ಜೇವರ್ಗಿ: ಪಟ್ಟಣದ ರದ್ದೇವಾಡಗಿ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50 ರ ಬೈಪಾಸ್ ರಸ್ತೆ ಪಕ್ಕದ ಖಾಲಿ ಜಾಗದಲ್ಲಿರುವ ಗುಡಿಸಲು ವಾಸಿಗಳಿಗೆ, ಅಲೆಮಾರಿ, ನಿರ್ಗತಿಕ, ಬಡವರಿಗೆ ಶನಿವಾರ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು.
ವಿಜಯಪುರದಿಂದ ಕಲಬುರಗಿ ನಗರಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಹೊರ ವಲಯದಲ್ಲಿ ಜಿ.ಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ ಅಭಿಮಾನಿಗಳ ವತಿಯಿಂದ ನೂರಾರು ಗುಡಿಸಲು ವಾಸಿಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿ, ಅವರ ಆರೋಗ್ಯ ಕ್ಷೇಮ ವಿಚಾರಿಸಿದರು. ಇದೇ ವೇಳೆ ಗುಡಿಸಲು ವಾಸಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ನಿಮ್ಮದು ಯಾವೂರು, ಆರೋಗ್ಯವಾಗಿದ್ದೀರಾ? ಎಂದು ಕಾರಜೋಳ ಪ್ರಶ್ನಿಸಿದರು.
“ನಾನು ಮುಧೋಳ ತಾಲೂಕು, ಕಮತಗಿ ಗ್ರಾಮದವನು. ಇಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಕೂಲಿ ಕೆಲಸಕ್ಕೆ ಬಂದಿದ್ದೇನೆ ಸರ್’ ಎಂದ ತಕ್ಷಣ. “ನೀನು ನಮ್ ಕಡೆದವನೇ ಇದ್ದಿಯಲ್ಲಪ್ಪಾ ..ಚೆನ್ನಾಗಿದ್ದೀಯಾ?’ ಎಂದು ಕೇಳಿ ಆಹಾರ ಧಾನ್ಯದ ಕಿಟ್ ವಿತರಿಸಿ ಮುನ್ನಡೆದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಾರಜೋಳ, ಕೊರೊನಾ ಸೋಂಕಿನಿಂದ ಬಡವರಿಗೆ, ನಿರ್ಗತಿಕರಿಗೆ, ಅಲೆಮಾರಿಗಳಿಗೆ, ಕೂಲಿಕಾರ್ಮಿಕರಿಗೆ, ಗುಡಿಸಲು ವಾಸಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಉಚಿತ ಪಡಿತರ ಜೊತೆಗೆ ವಿವಿಧ ಸಂಘ-ಸಂಸ್ಥೆಗಳ ಸಹಾಯ ಹಸ್ತ ಚಾಚಲಾಗುತ್ತಿವೆ ಎಂದು ಹೇಳಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿ.ಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ, ತಾ.ಪಂ ಸದಸ್ಯ ಗುರುಶಾಂತಪ್ಪ ಸಿಕ್ಕೆದ್, ಪುರಸಭೆ ಸದಸ್ಯರಾದ ಸಂಗನಗೌಡ ಪಾಟೀಲ ರದ್ದೇವಾಡಗಿ, ಹಣಮಂತ ಶಹಾಬಾದಕರ್, ಈಶ್ವರ ಹಿಪ್ಪರಗಿ, ಸಿದ್ಧು ಸಾಹು ಗೋಗಿ, ಬಸವರಾಜ ಕೋಳಕೂರ, ಬಸವರಾಜ ಕಿರಣಗಿ, ಭಾಸ್ಕರ್ ಹಳಿಮನಿ, ಪಿಂಟು ಕೋಳಕೂರ, ಮಲ್ಲು ನಾಟಿಕಾರ, ಗಂಗಾಧರ ಸ್ಥಾವರಮಠ, ಸಿಪಿಐ ರಮೇಶ ರೊಟ್ಟಿ ಮತ್ತಿತರರು ಇದ್ದರು.