ಜೇವರ್ಗಿ: ಪಟ್ಟಣ ಸೇರಿದಂತೆ ಆಂದೋಲಾ, ಇಜೇರಿ ಹೋಬಳಿ ವ್ಯಾಪ್ತಿಯ ಹತ್ತಾರು ಹಳ್ಳಿಗಳಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಯಿಂದ ಅನ್ನದಾತನ ಮೊಗದಲ್ಲಿ ಸಂತಸ ಮೂಡಿದೆ.
ಕಳೆದ ಐದಾರು ದಿನಗಳ ಹಿಂದೆ ಎಡೆಬಿಡದೇ ಸುರಿದ ಭಾರಿ ಮಳೆಗೆ ಅನೇಕ ಜಮೀನುಗಳ ಒಡ್ಡು ಒಡೆದು ಹೊಲಗಳಲ್ಲಿ ನೀರು ನಿಂತು ಸಾಕಷ್ಟು ಹಾನಿ ಸಂಭವಿಸಿತ್ತು. ಮತ್ತೇ ಬುಧವಾರ ಸುರಿದ ಧಾರಾಕಾರ ಮಳೆ ಈಗಾಗಲೇ ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಸಂತಸ ತಂದಿದೆ. ಜೇವರ್ಗಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೋಳಕೂರ, ರದ್ದೇವಾಡಗಿ, ಮಾವನೂರ, ಹರವಾಳ, ಜನಿವಾರ, ಗೌನಳ್ಳಿ, ರಾಸಣಗಿ, ಹಂದನೂರ, ರೇವನೂರ, ಕೂಡಿ, ಕೋಬಾಳ, ಮಂದ್ರವಾಡ, ಬಣಮಿ, ಕೋನಾ ಹಿಪ್ಪರಗಾ, ಹರನೂರ, ಸೊನ್ನ, ಕಲ್ಲಹಂಗರಗಾ, ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ರೈತರು ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ, ಸೂರ್ಯಕಾಂತಿ, ಹೆಸರು, ಉದ್ದು ಸೇರಿದಂತೆ ಅಲ್ಪಾವಧಿ ಬೆಳೆಗಳ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದಾರೆ.
ಬಿತ್ತನೆ ಮಾಡಿದ ನಂತರ ವಾರದಲ್ಲಿ ಎರಡು ಬಾರಿ ಅಲ್ಪ ಸ್ವಲ್ಪ ಮಳೆಯಾಗಿದ್ದರಿಂದ ಬೆಳೆಗಳು ಚೇತರಿಕೆ ಕಾಣುತ್ತಿವೆ. ಬುಧವಾರ ಸುರಿದ ಮಳೆ ರೈತರಿಗೆ ವರವಾಗಿ ಪರಿಣಮಿಸಿದೆ. ಕಳೆದ ಮೂರು ವರ್ಷಗಳಿಂದ ತಾಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ರೈತರು ಬಿತ್ತನೆ ಮಾಡಿದ ಬೆಳೆಗಳು ಕೈ ಸೇರಿರಲಿಲ್ಲ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಾಲ ಕಾಲಕ್ಕೆ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.
ತಾಲೂಕಿನ ಶಖಾಪುರ, ಅವರಾದ ಗ್ರಾಮಗಳ ಸೀಮೆಯಲ್ಲಿ ರೈತರು ಹೆಸರು, ಉದ್ದು, ಹತ್ತಿ ಬಿತ್ತನೆ ಮಾಡಿದ್ದು ಈಗಾಗಲೇ ಕಳೆ ತೆಗೆಯುವ ಹಂತಕ್ಕೆ ಬಂದಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಬೀಳದ ಮಳೆ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಮುಂಗಾರು ಬೆಳೆಗಳ ಇಳುವರಿ ಗಣನೀಯವಾಗಿ ಹೆಚ್ಚಳವಾಗಲಿದೆ. ರೈತರು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಪಡೆದುಕೊಂಡು ಬೆಳೆಗಳಿಗೆ ರಸಗೊಬ್ಬರ, ಕ್ರಿಮಿನಾಶಕ ಅಗತ್ಯ ಪ್ರಮಾಣದಲ್ಲಿ ಬಳಕೆ ಮಾಡಬೇಕು.
ತಾಲೂಕಿನ ಪ್ರಮುಖ ಬೆಳೆಗಳಾದ ತೊಗರಿ, 64,450 ಹೆಕ್ಟೇರ್, ಹತ್ತಿ 42,725 ಹೆಕ್ಟೇರ್, ಸಜ್ಜೆ, ಸೂರ್ಯಕಾಂತಿ, ಮೆಕ್ಕೆ ಜೋಳ 1000 ಹೆಕ್ಟೇರ್, ಹೆಸರು, 1,250 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಸೇರಿದಂತೆ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ ಪ್ರತಿಶತ 90% ರಷ್ಟು ಮುಂಗಾರು ಬೆಳೆಗಳ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಸುನೀಲಕುಮಾರ ಜವಳಗಿ,
ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ