Advertisement

ಕೃಷಿ ಕಾಯ್ದೆ ರದ್ದತಿಗೆ ಒತ್ತಾಯಿಸಿ ಜಾಥಾ

01:23 PM Feb 27, 2022 | Team Udayavani |

ಯಾದಗಿರಿ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ರೈತ ವಿರೋಧಿ ಕೃಷಿ ಸಂಬಂಧಿಸಿದ ಕಾಯ್ದೆಗಳನ್ನು ಕೂಡಲೇ ರದ್ದು ಪಡಿಸುವಂತೆ ಆಗ್ರಹಿಸಿ ಜನಾಂದೋಲನ ಮಾಹಾಮೈತ್ರಿಯ ವತಿಯಿಂದ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ ತಿಳಿಸಿದ್ದಾರೆ.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಜಾಥಾ ಮಾ. 1ರಂದು ಪ್ರಾರಂಭಿಸಿ ಮಾ. 15ರಂದು ಬೆಂಗಳೂರು ತಲುಪಲಿದೆ. ಮತ್ತೊಂದು ಜಾಥಾ ಚಾಮರಾಜನಗರ ಜಿಲ್ಲೆಯ ಮಲೆಮಹಾದೇಶ್ವರ ಬೆಟ್ಟದಿಂದ ಮಾ. 9ರಿಂದ ಪ್ರಾರಂಭಗೊಂಡು ಮಾ. 15ರಂದು ಬೆಂಗಳೂರು ತಲುಪಲಿದೆ. ಎರಡು ಜಾಥಾಗಳು ಒಟ್ಟಿಗೆ ಸೇರಿದ ನಂತರ ಬೆಂಗಳೂರಿನ ಮೌರ್ಯ ಸರ್ಕಲ್‌ ಬಳಿ ಸಮಾರೋಪ ಸಮಾರಂಭ ನಡೆಯಲಿದ್ದು, ಕೃಷಿ ಕಾಯ್ದೆ ರದ್ದತಿಗೆ ಸರ್ಕಾರವನ್ನು ಆಗ್ರಹಿಸಲಿದ್ದೇವೆ ಎಂದು ಹಿರೇಮಠ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ ವಕೀಲರಾದ ಪ್ರಶಾಂತ್‌ ಭೂಷಣ್‌, ಹಿರಿಯ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಸಂಘಟನೆಗಳ ಪ್ರಮುಖರು, ಸಾಮಾಜಿಕ ಹೋರಾಟಗಾರರು, ಕನ್ನಡಪರ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದರು.

ಕೇಂದ್ರ ಕೃಷಿ ಸಂಬಂಧಿತ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ರೈತರು ಒಂದು ವರ್ಷಗಳ ಕಾಲ ಪ್ರತಿಭಟನೆ ನಡೆಸಿದರು. ಮೇಲ್ನೋಟಕ್ಕೆ ರೈತರ ಹಿತ ಕಾಪಾಡಲು ಕಾಯ್ದೆಗಳನ್ನು ವಾಪಸ್‌ ಪಡೆಯಲಾಗುತ್ತಿದೆ ಎಂದು ಸರ್ಕಾರ ಹೇಳಿದರೂ ಉತ್ತರಪ್ರದೇಶ, ಪಂಜಾಬ್‌ ಸೇರಿದಂತೆ ಮತ್ತೆರಡು ರಾಜ್ಯಗಳ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಲಾಗಿದೆ. ಒಟ್ಟಾರೆ ಇದು ರೈತರ ಗೆಲುವಾಗಿದೆ. ಆದಷ್ಟು ಬೇಗ ಕೇಂದ್ರ ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಹಿರೇಮಠ ಒತ್ತಾಯಿಸಿದರು.

ಕಾಯ್ದೆಗಳ ವಿರುದ್ಧ ಜನಜಾಗೃತಿ ಮೂಡಿಸುವುದು ಅವಶ್ಯಕವಿದ್ದು, ಜಾಥಾದ ಉದ್ದಕ್ಕೂ ನಮ್ಮ ಸಂಘಟನೆ ಈ ಕೆಲಸ ಮಾಡಲಿದೆ. ಇದೇ ಸಂದರ್ಭದಲ್ಲಿ ಆಯಾ ಕ್ಷೇತ್ರಗಳ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ ಕೂಡಾ ಏರ್ಪಡಿಸಲಿದ್ದು, ಒಂದು ವೇಳೆ ಶಾಸಕರು ಸಂವಾದರಲ್ಲಿ ಭಾಗಿಯಾಗಲು ಒಪ್ಪದಿದ್ದರೆ ಅವರ ಕಚೇರಿಗಳ ಮುಂದೆ ಒಂದು ತಾಸು ಮೌನ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Advertisement

ರೈತರ ವಿಷಯದಲ್ಲಿ ಸರ್ಕಾರಗಳು ತಮ್ಮ ಬದ್ಧತೆ ತೋರಿಸುವಲ್ಲಿ ವಿಫಲವಾಗಿವೆ ಎಂದು ದೂರಿದ ಹಿರೇಮಠ ಅವರು, ಡಾ| ಸ್ವಾಮಿನಾಥನ್‌ ವರದಿ ಜಾರಿಗೆ ತರಲು ಹಾಗೂ ಎಂಎಸ್‌ಪಿ ದರದಲ್ಲಿ ರೈತರು ಬೆಳೆದ ಬೆಳೆಯನ್ನು ಖರೀದಿಸಲು ಮತ್ತು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಸರ್ಕಾರಗಳನ್ನು ಒತ್ತಾಯಿಸುತ್ತಲೇ ಬಂದಿದ್ದರೂ ರೈತರ ಬೇಡಿಕೆ ಇದೂವರೆಗೆ ಈಡೇರಿಲ್ಲ ಎಂದು ಸರ್ಕಾರಗಳ ವಿರುದ್ಧ ಹರಿಹಾಯ್ದರು.

ಹಿಜಾಬ್‌ ವಿಚಾರದಲ್ಲಿ ರಾಜಕೀಯ

ಹಿಜಾಬ್‌ ವಿಚಾರವನ್ನು ದೊಡ್ಡದು ಮಾಡಿ, ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇದೊಂದು ಗಂಭೀರ ವಿಷಯವಾಗಿದ್ದು, ಈ ವಿಚಾರದಲ್ಲಿ ಸಮಗ್ರ ಚಿಂತನೆ ನಡೆಸುವ ಅಗತ್ಯವಿದೆ. ಜೊತೆಗೆ ಅಮೂಲಾಗ್ರ ಬದಲಾವಣೆಯೂ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಖಾಜಾ ಅಸ್ಲಂ ಹಾಗೂ ಹಿರಿಯ ವಕೀಲರಾದ ಭಾಸ್ಕರರಾವ್‌ ಮುಡಬೂಳ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next