ಮುಂಬಯಿ ಅ. 29: ಪರಿಸ್ಥಿತಿಗೆ ಅನುಗುಣವಾಗಿ ಕಾಯಕದ ಜತೆಗೆ ಸಮಾಜ ಸೇವೆಯನ್ನು ಯಾವ ರೀತಿ ಮಾಡಲು ಸಾಧ್ಯ ಎಂಬುದನ್ನು ಜಯ ಸಿ. ಸುವರ್ಣರಿಂದ ಕಲಿಯಬೇಕು. ವ್ಯಕ್ತಿ ಯಾವತ್ತೂ ಶಕ್ತಿಯಾಗಿ ಬೆಳೆದಾಗ ಸಮಾಜ ಬೆಳೆಯುವುದು ಎಂಬುದಕ್ಕೆ ಸುವರ್ಣರು ಸಾಕ್ಷಿಯಾಗಿದ್ದರು. ಬದುಕಿನುದ್ದಕ್ಕೂ ಅವರ ಜನಸೇವೆ, ಸಮಾಜ ಸೇವೆ ಎಲ್ಲರಿಗೂ ಮಾದರಿ. ಬಿಲ್ಲವ ಜನಾಂಗದ ಪ್ರಗತಿ ಜತೆಗೆ ಸಮಾಜದ ಎಲ್ಲ ವರ್ಗಗಳ ಜನರ ಒಡನಾಟ ಅವಿಸ್ಮರಣೀಯ ಎಂದು ಚಾರ್‌ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷ ಎಂ. ಕೃಷ್ಣ ಎನ್. ಶೆಟ್ಟಿ ತಿಳಿಸಿದರು.
ಚಾರ್ಕೋಪ್ ಕನ್ನಡಿಗರ ಬಳಗದ ವತಿಯಿಂದ ಅ. 28ರಂದು ಚಾರ್ಕೋಪ್ ಕಾಂದಿವಿಲಿ ಪಶ್ಚಿಮದ ವಿಜಯ ಹೌಸಿಂಗ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ಬಳಗದ ಕನ್ನಡ ಭವನದ ಮಿನಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಜಯ ಸಿ. ಸುವರ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ, ಜಯ ಸುವರ್ಣರು ನಮ್ಮ ನಡುವೆ ಇಲ್ಲದಿದ್ದರೂ ಅವರ ಮಾರ್ಗದರ್ಶನ-ಚಿಂತನೆ ಮುಂದಿನ ಜನಾಂಗಕ್ಕೆ ಮಾದರಿಯಾಗಲಿದೆ. ಅವರ ನಿಧನದ ದುಃಖ ಸಹಿಸಿಕೊಳ್ಳುವ ಶಕ್ತಿ ಭಗವಂತ ಕುಟುಂಬದ ಸದಸ್ಯರಿಗೆ ನೀಡಲಿ. ಇಂಥ ಮಹಾನ್ ಚೇತನ ಮತ್ತೂಮ್ಮೆ ಹುಟ್ಟಿ ಬರಲಿ ಎಂದರು.
ಸಮಾಜ ಸೇವಕ, ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪಯ್ನಾರು ರಮೇಶ್ ಶೆಟ್ಟಿ ಮಾತನಾಡಿ, ಮನುಷ್ಯನಿಗೆ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತವಾದರೂ ಈ ನಡುವಿನ ಸಮಯದಲ್ಲಿ ಜಯದ ಶಿಖರವನ್ನೇರಿ ಸದೃಢ ಹಣಕಾಸು ಸಂಸ್ಥೆಯೊಂದಿಗೆ ಬಿಲ್ಲವ ಜನಾಂಗಕ್ಕೆ ಮುಖ್ಯಸ್ಥರಾಗಿ, ಸಂಘಟನಾತ್ಮಕ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಜಯ ಸುವರ್ಣರ ನಿಧನ ಬಿಲ್ಲವ ಸಮಾಜ ಮಾತ್ರವಲ್ಲದೆ ತುಳು-ಕನ್ನಡಿಗರಿಗೆ ಬಹುದೊಡ್ಡ ನಷ್ಟ. ಅವರ ಅಗಲುವಿಕೆಯ ದುಃಖ ಸಹಿಸುವ ಶಕ್ತಿ ಭಗವಂತನು ಎಲ್ಲರಿಗೆ ನೀಡಲಿ ಎಂದು ತಿಳಿಸಿದರು
ಕಾರ್ಯಕ್ರಮವನ್ನು ನಿರ್ವಹಿಸಿದ ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ ಮಾತನಾಡಿ, ಜಯ ಸುವರ್ಣರು ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ-ಸಿದ್ಧಾಂತ ಪಾಲಿಸುತ್ತ, ಪರೋಪಕಾರಿ ಯಾಗಿ ಬದುಕಿ, ಭಾರತ್ ಬ್ಯಾಂಕ್ ಸಾಧನೆಯನ್ನು ಮಹಾನಗರದ ಉದ್ದಗಲಕ್ಕೆ ವಿಸ್ತರಿಸಿ ತುಳು-ಕನ್ನಡಿಗರ ಬಾಳಿಗೆ ದಾರಿ ತೋರಿಸಿದರು. ಬಳಗದ ಉತ್ತುಂಗದಲ್ಲಿ ಮಾರ್ಗದರ್ಶಕರಾಗಿ ಸಲಹೆ ನೀಡಿದ್ದರು. ಅವರ ಆತ್ಮ ಭಗವಂತನ ಸಾನ್ನಿಧ್ಯದಲ್ಲಿ ಚಿರಶಾಂತಿ ಪಡೆಯಲಿ. ಅವರ ಕಾರ್ಯ ಸಾಧನೆ ಜನಮಾನಸದಲ್ಲಿ ನೆಲೆ ನಿಲ್ಲಲಿ ಎಂದು ಪುಷ್ಪಾಂಜಲಿ ಅರ್ಪಿಸಿ ನುಡಿನಮನ ಸಲ್ಲಿಸಿದರು.
ವಿಶ್ವಸ್ಥ ಎಂ. ಎಸ್. ರಾವ್ ಅವರು ಭಾರತ್ ಬ್ಯಾಂಕ್ ಚಾರ್ಕೋಪ್ ಬಳಗಕ್ಕೆ ಜಯ ಸಿ. ಸುವರ್ಣರ ಕೊಡುಗೆ ಬಗ್ಗೆ ಮಾತನಾಡಿದರು. ಸಂಘ-ಸಂಸ್ಥೆಗಳಿಗೆ ಅವರು ನೀಡುತ್ತಿದ್ದ ಮೌಲಿಕ ಸಲಹೆಗಳನ್ನು ಸ್ಮರಿಸಿದರು. ಬಳಗದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ ಮಾತನಾಡಿ, ಜಯ ಸಿ. ಸುವರ್ಣರು ಮುಂಬಯಿಗರಿಗೆ ಮಾತ್ರ ಸೀಮಿತವಾಗಿರದೆ ಊರಿನಲ್ಲೂ ಜಾತಿ-ಧರ್ಮ ಭೇದವಿಲ್ಲದೆ ಸಮಾಜ ಸೇವಕರಾಗಿದ್ದರು ಎಂದರು.
ಭಾರತ್ ಬ್ಯಾಂಕ್‌ನ ನಿರ್ದೇಶಕ ಪ್ರೇಮನಾಥ್ ಎ. ಕೋಟ್ಯಾನ್, ಸಮಾಜ ಸೇವಕ ರಜಿತ್ ಎಲ್. ಸುವರ್ಣ, ಬಳಗದ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಚೇವಾರ್, ಕಾಂದಿವಲಿ ಕನ್ನಡ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸಬಿತಾ ಜಿ. ಪೂಜಾರಿ ನುಡಿನಮನ ಸಲ್ಲಿಸಿದರು. ಬಳಗದ ಉಪ ಕಾರ್ಯಾಧ್ಯಕ್ಷ ಕೃಷ್ಣ ಅಮೀನ್, ಲತಾ ಬಂಗೇರ, ರಮೇಶ್ ಬಂಗೇರ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಮೃತರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಚಿತ್ರ-ವರದಿ: ರಮೇಶ್ ಉದ್ಯಾವರ್