ಜೇವರ್ಗಿ: ಸತತ ಕಳೆದ ಎರಡ್ಮೂರು ವರ್ಷಗಳಿಂದ ತಾಲೂಕಿನಲ್ಲಿ ಬರಗಾಲ ಆವರಿಸಿದ ಪರಿಣಾಮ ರೈತಾಪಿ ವರ್ಗ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಬರಗಾಲದ ಛಾಯೆ ಮಾಸುವ ಮುನ್ನವೇ ಮುಂಗಾರು ಹಂಗಾಮು ಆಗಮಿಸಿದ್ದು, ರೈತರು ಉಳುಮೆ ಮಾಡಿ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ಅಗತ್ಯ ರಸಗೊಬ್ಬರ ದಾಸ್ತಾನು ಸಂಗ್ರಹಿಸಿಡುವ ಮೂಲಕ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜೇವರ್ಗಿ ಸೇರಿದಂತೆ ಆಂದೋಲಾ, ಇಜೇರಿ, ನೆಲೋಗಿ, ಯಡ್ರಾಮಿ ಹೋಬಳಿಗಳ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಮುಂಗಾರು ಹಂಗಾಮಿನಲ್ಲಿ 8.25 ಲಕ್ಷ ಟನ್ ಉತ್ಪಾದನಾ ಗುರಿ ಹೊಂದಲಾಗಿದೆ.
ತಾಲೂಕಿನ ಪ್ರಮುಖ ಬೆಳೆಗಳಾದ ತೊಗರಿ 64,450 ಹೆಕ್ಟೇರ್, ಹತ್ತಿ 42,725 ಹೆಕ್ಟೇರ್, ಸಜ್ಜೆ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳ 1,000 ಹೆಕ್ಟೇರ್, ಹೆಸರು 1,250 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಸೇರಿದಂತೆ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹೊಂದಲಾಗಿದೆ. ಈಗಾಗಲೇ ಬೀಜ ದಾಸ್ತಾನು ಸಂಗ್ರಹದ ಮೂಲಕ ಮುಂಗಾರು ಆರಂಭವಾಗುತ್ತಿದ್ದಂತೆ ಬೀಜ ವಿತರಣೆ ಪ್ರಕ್ರಿಯೆ ಆರಂಭಿಸಲು ಇಲಾಖೆ ಕ್ರಮ ಕೈಗೊಂಡಿದೆ. ಪ್ರಸ್ತಕ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ಒದಗಿಸಲು ಬಿತ್ತನೆ ಬೀಜಗಳಾದ ತೊಗರಿ, ಹೆಸರು, ಸಜ್ಜೆ ಸೂರ್ಯಕಾಂತಿ, ಮೆಕ್ಕೆ ಜೋಳ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಪ್ರತಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 2 ರಿಂದ 3 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಬೀಜ ವಿತರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಮುಂಗಾರು ಹಂಗಾಮಿಗೆ ಬೇಕಾಗುವ ರಸಗೊಬ್ಬರವನ್ನು ಎಲ್ಲಾ ಹೋಬಳಿಗಳ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಹಾಗೂ ಅಧಿಕೃತ ಮಾರಾಟಗಾರರ ಮೂಲಕ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಜೇವರ್ಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಹರನೂರ, ಕೂಡಿ ಮತ್ತು ಸೊನ್ನದಲ್ಲಿ, ನೆಲೋಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಅಂಕಲಗಾ, ಮಂದೇವಾಲ ಹಾಗೂ ಜೇರಟಗಿಯಲ್ಲಿ, ಆಂದೋಲಾ ರೈತ ಸಂಪರ್ಕ ಕೇಂದ್ರದ ಚಿಗರಳ್ಳಿ ಕ್ರಾಸ್ ಮತ್ತು ನರಿಬೋಳದಲ್ಲಿ, ಇಜೇರಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಬಿಳವಾರ ಮತ್ತು ಯಲಗೋಡ, ಯಡ್ರಾಮಿ ರೈತ ಕೇಂದ್ರ ವ್ಯಾಪ್ತಿಯ ಅರಳಗುಂಡಗಿ, ಕುಕನೂರ ಹಾಗೂ ಮಳ್ಳಿಯಲ್ಲಿ ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ರೈತರಿಗೆ ಬಿತ್ತನೆ ಸಮಯದಲ್ಲಿ ರಸಗೊಬ್ಬರ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಪೂರ್ವಭಾವಿ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 2,500 ಟನ್ ವಿವಿಧ ರಾಸಾಯನಿಕ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ನಿಗದಿತ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವಂತೆ ರಸಗೊಬ್ಬರ ವಿತರಕರಿಗೆ ಆದೇಶ ನೀಡಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಗಳ ಪ್ರಕಾರ ಜೂನ್ ಮೊದಲ ವಾರದ ಆಸುಪಾಸಿನಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗುವ ಸಾಧ್ಯತೆಗಳಿವೆ. ರೈತರು ಬಿತ್ತನೆ ಸಮಯದಲ್ಲಿ ಅನಗತ್ಯ ಗಡಿಬಿಡಿ ಮಾಡುವ ಬದಲಾಗಿ ಭೂಮಿಯ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ತೇವಾಂಶ ಕೊರತೆಯಿಂದ ಬಿತ್ತಿದ ಬೀಜ ನಾಟದೇ ಹೋಗಬಹುದು. ಪರಿಸ್ಥಿತಿಗೆ ಅನುಗುಣವಾಗಿ ಬಿತ್ತನೆ ಮಾಡಬೇಕು ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆಗೆ ಬೀಜ ದಾಸ್ತಾನು ಮಾಡಲಾಗಿದೆ. ರೈತರು ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಬೀಜ, ರಸಗೊಬ್ಬರ ಖರೀದಿಸಬೇಕು.
ಸುನೀಲಕುಮಾರ ಜವಳಗಿ,
ಸಹಾಯಕ ಕೃಷಿ ನಿರ್ದೇಶಕರು
ವಿಜಯಕುಮಾರ ಎಸ್.ಕಲ್ಲಾ