ದಾವಣಗೆರೆ: ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಸ್ಮರಣೋತ್ಸವ ಅಂಗವಾಗಿ ಪ್ರತಿವರ್ಷ ಕೊಡ ಮಾಡುವ ಜಯದೇವ ಶ್ರೀ ಪ್ರಶಸ್ತಿಗೆ ಈ ಬಾರಿ ಖ್ಯಾತ ಸಾಹಿತಿ, ಪ್ರಗತಿಪರ ಚಿಂತಕ ಡಾ| ಕೆ. ಮರುಳಸಿದ್ದಪ್ಪ ಭಾಜನರಾಗಿದ್ದಾರೆ.
ಚಿತ್ರದುರ್ಗ ಮುರುಘಾ ಮಠದ ಡಾ|ಶಿವಮೂರ್ತಿ ಮುರುಘಾ ಶರಣರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಾರಿ ಪ್ರಶಸ್ತಿಗೆ ಆಯ್ಕೆಯಾದವರ ಹೆಸರುಗಳನ್ನು ಘೋಷಿಸಿದರು. ಶೂನ್ಯಪೀಠ ಅಲ್ಲಮ ಪ್ರಶಸ್ತಿಗೆ ರಾಯ ಚೂರಿನ “ಸುದ್ದಿಮೂಲ’ ಪತ್ರಿಕೆ ಸಂಪಾದಕ ಬಸವರಾಜಸ್ವಾಮಿ, ಶೂನ್ಯ ಪೀಠ ಅಕ್ಕನಾಗಮ್ಮ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗೀಲ್, ಶೂನ್ಯಪೀಠ ಚನ್ನಬಸವ ಪ್ರಶಸ್ತಿಗೆ ಚಿತ್ರದುರ್ಗದ ಸಾಹಿತಿ ಪ್ರೊ.ಎಚ್.ಲಿಂಗಪ್ಪ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ 25 ಸಾವಿರ ನಗದು, ಸ್ಮರಣಿಕೆ ಹೊಂದಿದೆ ಎಂದು ತಿಳಿಸಿದರು.
ದಾವಣಗೆರೆಯ ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 64 ನೇ ಸ್ಮರಣೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಶರಣ ಸಂಸ್ಕೃತಿ ಉತ್ಸವ ಫೆ.28 ರಂದು ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ವಿಶ್ವಗುರು ಬಸವಣ್ಣನವರು ನೀಡಿರುವ ಕಾಯಕ ಮತ್ತು ದಾಸೋಹ ತತ್ವಗಳನ್ನು 20ನೇ ಶತಮಾನದಲ್ಲಿ ಪಾಲಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಉಚಿತ ಪ್ರಸಾದ ನಿಲಯ ಸ್ಥಾಪಿಸುವ ಮೂಲಕ ಸಾಮಾಜಿಕ, ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿರುವ ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 64ನೇ ಸ್ಮರಣೋತ್ಸವವನ್ನು ಸಂಪ್ರದಾಯವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಮೂರು ದಿನಗಳ ಸ್ಮರಣೋತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಸರಳವಾಗಿ ಆಚರಿಸಲಾಗುತ್ತದೆ ಎಂದರು.
ಭಾನುವಾರ ಸಂಜೆ 6. 30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ ಇತರರು ಪಾಲ್ಗೊಳ್ಳುವರು. ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸುವರು. ರಿಯಾಲಿಟಿ ಶೋ ಗಾಯಕ ಬಸವ ಪ್ರಸಾದ್ ಮತ್ತು ಜಾನಪದ ಅಕಾಡೆಮಿ ಸದಸ್ಯ ರುದ್ರಾಕ್ಷಿಬಾಯಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು. ಶ್ರೀ ಬಸವಪ್ರಭು ಸ್ವಾಮೀಜಿ, ಎಸ್. ಓಂಕಾರಪ್ಪ, ಅಂದನೂರು ಮುಪ್ಪಣ್ಣ, ವೀರೇಂದ್ರ ಪ್ರಸಾದ್, ಮಹದೇವಮ್ಮ ಇತರರು ಸುದ್ದಿಗೋಷ್ಠಿಯಲ್ಲಿದ್ದರು.