ಪಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿà ದೇವಿ ಅವರ ಪಟ್ನಾ ನಿವಾಸಕ್ಕೆ ಭದ್ರತೆಗಾಗಿ ನಿಯೋಜಿಸಲಾಗಿದ್ದ 32 ಸೇನಾ ಪೊಲೀಸ್ ಜವಾನರನ್ನು ಬಿಹಾರ ಸರಕಾರ ಹಿಂಪಡೆದುಕೊಂಡಿದೆ.
ಈ ಕ್ರಮವನ್ನು ಪ್ರತಿಭಟಿಸಿ ರಾಬ್ರಿ ಪುತ್ರರಾದ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಅವರು ತಮಗೆ ಸರಕಾರದಿಂದ ಇರುವ ಭದ್ರತೆಯನ್ನು ಬಿಟ್ಟುಕೊಟ್ಟಿದ್ದಾರೆ.
ನಿನ್ನೆ ಮಂಗಳವಾರ ರಾತ್ರಿ ಪಟ್ನಾದಲ್ಲಿನ ರಾಬ್ರಿ ನಿವಾಸದಲ್ಲಿ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ 32 ಸೇನಾ ಪೊಲೀಸ್ ಜವಾನರು ತಮ್ಮ ಸರಂಜಾಮುಗಳ ಗಂಟು ಮೂಟೆ ಕಟ್ಟುತ್ತಿದ್ದ ದೃಶ್ಯ ಕಂಡು ಬಂತು.
ಬಿಹಾರ ಸರಕಾರದ ಈ ಕ್ರಮದಿಂದ ಆಕ್ರೋಶಿತರಾಗಿರುವ ಲಾಲು ಪುತ್ರ ತೇಜಸ್ವಿ ಯಾದವ್ ಅವರು “ರಾಜ್ಯ ಸರಕಾರ ಈ ರೀತಿಯ ಕ್ಷುಲ್ಲಕ ರಾಜಕಾರಣವನ್ನು ಕೈಬಿಟ್ಟು ಏನಾದರೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು’ ಎಂದು ಗುಡುಗಿದರು.
“ನಾನು ವಿರೋಧ ಪಕ್ಷ ನಾಯಕನಾಗಿರುವುದರಿಂದ ಮತ್ತು ನಮ್ಮ ತಾಯಿ ರಾಬ್ರಿ ದೇವಿ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿರುವುದರಿಂದ ಮತ್ತು ಸಹೋದರ ತೇಜ್ ಪ್ರತಾಪ್ ಶಾಸಕರಾಗಿರುವುದರಿಂದ ನಾವು ಮೂವರೂ ಭದ್ರತೆಯನ್ನು ಪಡೆದುಕೊಂಡಿದ್ದೇವೆ. ಐಆರ್‌ಸಿಟಿಸಿ ಹೊಟೇಲ್ ಟೆಂಡರ್ ಕೇಸಿನಲ್ಲಿ ಸಿಬಿಐ ರಾಬ್ರಿ ದೇವಿ ನಿವಾಸದ ಮೇಲೆ ದಾಳಿ ನಡೆಸಿರುವುದನ್ನು ಅನುಸರಿಸಿ ರಾಜ್ಯ ಸರಕಾರ ಆಕೆಗಿರುವ ಭದ್ರತೆಯನ್ನು ಹಿಂಪಡೆದುಕೊಂಡಿದೆ’ ಎಂದು ತೇಜಸ್ವಿ ತಮ್ಮ ಸರಣಿ ಟ್ವೀಟ್‌ನಲ್ಲಿ ಹೇಳಿದ್ದಾರೆ.