ಬೀದರ: ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ವೆಲ್‌ಮೆಗ್ನಾ ನೇತ್ರ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಗುರುವಾರ ನಡೆದ ಕಾಲ್ನಡಿಗೆ ಜಾಥಾದ ಮೂಲಕ ಸಾರ್ವಜನಿಕರಲ್ಲಿ ನೇತ್ರ ಆರೋಗ್ಯ ಜಾಗೃತಿ ಮೂಡಿಸಲಾಯಿತು.
ಅಂಬೇಡ್ಕರ್ ವೃತ್ತದಿಂದ ಆರಂಭವಾದ ಜಾಥಾ ಜಿಲ್ಲಾಧಿಕಾರಿ ಕಚೇರಿ, ಹರಳಯ್ಯ ವೃತ್ತದ ಮಾರ್ಗವಾಗಿ ಸಾಗಿ ಜಿಲ್ಲಾ ಆಸ್ಪತ್ರೆಗೆ ತಲುಪಿ ಸಮಾರೋಪಗೊಂಡಿತು.
ಜಾಥಾದಲ್ಲಿ ಪಾಲ್ಗೊಂಡವರು ನೇತ್ರ ಆರೋಗ್ಯಕ್ಕೆ ಸಂಬಂಧಿಸಿದ ಬರಹಗಳನ್ನು ಹೊಂದಿದ್ದ ಫಲಕಗಳನ್ನು ಹಿಡಿದುಕೊಂಡಿದ್ದರು. ಜಾಥಾದ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತ ಸಾರ್ವಜನಿಕರ ಗಮನ ಸೆಳೆದರು. ಇದಕ್ಕೂ ಮುನ್ನ ಜಾಥಾಕ್ಕೆ ಚಾಲನೆ ನೀಡಿದ ವೆಲ್‌ಮೆಗ್ನಾ ಆಸ್ಪತ್ರೆಯ ನಿರ್ದೇಶಕಿ ಡಾ| ಸಿಬಿಲ್ ಸಾಲಿನ್ಸ್ ಮಾತನಾಡಿ, “ನಿಮ್ಮ ಕಣ್ಣುಗಳನ್ನು ಪ್ರೀತಿಸಿ’ ಎನ್ನುವುದು ಈ ಬಾರಿಯ ವಿಶ್ವ ದೃಷ್ಟಿ ದಿನಾಚರಣೆಯ ಘೋಷವಾಕ್ಯವಾಗಿದೆ. ಕಣ್ಣುಗಳು ಮಾನವನ ಅತ್ಯಂತ ಮಹತ್ವದ ಅಂಗವಾಗಿವೆ. ಹೀಗಾಗಿ ಪ್ರತಿಯೊಬ್ಬರೂ ಕಣ್ಣುಗಳನ್ನು ಪ್ರೀತಿಸಬೇಕು. ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.
40 ವರ್ಷ ಮೇಲ್ಪಟ್ಟವರು ನೇತ್ರ ಸಮಸ್ಯೆ ಕಂಡು ಬಂದರೆ ಕೂಡಲೇ ನೇತ್ರ ವೈದ್ಯರನ್ನು ಕಾಣಬೇಕು. ಮಧುಮೇಹಿಗಳು ಪ್ರತಿ ಆರು ತಿಂಗಳಿಗೊಮ್ಮೆ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನೂ ಲಘುವಾಗಿ ಪರಿಗಣಿಸಬಾರದು ಎಂದು ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಇಲಾಖೆಯ ಅಧಿಕಾರಿ ಡಾ| ಮಹೇಶ ಬಿರಾದಾರ ಮಾತನಾಡಿ, ಸಾರ್ವಜನಿಕರಲ್ಲಿ ಕಣ್ಣಿನ ಆರೋಗ್ಯದ ಅರಿವು ಮೂಡಿಸಲು ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ನೇತ್ರ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಈ ದಿಸೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ವೆಲ್‌ಮೆಗ್ನಾ ಆಸ್ಪತ್ರೆಯ ಆಡಳಿತಾಧಿಕಾರಿ ಫಿಲೋಮನ್‌ರಾಜ್ ಪ್ರಸಾದ ಮಾತನಾಡಿ, ಜಿಲ್ಲಾ ಅಂಧತ್ವ ನಿಯಂತ್ರಣ ಇಲಾಖೆ ಸಹಯೋಗದಲ್ಲಿ ವೆಲ್‌ಮೆಗ್ನಾ ನೇತ್ರ ಆಸ್ಪತ್ರೆಯು ಜಿಲ್ಲೆಯಲ್ಲಿ ಅಂಧತ್ವ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮೂಲಕ ಬಡ ರೋಗಿಗಳಿಗೆ ನೆರವಾಗುತ್ತಿದೆ ಎಂದರು.
ಇಲಾಖೆಯ ಸಂಜು ಮಲಗಿಕರ್, ಅಶೋಕ, ರಾಜಶೇಖರ, ಡಾ| ವೀರೇಂದ್ರ ಪಾಟೀಲ, ಜಾಥಾ ಸಂಯೋಜಕ ಪುಟ್ಟರಾಜ ಬಲ್ಲೂರಕರ್, ಸುದೇಶ್, ಪ್ರಕಾಶ ಓ.ಟಿ, ವೆಲ್‌ಮೆಗ್ನಾ ಆಸ್ಪತ್ರೆಯ ವ್ಯವಸ್ಥಾಪಕ ಸತೀಶ್, ರಮೇಶ ಇದ್ದರು.