ಸಾಗರ: ರಾಜ್ಯ ಸರ್ಕಾರ ಪಂಚಮಸಾಲಿ-ಗೌಡ ಲಿಂಗಾಯಿತ, ಮಲೇಗೌಡ ದೀಕ್ಷಾ ಲಿಂಗಾಯಿತ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಮತ್ತು ಕೇಂದ್ರ ಸರ್ಕಾರ ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡದೆ ಹೋದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮಿಗಳು ತಿಳಿಸಿದರು.
ತಾಲೂಕಿನ ಕೆಳದಿಯಲ್ಲಿ ಮಂಗಳವಾರ ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠದ ವತಿಯಿಂದ ರಾಣಿ ಚೆನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮಲೆನಾಡು ಭಾಗದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸತತ ಮೂರು ಬಾರಿ ನೀಡಿದ ಭರವಸೆ ಹುಸಿಯಾಗಿದ್ದು, ಈ ತಿಂಗಳ 23ಕ್ಕೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಈ ಬಾರಿಯೂ ಮಾತು ಮುರಿದರೆ ಸಮುದಾಯ ತನ್ನ ಆಕ್ರೋಶವನ್ನು ಯಾವ ರೀತಿ ವ್ಯಕ್ತಪಡಿಸುತ್ತದೆ ಎಂದು ಗೊತ್ತಿಲ್ಲ. ಸರ್ಕಾರ ಅದಕ್ಕೆ ಅವಕಾಶ ನೀಡದೆ ಮೀಸಲಾತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಸತತ 2 ವರ್ಷದಿಂದ ಮೀಸಲಾತಿಗಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿ ಮುಂದುವರೆದಿದ್ದರೆ ಇಷ್ಟರೊಳಗೆ ಮೀಸಲಾತಿ ಘೋಷಣೆಯಾಗುತ್ತಿತ್ತು. ಈಗಲೂ ನಮಗೆ ವಿಶ್ವಾಸವಿದ್ದು, ಯಡಿಯೂರಪ್ಪ,ಬೊಮ್ಮಾಯಿ ಸಮುದಾಯದ ಬೇಡಿಕೆ ಈಡೇರಿಸುತ್ತಾರೆ. ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿ ಮೀಸಲಾತಿ ಬಗ್ಗೆ ಚರ್ಚೆ ನಡೆಸಿದ್ದು, ಅವರು ಸಹ ಕೇಂದ್ರದ ಸರ್ಕಾರದ ಮೇಲೆ ಒತ್ತಡ ಹೇರುವ ಭರವಸೆ ನೀಡಿದ್ದಾರೆ ಎಂದರು.
ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಅಖಿಲ ಭಾರತ ಮಲೇಗೌಡ ಪಂಚಮಶಾಲಿ ಒಕ್ಕೂಟದಿಂದ ಆ. 16ರಿಂದ 25ರವರೆಗೆ ಜಿಲ್ಲಾದ್ಯಂತ ಪ್ರತಿಜ್ಞಾ ಪಂಚಾಯತ್ ಅಭಿಯಾನ ಮತ್ತು ಜಾಗೃತಿ ಪೂರ್ವ ಸಭೆ ಆಯೋಜಿಸಲಾಗಿದೆ. ಆಗಸ್ಟ್‌ನ 17 ಸೊರಬ, 18 ಹೊಸದುರ್ಗ, 19, ತೀರ್ಥಹಳ್ಳಿ, 20 ಶಿಕಾರಿಪುರ, 21 ಭದ್ರಾವತಿ, 22 ಕೂಡಲಸಂಗಮ, 23ರಂದು ಶಿಗ್ಗಾವಿ, 24ರಂದು ಶಿವಮೊಗ್ಗದಲ್ಲಿ ಜಾಗೃತಿ ಸಭೆ ನಡೆಯಲಿದೆ. 25 ರಂದು ಬೆಳಿಗ್ಗೆ 10ಕ್ಕೆ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿದರು. ಪ್ರಮುಖರಾದ ಅರುಣ್ ಪಾಟೀಲ್, ಗುರುಬಸವ ಗೌಡ, ರುದ್ರೆಗೌಡ, ಡಾ. ಮಾಲತೇಶ್, ಪ್ರೊ. ವಿಜಯಕುಮಾರ್, ಚಂದ್ರಕಾಂತ್ ನಾಯ್ಕ್, ಜಿ.ಬಿ.ವಸಂತ ಕುಮಾರ್, ಭದ್ರೇಶ್ ಬಾಳಗೋಡು ಇನ್ನಿತರರು ಹಾಜರಿದ್ದರು.