ದುಬಾೖ: ಓವಲ್ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ನೂತನ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನಕ್ಕೆ ಏರಿದ್ದಾರೆ. ಈ ಪಂದ್ಯದಲ್ಲಿ ಬುಮ್ರಾ 4 ವಿಕೆಟ್ ಕಿತ್ತು ಮಿಂಚಿದ್ದರು. ಇದರೊಂದಿಗೆ ಸರಣಿಯಲ್ಲಿ ಬುಮ್ರಾ ವಿಕೆಟ್ ಗಳಿಕೆ 18ಕ್ಕೆ ಏರಿತು.
ಓವಲ್‌ನ ಫ್ಲ್ಯಾಟ್ ಟ್ರ್ಯಾಕ್ ಮೇಲೆ ರಿವರ್ಸ್ ಸ್ವಿಂಗ್ ಮ್ಯಾಜಿಕ್ ನಡೆಸುವ ಮೂಲಕ ಬುಮ್ರಾ ಅಂತಿಮ ದಿನದಾಟದಲ್ಲಿ ಆಂಗ್ಲರನ್ನು ಕಾಡಿದ್ದರು. ಒಂದು ಹಂತದಲ್ಲಿ 6 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 2 ರನ್ ನೀಡಿ 2 ವಿಕೆಟ್ ಉರುಳಿಸಿದ್ದರು. ಬುಮ್ರಾ ಮೋಡಿಗೆ ಸಿಲುಕಿದವರು ಓಲೀ ಪೋಪ್ ಮತ್ತು ಜಾನಿ ಬೇರ್‌ಸ್ಟೊ. ಈ ವಿಕೆಟ್‌ಗಳ ಪತನದೊಂದಿಗೆ ಇಂಗ್ಲೆಂಡ್ ಸೋಲಿನತ್ತ ಜಾರತೊಡಗಿತು.
ಈ ಸರಣಿಯಲ್ಲಿನ್ನೂ ಆಡುವ ಅವಕಾಶ ಪಡೆಯದ ಆರ್. ಅಶ್ವಿನ್ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾರೆ.
ಇದೇ ವೇಳೆ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ 2 ಸ್ಥಾನ ಕುಸಿದು 7ನೇ ಸ್ಥಾನಕ್ಕೆ ಬಂದಿದ್ದಾರೆ. 7 ವಿಕೆಟ್ ಉರುಳಿಸುವ ಜತೆಗೆ 68 ರನ್ ಬಾರಿಸಿದ ಕ್ರಿಸ್ ವೋಕ್ಸ್ ಆಲ್‌ರೌಂಡರ್ ರ್‍ಯಾಂಕಿಂಗ್ ಯಾದಿಯಲ್ಲಿ ಮರಳಿ ಟಾಪ್-10ನಲ್ಲಿ ಕಾಣಿಸಿಕೊಂಡರು.
ಶತಕವೀರ ರೋಹಿತ್ ಶರ್ಮ ಜೀವನಶ್ರೇಷ್ಠ 813 ಅಂಕ ಗಳಿಸಿದ್ದು, 5ನೇ ಸ್ಥಾನದಲ್ಲಿದ್ದಾರೆ. ಕಳೆದ ರ್‍ಯಾಂಕಿಂಗ್ ಪರಿಷ್ಕರಣೆಯ ವೇಳೆ ಅವರು ಕೊಹ್ಲಿಯನ್ನು ಹಿಂದಿಕ್ಕಿದ್ದರು. ರೋಹಿತ್ ಈಗ ಕಪ್ತಾನನಿಗಿಂತ 30 ಅಂಕಗಳ ಮುನ್ನಡೆಯಲ್ಲಿದ್ದಾರೆ.