Advertisement

ಜಯಾ ಆಸ್ತಿ ಸಹೋದರನ ಮಕ್ಕಳಿಗೆ! ಮದ್ರಾಸ್‌ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

01:02 AM May 28, 2020 | mahesh |

ಚೆನ್ನೈ: ಅಂತೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಕರ್ನಾಟಕ ಮೂಲದ ಜೆ.ಜಯಲಲಿತಾ ಅವರ 900 ಕೋಟಿ ರೂ.ಗೂ ಹೆಚ್ಚಿನ ಆಸ್ತಿಗೆ ಉತ್ತರಾಧಿಕಾರಿಗಳು ಸಿಕ್ಕಿದ್ದಾರೆ! ಜಯಲಲಿತಾ ಅವರ ಸಹೋದರ ಜೆ. ಜಯಕುಮಾರ್‌ ಅವರ ಮಕ್ಕಳಾದ ಜೆ.ದೀಪಾ ಮತ್ತು ಜೆ. ದೀಪಕ್‌ ಅವರೇ ಉತ್ತರಾಧಿಕಾರಿಗಳು. ಇವರಿಗೆ ಎಲ್ಲ ಆಸ್ತಿ ಸಿಗಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿದೆ. ಜಯಲಲಿತಾರಿಗೆ ವಿವಾಹವಾಗಿಲ್ಲ. ಇನ್ನು ಉಳಿದಿರುವುದು ಅವರ ಸೋದರ ಜೆ.ಜಯಕುಮಾರ್‌ ಅವರ ಮಕ್ಕಳು. ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ, ಇವರು ಕ್ಲಾಸ್‌ 2 ವಾರಸುದಾರರಾಗುತ್ತಾರೆ ಎಂದು ಕೋರ್ಟ್‌ ಹೇಳಿದೆ. ದೀಪಕ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎನ್‌. ಕಿರುಬಕಾರನ್‌ ಮತ್ತು ನ್ಯಾ| ಅಬ್ದುಲ್‌ ಖುದೋಸ್‌ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಜಯಲಲಿತಾ ಅವರ ಎಲ್ಲ ಆಸ್ತಿಗಳನ್ನು ನಿರ್ವಹಿಸಲು ಜಯಕುಮಾರ್‌ ಅವರ ಮಕ್ಕಳಿಗೆ ಅನುಮತಿ ನೀಡಿತು.

Advertisement

ಕೋರ್ಟ್‌ ಅಭಿಪ್ರಾಯ ಕೇಳಬೇಕೇ?
ತಮಿಳುನಾಡು ಸರಕಾರವಾಗಲಿ, ಜಯಲಲಿತಾ ಸಂಬಂಧಿಗಳಾಗಲಿ ಕೋರ್ಟ್‌ನ ಈ ಸಲಹೆಯನ್ನು ಪಾಲಿಸಲೇಬೇಕು ಎಂದೇನಿಲ್ಲ. ಈಗಾಗಲೇ ಸರಕಾರ ಈ ಕಟ್ಟಡವನ್ನು ಅಧ್ಯಾದೇಶ ಮೂಲಕ ವಶಪಡಿಸಿಕೊಳ್ಳಲು ಮುಂದಾಗಿದೆ. ಆದರೆ ಈ ನಿವಾಸ ವಶಪಡಿಸಿಕೊಳ್ಳಲು, ತಮಿಳುನಾಡು ಸರಕಾರ ದೀಪಾ ಮತ್ತು ದೀಪಕ್‌ಗೆ 100 ಕೋಟಿ ರೂ.ನೀಡಬೇಕಾಗಿ ಬರಬಹುದು. ಕೋರ್ಟ್‌ನ ಪ್ರಶ್ನೆ ಜನರ ಈ ಪ್ರಮಾಣದ ಹಣವನ್ನು ಸ್ಮಾರಕಕ್ಕಾಗಿ ವೆಚ್ಚಮಾಡಬೇಕೇ ಎಂಬುದು.

ವೇದ ನಿಲಯಂ ಸ್ಮಾರಕ ಬೇಡ
ತೀರ್ಪಿನ ಸಂದರ್ಭದಲ್ಲಿ ಹೈಕೋರ್ಟ್‌, ಚೆನ್ನೈಯ ಪೋಯೆಸ್‌ ಗಾರ್ಡನ್‌ನಲ್ಲಿರುವ ಜಯಲಲಿತಾ ಅವರ ಅಧಿಕೃತ ನಿವಾಸ “ವೇದ ನಿಲಯಂ’ ಅನ್ನು ಸರಕಾರಿ ಸ್ಮಾರಕವನ್ನಾಗಿ ಮಾಡಬೇಕೇ ಎಂಬ ಬಗ್ಗೆ ಪುನರ್‌ ಪರಿಶೀಲನೆ ಮಾಡಿ ಎಂದು ತಮಿಳುನಾಡು ಸರಕಾರಕ್ಕೆ ಸಲಹೆ ನೀಡಿದೆ. ಈ ರೀತಿ ಖಾಸಗಿ ಕಟ್ಟಡಗಳನ್ನು ಜನರ ಹಣವನ್ನು ಬಳಕೆ ಮಾಡಿ ವಶಪಡಿಸಿಕೊಳ್ಳುವುದು ಸರಿಯಲ್ಲ. ಇದು ಮುಗಿಯದ ಪ್ರಕ್ರಿಯೆ. ಇದಕ್ಕೆ ಬದಲಾಗಿ ಇದೇ ನಿವಾಸವನ್ನು ಖಾಯಂ ಆಗಿ ಮುಖ್ಯಮಂತ್ರಿಗಳ ನಿವಾಸ ಮತ್ತು ಕಚೇರಿ ಮಾಡಿ ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next