Advertisement

ಇಂದಿನಿಂದ ಜಯದೇವಶ್ರೀ ಸ್ಮರಣೋತ್ಸವ

05:55 AM Jan 18, 2019 | |

ದಾವಣಗೆರೆ: ಬಸವಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವ ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಇಂದಿನಿಂದ ಜ. 20ರವರೆಗೆ ನಡೆಯಲಿದೆ.

Advertisement

ಮಹಾಮಾನವತವಾದಿ ಬಸವಣ್ಣನವರು ಸ್ಥಾಪಿಸಿದ ಶೂನ್ಯಪೀಠ ಪರಂಪರೆಯ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು 1907ರಲ್ಲೇ ಬೃಹನ್ಮಠದ ಧಾರ್ಮಿಕ ರಾಜಧಾನಿ ದಾವಣಗೆರೆಯಲ್ಲಿ ಉಚಿತ ವಿದ್ಯಾರ್ಥಿ ನಿಲಯ ಪ್ರಾರಂಭಿಸುವ ಮೂಲಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಉಂಟು ಮಾಡಿದವರು.

ಪ್ರತಿಷ್ಠಿತ ಶೂನ್ಯಪೀಠಾಧ್ಯಕ್ಷರಾಗಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರು. 1913ರಲ್ಲಿ ದಾವಣಗೆರೆಯ ವಿರಕ್ತ ಮಠದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಬಸವಜಯಂತಿ ಆಚರಿಸಲು ಶ್ರೀ ಮೃತ್ಯುಂಜಯ ಅಪ್ಪ ಮತ್ತು ಕರ್ನಾಟಕದ ಗಾಂಧಿ… ಎಂದೇ ಕರೆಯಲ್ಪಡುವ ಹರ್ಡೇಕರ್‌ ಮಂಜಪ್ಪ ಅವರಿಗೆ ಪ್ರೇರಣೆ ನೀಡಿದವರು. ಸಕಲರಿಗೆ ಧಾರ್ಮಿಕ ಸಂಸ್ಕಾರವನ್ನು ನೀಡಿ ಸಂಚಲನ ಉಂಟು ಮಾಡಿದವರು. ದಾವಣಗೆರೆಯ ಭಕ್ತರ ಇಚ್ಛೆಯಂತೆ ಶ್ರೀ ಶಿವಯೋಗಾಶ್ರಮದಲ್ಲಿ ಲೀಲಾ ವಿಶ್ರಾಂತಿ ಹೊಂದಿ 62 ವರ್ಷಗಳ ನಂತರವೂ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಹೆಸರು ಚಿರಸ್ಥಾಯಿಯಾಗಿದೆ.

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸ್ವಾತಂತ್ರ್ಯ, ಏಕೀಕರಣ ಚಳವಳಿಯಂತಹ ಮಹತ್ಕಾರ್ಯ ಮಾಡಿರುವ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳನ್ನ ಗೌರವಿಸುವ ಮತ್ತವರ ಸಾಧನೆಗಳ ಸ್ಮರಿಸುವ ಜೊತೆಗೆ ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ನಡೆಸಲಾಗುತ್ತಿದೆ.

ಇದೇ ಮೊದಲ ಬಾರಿಗೆ ಸಂಕ್ರಾಂತಿ ನಂತರ ಶುಕ್ರವಾರದಿಂದ ಸ್ಮರಣೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಜಯದೇವಶ್ರೀಗಳ 62ನೇ ಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರ ಸಾನ್ನಿಧ್ಯದಲ್ಲಿ ಸಹಜ ಶಿವಯೋಗ, ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ, ವಿವಿಧ ಪ್ರಶಸ್ತಿ ಪ್ರದಾನ, ಸಾಧಕರ, ಮಹಿಳಾ, ಸರ್ವಧರ್ಮ ಸಮಾವೇಶ ನಡೆಯಲಿವೆ.

Advertisement

ಶುಕ್ರವಾರ 7.30ಕ್ಕೆ ಮಂಡ್ಯ ಜಿಲ್ಲೆಯ ಚೆಕ್‌ಡ್ಯಾಂ ನಿರ್ಮಾತೃ, ಬಸವಶ್ರೀ ಪ್ರಶಸ್ತಿ ಪುರಸ್ಕೃತ ಕಾಮೇಗೌಡ ಬಸವತತ್ವ ಧ್ವಜಾರೋಹಣ ನೆರವೇರಿಸುವರು. 7.45ಕ್ಕೆ ಡಾ| ಶಿವಮೂರ್ತಿ ಮುರುಘಾ ಶರಣರು ನಡೆಸಿಕೊಡುವ ಸಹಜ ಶಿವಯೋಗದಲ್ಲಿ ಖಜೂರಿಯ ಶ್ರೀ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಚನ್ನಗಿರಿಯ ಶ್ರೀ ಜಯದೇವ ಸ್ವಾಮೀಜಿ, ಗುರುಕಲ್‌ವುಠದ ಶ್ರೀ ಶಾಂತವೀರ ಸ್ವಾಮೀಜಿ, ಮಾಜಿ ಶಾಸಕ ಮೋತಿ ವೀರಣ್ಣ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲಿಂಗಯ್ಯ ಹಿರೇಮs್, ಹಾವೇರಿ ಬಸವಕೇಂದ್ರದ ಮುರಿಗೆಪ್ಪ ಕಡೆಕೊಪ್ಪ, ಬೀದರ್‌ನ ಪ್ರಭುರಾವ್‌ ವಸ್ಕರೆ, ದಾವಣಗೆರೆಯ ಕೆ. ಮಹಮ್ಮದ್‌ ಗೌಸ್‌ಪೀರ್‌ ಹಮ್‌ದದ್‌ರ್, ಬಿ.ಸಿ. ರೇಣುಕೇಶ್ವರ, ಚನ್ನಗಿರಿಯ ಯುವ ಮುಖಂಡ ಮಲ್ಲಿಕಾರ್ಜುನ್‌ ಮಾಡಾಳ್‌ ಇತರರು ಭಾಗವಹಿಸುವರು. ಬೆಳಗ್ಗೆ 11ಕ್ಕೆ ಡಾ| ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು.

ಸಂಜೆ 6.30ಕ್ಕೆ ನಡೆಯುವ ಸಾಧಕರ ಸಮಾವೇಶದಲ್ಲಿ ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮೀಜಿ, ಗೃಹ ಸಚಿವ ಎಂ.ಬಿ. ಪಾಟೀಲ್‌, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಇತರರು ಭಾಗವಹಿಸುವರು. ಲಿಂಗಾಯತ ಧರ್ಮಕ್ಕೆ ಜಯದೇವಶ್ರೀಗಳವರ ಕೊಡುಗೆ… ವಿಷಯದ ಚಿಂತನ ಮಂಥನ ನಡೆಯಲಿದೆ. ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನ್‌ದಾಸ್‌ ಅವರಿಗೆ ಜಯದೇವಶ್ರೀ, ಖ್ಯಾತ ಸಾಹಿತಿ ಡಾ| ಕುಂ. ವೀರಭದ್ರಪ್ಪ ಅವರಿಗೆ ಶೂನ್ಯಪೀಠ ಚನ್ನಬಸವ, ಧಾರವಾಡದ ಹಿರಿಯ ಸಾಹಿತಿ ಡಾ| ಸಿ.ಆರ್‌. ಯರವಿನತೆಲಿಮಠಗೆ ಶೂನ್ಯಪೀಠ ಅಲ್ಲಮ ಹಾಗೂ ತುಮಕೂರು ಜಿಲ್ಲೆಯ ಸಮಾಜ ಸೇವಕಿ ಭವ್ಯಾರಾಣಿಗೆ ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಿಮಿಕ್ರಿ ಗೋಪಿ, ಕಲರ್ಸ್‌ ಕನ್ನಡ ಕೋಗಿಲೆ ಪ್ರಶಸ್ತಿ ಪುರಸ್ಕೃತ ಕರಿಬಸವ, ಕನ್ನಡ ಸರಿಗಮಪ ಪ್ರಶಸ್ತಿ ವಿಜೇತ ಜ್ಞಾನೇಶ್‌… ಸಾಂಸ್ಕೃತಿಕ ಸಂಭ್ರಮ ನಡೆಸಿಕೊಡುವರು.

Advertisement

Udayavani is now on Telegram. Click here to join our channel and stay updated with the latest news.

Next