಯಲಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀ ಪುನರುಚ್ಚರಿಸಿದ್ದಾರೆ.
ಮಂಗಳವಾರ ನಗರದ ಸಿದ್ದೇಶ್ವರ ಕಲಾ ಭವನದಲ್ಲಿ ತಮ್ಮ ಸಾನ್ನಿಧ್ಯದಲ್ಲಿ ಅಖೀಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಏರ್ಪಡಿಸಿದ್ದ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದರು. ಕೃಷಿಯನ್ನೇ ನಂಬಿರುವ ಪಂಚಮಸಾಲಿ ಸಮಾಜದ ಜನರು ಅತ್ಯಂತ ಮುಗªರು. ಶ್ರಮಿಕರು, ಕಾರ್ಮಿಕರ ಸಂಖ್ಯೆಯೇ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಬೆರಳಣಿಕೆಯಷ್ಟು ಜನ ಮಾತ್ರ ಶೈಕ್ಷಣಿಕ, ಔದ್ಯೋಗಿಕ ಹಾಗೂ ಆರ್ಥಿಕವಾಗಿ ಮುಂದುವರಿದಿದ್ದಾರೆ. ಹೀಗಾಗಿ ಹಿಂದುಳಿದ ನಮ್ಮ ಸಮುದಾಯವನ್ನು ಪ್ರವರ್ಗ 2ಎ ಪಟ್ಟಿಗೆ ಸೇರಿಸಲು ಆಗ್ರಹಿಸಿ ಕಳೆದ 27 ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಲೇ ಇದ್ದೇವೆ. ಆಯಾ ಕಾಲದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಮಾತ್ರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ದೂರಿದರು.
ಇದೀಗ ಮಾಡು ಇಲ್ಲವೇ ಮಡಿ ಘೋಷಣೆಯೊಂದಿಗೆ ಪಂಚಲಕ್ಷ ಪಾದಯಾತ್ರೆ ಮೂಲಕ ಬೆಂಗಳೂರಿಗೆ ತೆರಳಿ, ಅರಮನೆ ಮೈದಾನದಲ್ಲಿ 10 ಲಕ್ಷ ಜನರೊಂದಿಗೆ ನಡೆಸಿದ ಐತಿಹಾಸಿಕ ಸಮಾವೇಶ ನಡೆಸಲಾಗಿದೆ. ಉಪವಾಸ ಸತ್ಯಾಗ್ರಹ ಹೀಗೆ ಹಲವು ಸ್ವರೂಪದ ಚಳುವಳಿಗಳು ಸರಕಾರ ಕಣ್ತೆರೆಯುವಂತೆ ಮಾಡಿದೆ. ಸಮಾಜದ ಜನರ ಒಗ್ಗಟ್ಟಿನ ಫಲವಾಗಿ ಹೋರಾಟ ಯಶಸ್ವಿಯಾಗಿದೆ. ಇದಕ್ಕಾಗಿ ನಿಮ್ಮ ಸಹಕಾರಕ್ಕೆ ಧನ್ಯವಾದಗಳನ್ನು ಸಮರ್ಪಿಸಲು ಶರಣು ಶರಣಾರ್ಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರ 6 ತಿಂಗಳ ಸಮಯ ಕೇಳಿದೆ. ನೀಡಿದ ಗಡುವಿನಲ್ಲಿ 2ಎ ಮೀಸಲು ಸೌಲಭ್ಯ ಕಲ್ಪಿಸದಿದ್ದಲ್ಲಿ 20 ಲಕ್ಷ ಜನ ಬೆಂಗಳೂರು ಛಲೋ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಅಖೀಲ ಭಾರತ ಪಂಚಮಸಾಲಿ ಸಮಾಜದ ಅಧ್ಯಕ್ಷ ಡಾ| ವಿಜಯಾನಂದ ಕಾಶಪ್ಪನವರ ಮಾತನಾಡಿ, ಪಂಚಮಸಾಲಿ ಸಮುದಾಯದ ಮೀಸಲು ಸೌಲಭ್ಯದ ಹೋರಾಟಕ್ಕೆ ಪಂಚಮಸಾಲಿ ಸಮಾಜದ ತವರು, ರಾಜಧಾನಿ ಎನಿಸಿರುವ ವಿಜಯಪುರ ಜಿಲ್ಲೆ ಪ್ರೇರಣೆ ನೀಡಿದೆ. ವಿಜಯಪುರ ಜಿಲ್ಲೆಯ ಜನರು ಅಗತ್ಯದ ಸಂದರ್ಭದಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ನಿಣಾಯಕ ಹೋರಾಟಕ್ಕೂ ಸಿದ್ಧ ಎಂಬುದನ್ನು ಅಖಂಡ ವಿಜಯಪುರ ಜಿಲ್ಲೆಯ ಜನ ಮನವರಿಕೆ ಮಾಡಿಕೊಟ್ಟಿದ್ದೀರಿ. ಇದಕ್ಕಾಗಿ ನೇರ ಹಾಗೂ ಪರೋಕ್ಷ ಸಹಕಾರ ನೀಡಿದ ಸಮಾಜದ ಎಲ್ಲರಿಗೂ ನಾವುಗಳು ಋಣಿಯಾಗಿದ್ದೇವೆ ಎಂದರು.
ಡಾ| ಬಸನಗೌಡ ಪಾಟೀಲ (ನಾಗರಾಳ ಹುಲಿ), ಡಾ| ಸಿ.ಎಸ್. ಸೋಲಾಪುರ, ರಾಜುಗೌಡ ಪಾಟೀಲ (ಜಾಲಗೇರಿ), ಮಲ್ಲನಗೌಡ ಪಾಟೀಲ, ಅಂಬರೀಶ ನಾಗೂರ, ಶಂಕರಗೌಡ ಬಿರಾದಾರ, ಎಂ.ಎಸ್. ರುದ್ರಗೌಡರ, ಶ್ರೀಶೈಲ ಬುಕ್ಕಾಣಿ, ನಿಂಗನಗೌಡ ಸೋಲಾಪುರ, ವಿದ್ಯಾರಾಣಿ ತುಂಗಳ, ಇ.ಎಸ್. ನಿರಂಜನಕುಮಾರ, ಶಿವಕುಮಾರ ಮೇಟಿ ಮಾತನಾಡಿದರು. ಅಪ್ಪಾಸಾಬ ಯರನಾಳ, ಶರಣಪ್ಪ ಜಂಬಗಿ, ಸಿದ್ದು ಅವಟಿ, ಮಂಜು ನಿಡೋಣಿ, ಸಂತೋಷ ಇಂಡಿ, ಅಶೋಕ ಚಳ್ಳಗಿ, ಸದಾಶಿವ ಅಳ್ಳಿಗಿಡದ, ಬಸಮ್ಮ ಗುಜರಿ, ಜ್ಯೋತಿ ಪಾಗಾದ, ಮುತ್ತಕ್ಕ ಪಾಗಾದ, ಪಾರ್ವತಿ ಮಸೂತಿ, ಶೋಭಾ ಬಿರಾದಾರ, ಕಾವೇರಿ ಪಾಟೀಲ, ಕಮಲಾ ಗೆಜ್ಜಿ, ಜಯಶ್ರೀ ಬಿರಾದಾರ, ಮಹಾದೇವಿ ಕೊಪ್ಪದ ಸೇರಿದಂತೆ ಇತರರು ಇದ್ದರು. ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ (ದೇವರಹಿಪ್ಪರಗಿ) ಸ್ವಾಗತಿಸಿದರು. ರಶ್ಮಿ ಚಳ್ಳಗಿ ನಿರೂಪಿಸಿದರು. ದಾನೇಶ ಅವಟಿ ವಂದಿಸಿದರು.