ಮೈಸೂರು: ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರದ ವಿವಿಧ ನರ್ಸಿಂಗ್ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಆಯುರ್ವೇದ ನಡಿಗೆ ಆರೊಗ್ಯದೆಡೆಗೆ ಎಂಬ ಆಶಯದಲ್ಲಿ ಆಯುರ್‌ನಡಿಗೆ ಜಾಥಾ ನಡೆಸಿದರು.
ವಿಶ್ವ ಆಯುರ್ವೇದ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ, ಜೆಎಸ್‌ಎಸ್ ಆಯುರ್ವೇದ ಮಹಾವಿದ್ಯಾಲಯ, ಆಯುರ್ವೇದ ಸಂಶೋಧನಾ ಕೇಂದ್ರ, ಜಿಎಸ್‌ಎಸ್‌ಎಸ್ ಫೌಂಡೇಶನ್‌ನಿಂದ ಆಯುರ್ವೇದ ಗಿಡಮೂಲಿಕೋತ್ಸವ ಮತ್ತು ಆಯುರ್‌ನಡಿಗೆ ಜಾಥಾಕ್ಕೆ ಮೇಯರ್ ಎಂ.ಜೆ.ರವಿಕುಮಾರ್ ಚಾಲನೆ ನೀಡಿದರು.
ಜಾಥಾದಲ್ಲಿ ಹೆಜ್ಜೆಹಾಕಿದ ನೂರಾರು ನರ್ಸಿಂಗ್ ವಿದ್ಯಾರ್ಥಿಗಳು ಉತ್ತಮ ಆರೋಗ್ಯಕ್ಕೆ ಮನೆ ಆಹಾರವೇ ಮದ್ದು, ಯೋಗದಿಂದ ರೋಗ ದೂರ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾದಿಂದ ಆರಂಭಗೊಂಡ ಜಾಥಾ, ದೊಡ್ಡ ಗಡಿಯಾರ, ಗಾಂಧಿಚೌಕ, ಕೆ.ಆರ್ ವೃತ್ತ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಯೋಗನರಸಿಂಹಸ್ವಾಮಿ ದೇವಸ್ಥಾನ ಸಂಸ್ಥಾಪಕ ಪ್ರೊ.ಬಾಷ್ಯಂ ಸ್ವಾಮೀಜಿ, ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಸಹಾಯಕ ನಿರ್ದೇಶಕ ಡಾ.ಲಕ್ಷಿನಾರಾಯಣ ಶೆಣೈ, ಪ್ರಾಂಶುಪಾಲ ಡಾ.ಸತ್ಯಮೂರ್ತಿ, ಜೆಎಸ್‌ಎಸ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸುಧಾಕರ ಶೆಟ್ಟಿ, ಜಿಎಸ್‌ಎಸ್‌ಎಸ್ ಫೌಂಡೇಷನ್‌ನ ಶ್ರೀಹರಿ ಸೇರಿದಂತೆ ಜೆಎಸ್‌ಎಸ್ ಆಯುವೇದಿಕ್ ಕಾಲೇಜು, ಸರ್ಕಾರಿ ಆಯುರ್ವೇದಿಕ್ ಕಾಲೇಜು ಸೇರಿದಂತೆ ವಿವಿಧ ಆಯುವೇದಿಕ್ ಕಾಲೇಜಿನ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.