Advertisement

ಜಸ್ಪ್ರೀತ್ ಬುಮ್ರಾಗೆ ಟೀಂ ಇಂಡಿಯಾ ನಾಯಕತ್ವ: ಹೊಸ ಪ್ರಯೋಗಕ್ಕೆ ಮುಂದಾದ ಬಿಸಿಸಿಐ

06:05 PM Aug 03, 2023 | ಕೀರ್ತನ್ ಶೆಟ್ಟಿ ಬೋಳ |

ಹಲವು ತಿಂಗಳಿನಿಂದ ಟೀಂ ಇಂಡಿಯಾದಿಂದ ಹೊರಗಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರು ಐರ್ಲೆಂಡ್ ವಿರುದ್ಧದ ಪ್ರವಾಸದೊಂದಿಗೆ ಮತ್ತೆ ತಂಡಕ್ಕೆ ಮರಳಿದ್ದಾರೆ. ಅದೂ ತಂಡದ ನಾಯಕನಾಗಿ. ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಆಡಲಿದ್ದು, ಯುವ ಪಡೆಯನ್ನು ಕಟ್ಟಲಾಗಿದೆ. ವರ್ಷದ ಬಳಿಕ ವೃತ್ತಿಪರ ಕ್ರಿಕೆಟ್ ಆಡಲಿರುವ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಬಳಿಕ ಜಸ್ಪ್ರೀತ್ ಬುಮ್ರಾ ಯಾವುದೇ ಕ್ರಿಕೆಟ್ ಪಂದ್ಯವಾಡಿಲ್ಲ. ಕಳೆದ ಹಲವು ತಿಂಗಳಿನಿಂದ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆರೈಕೆ ಪಡೆದ ಪುನರಾಗಮನದ ತಯಾರಿಯಲ್ಲಿದ್ದಾರೆ. ವಿವಿಎಸ್ ಲಕ್ಷ್ಮಣ್ ಮತ್ತವರ ತಂಡದವು ಬುಮ್ರಾ ಆರೋಗ್ಯ ಮತ್ತು ಫಿಟ್ನೆಸ್ ಸುಧಾರಣೆಯ ಕಡೆ ಗಮನ ಹರಿಸಿದೆ.

ಜಸ್ಪ್ರೀತ್ ಬುಮ್ರಾ ಅವರು ಇದುವರೆಗೆ ಸೀಮಿತ ಓವರ್ ಮಾದರಿಯಲ್ಲಿ ಇದುವರೆಗೂ ಟೀಂ ಇಂಡಿಯಾವನ್ನು ಮುನ್ನಡೆಸಿಲ್ಲ. ಒಂದು ಟೆಸ್ಟ್ ಪಂದ್ಯದಲ್ಲಿ ಮಾತ್ರ ಟೀಂ ಇಂಡಿಯಾದ ಕ್ಯಾಪ್ಟೆನ್ಸಿ ಹೊಣೆ ಹೊತ್ತಿದ್ದಾರೆ.

ಇಎಸ್ ಪಿಎನ್ ವರದಿಯ ಪ್ರಕಾರ ಆಯ್ಕೆಗಾರರು ಐರ್ಲೆಂಡ್ ಸರಣಿಗೆ ಜಸ್ಪ್ರೀತ್ ಬುಮ್ರಾ ಬದಲಿಗೆ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವ ವಹಿಸಲು ಯೋಚಿಸಿದ್ದರು. ಏಷ್ಯನ್ ಗೇಮ್ಸ್ ನಲ್ಲೂ ಗಾಯಕ್ವಾಡ್ ಅವರೇ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಆದರೆ ಜಸ್ಪ್ರೀತ್ ಬುಮ್ರಾ ಅವರು ತಂಡ ಮುನ್ನಡೆಸಲು ಉತ್ಸುಕತೆ ತೋರಿದ ಕಾರಣ ಅವರ ಹೆಗಲಿಗೆ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗಿದೆ.

Advertisement

ಆದರೆ ಬುಮ್ರಾ ಅವರಿಗೆ ನಾಯಕತ್ವ ನೀಡಿದ್ದು ಸರಿಯಾದ ನಿರ್ಧಾರ ಎಂದು ಹಲವರು ವಿಶ್ಲೇಷಿಸಿದ್ದಾರೆ. ಅದಕ್ಕೆ ಕಾರಣಗಳನ್ನು ಹುಡುಕಿದರೆ ಹಲವು ನಮ್ಮ ಮುಂದೆ ಬರುತ್ತವೆ.

ಶಾಂತ ಸ್ವಭಾವದ ಆಟಗಾರ

ಟಿ20 ಕ್ರಿಕೆಟ್ ನಲ್ಲಿ ಕೆಲವೇ ಕ್ಷಣದಲ್ಲಿ ಪಂದ್ಯದ ಬದಲಾಗುತ್ತದೆ. ಈ ವೇಳೆ ಶಾಂತ ಸ್ವಭಾವದ ಆಟಗಾರ ನಾಯಕನಾಗಿದ್ದರೆ ಪಂದ್ಯವನ್ನು ಅರ್ಥೈಸುವುದು ಸುಲಭ. ಇದು ಈ ಹಿಂದೆಯೂ ಸಾಬೀತಾಗಿದೆ. ಬುಮ್ರಾ ಕೂಡಾ ಶಾಂತ ಸ್ವಭಾವದ ಆಟಗಾರನಾಗಿದ್ದು ಇದು ಅವರಿಗೆ ಸಹಾಯ ಮಾಡಬಹುದು.

ಟೀಂ ಇಂಡಿಯಾದಲ್ಲಾಗಲಿ, ಮುಂಬೈ ಇಂಡಿಯನ್ಸ್ ತಂಡದಲ್ಲಾಗಲಿ ಬೌಲಿಂಗ್ ವಿಭಾಗವನ್ನು ಲೀಡ್ ಮಾಡುವ ಬುಮ್ರಾಗೆ ಜವಾಬ್ದಾರಿ ಹೊರುವುದು ಗೊತ್ತು. ಹೀಗಾಗಿ ನಾಯಕನಾಗಿ ಹೆಚ್ಚಿನ ಸಂಕಷ್ಟ ನೀಡದು.

ಕಠಿಣ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಬುಮ್ರಾ ಈಗಾಗಲೇ ಸಾಬೀತುಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಜಾಕ್ ಲೀಚ್ ಅವರ ಕ್ಯಾಚ್ ಅನ್ನು ಕೈಬಿಟ್ಟ ಕ್ಷಣದಲ್ಲಿ ಅದು ಅರಿವಿಗೆ ಬಂದಿತ್ತು. ದಿನದ ಅಂತ್ಯದ ವೇಳೆಗೆ ಬೆನ್ ಸ್ಟೋಕ್ಸ್‌ ರನ್ನು ಕ್ರೀಸ್‌ ಗೆ ತರಬಹುದಾಗಿದ್ದ ಕಾರಣ ಲೀಚ್ ವಿಕೆಟ್ ನಿರ್ಣಾಯಕವಾಗಿತ್ತು. ನಾಯಕತ್ವ ವಹಿಸಿದ್ದ ಬುಮ್ರಾಗೆ ಹತಾಶೆಗೊಳ್ಳಲು ಅವಕಾಶವಿತ್ತು, ಆದರೆ ಬುಮ್ರಾ ಮುಖದಲ್ಲಿ ನಗುವಿನೊಂದಿಗೆ ಕೊಹ್ಲಿ ಅವರ ಪ್ರಯತ್ನವನ್ನು ಶ್ಲಾಘಿಸಿದರು.

ಐರ್ಲೆಂಡ್ ವಿರುದ್ಧದ ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಹೊಸಬರಾದ ಸಾಕಷ್ಟು ಯುವಕರಿದ್ದು, ಜಸ್ಪ್ರೀತ್ ಬುಮ್ರಾ ಅವರಂತಹ ಸಂಯೋಜಿತ ಆಟಗಾರನನ್ನು ನಾಯಕನಾಗಿ ಹೊಂದಿರುವುದು ಉತ್ತಮ ನಿರ್ಣಯದ ಕ್ರಮವಾಗಿದೆ.

ಪ್ಯಾಟ್ ಕಮಿನ್ಸ್ ನಂತೆ …

ಆಸ್ಟ್ರೇಲಿಯಾದ ನಾಯಕನಾಗಿದ್ದ ಟಿಮ್ ಪೇನ್ ಅವರು ದಿಢೀರ್ ವಿದಾಯ ಹೇಳಿದ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಅವರಿಗೆ ಟೆಸ್ಟ್ ತಂಡದ ಹೊಣೆಗಾರಿಕೆ ವಹಿಸಿತ್ತು. ವೇಗದ ಬೌಲರ್ ಗೆ ನಾಯಕತ್ವ ನೀಡುವ ಬಗ್ಗೆ ಆರಂಭದಲ್ಲಿ ಹಲವು ಮಾತುಗಳು ಕೇಳಿಬಂದರೂ ಕಮಿನ್ಸ್ ಮಾತ್ರ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಮಿನ್ಸ್ ನಾಯಕತ್ವದಲ್ಲಿ ಆಡಿದ 21 ಟೆಸ್ಟ್ ಪಂದ್ಯಗಳಲ್ಲಿ ಆಸೀಸ್ 11 ಗೆಲುವು ಕಂಡಿದ್ದು ಐದು ಪಂದ್ಯಗಳು ಡ್ರಾ ಆಗಿವೆ.

ಪ್ಯಾಟ್ ಕಮಿನ್ಸ್ ಅವರು ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ 2023 ರ ಆಶಸ್ ಅನ್ನು ಉಳಿಸಿಕೊಂಡ ತಂಡದ ಮೇಲೆ ಭಾರಿ ಪ್ರಭಾವ ಬೀರಿದ್ದಾರೆ. ಕಮಿನ್ಸ್ ತನ್ನ ಫೀಲ್ಡ್ ಪ್ಲೇಸ್‌ಮೆಂಟ್‌ ಗಳು, ಬೌಲಿಂಗ್ ಬದಲಾವಣೆಗಳು ಮತ್ತು ಪಿಚ್ ಅರ್ಥೈಸುವ ಸಾಮರ್ಥ್ಯದಿಂದ ಮೆಚ್ಚುಗೆ ಪಡೆದಿದ್ದಾರೆ. ಸ್ವತಃ ಬೌಲರ್ ಆಗಿರುವುದರಿಂದ ನಾಯಕನಾಗಿ ಅಪಾರ ಲಾಭ ಪಡೆದಿದ್ದಾರೆ.

ಸ್ವತಃ ವೇಗಿ ಆಗಿರುವ ಜಸ್ಪ್ರೀತ್ ಬುಮ್ರಾ ಅವರು ಪ್ಯಾಟ್ ಕಮಿನ್ಸ್ ಹಿಂದೆ ಹೆಜ್ಜೆ ಹಾಕುತ್ತಿದ್ದಾರೆ. ವೇಗದ ತಂಡದ ಸಾರಥಿಯಾಗಿ ಅನುಭವವಿರುವ ಬುಮ್ರಾ ಕೂಡಾ ಕಮಿನ್ಸ್ ರಂತೆ ನಾಯಕನಾಗಿ ಯಶಸ್ಸು ಪಡೆಯಬಹುದು ಎನ್ನುವುದು ಲೆಕ್ಕಾಚಾರ.

ಬ್ಯಾಕಪ್ ಕ್ಯಾಪ್ಟನ್ ಅವಕಾಶ

ರೋಹಿತ್ ಶರ್ಮಾ ಪ್ರಸ್ತುತ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಐಪಿಎಲ್‌ ನಲ್ಲಿ ಗುಜರಾತ್ ಟೈಟಾನ್ಸ್ ಜೊತೆಗಿನ ಅಪಾರ ಯಶಸ್ಸಿನ ನಂತರ ಹಾರ್ದಿಕ್ ಪಾಂಡ್ಯ ವೈಟ್-ಬಾಲ್ ಕ್ರಿಕೆಟ್‌ ನಲ್ಲಿ ಉಪನಾಯಕನ ಪಾತ್ರವನ್ನು ವಹಿಸಿಕೊಂಡಿದ್ದಾರೆ.    ಮತ್ತೊಂದೆಡೆ, ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅಜಿಂಕ್ಯ ರಹಾನೆ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಯಿತು.

ಆದರೆ ಹಾರ್ದಿಕ್ ಪಾಂಡ್ಯ ಸದಾ ಗಾಯಕ್ಕೆ ತುತ್ತಾಗುವ ಆಟಗಾರ. ಹೀಗಾಗಿ ಅವರು ಹೇಗೆ ವರ್ಕ್ ಲೋಡ್ ನಿಭಾಯಿಸುತ್ತಾರೆ ಎಂದು ನೋಡಬೇಕಿದೆ. ಅಜಿಂಕ್ಯ ರಹಾನೆ ಟೆಸ್ಟ್ ತಂಡದಿಂದಲೂ ಹೊರ ಬಿದ್ದಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಟಕ್ಕೆ ಮರಳಿ ಬಂದಿದ್ದಾರೆ. ಅಲ್ಲದೆ ಇನ್ನು ಎಷ್ಟು ವರ್ಷ ಆಡಬಲ್ಲರು ಎನ್ನುವುದೂ ಅನುಮಾನ. ಹೀಗಾಗಿ ಮೂರು ಮಾದರಿಯಲ್ಲಿ ನಿಯಮಿತವಾಗಿ ಆಡುವ ಆಟಗಾರರನ್ನು ನಾಯಕನಾಗಿ ತಂಡ ಎದುರು ನೋಡುತ್ತಿದೆ.

ಜಸ್ಪ್ರೀತ್ ಬುಮ್ರಾ ಅವರು ಮೂರು ಮಾದರಿ ಆಡುವ ಆಟಗಾರ. ಅಲ್ಲದೆ ಮೂರು ಮಾದರಿಯಲ್ಲಿ ತಂಡದ ಪ್ರಮುಖ ಆಟಗಾರ. ಐರ್ಲಂಡ್ ವಿರುದ್ಧದ ಸರಣಿಯಲ್ಲಿ ಬುಮ್ರಾ ನಾಯಕತ್ವದಿಂದ ಗಮನ ಸೆಳೆದರೆ ಮುಂದೆ ಕ್ಯಾಪ್ಟನ್ ಹುದ್ದೆಗೆ ಪ್ರಮುಖ ಪೈಪೋಟಿ ನೀಡುವುದು ಸಹಜ.

*ಕೀರ್ತನ್‌ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next