Advertisement

ಶಂಕರಪುರ ಮಲ್ಲಿಗೆ ದರ ಭಾರೀ ಕುಸಿತ; ಅಟ್ಟೆಗೆ 70 ರೂ.!

02:10 AM Jun 07, 2018 | Team Udayavani |

ಶಿರ್ವ: ಹೆಸರಾಂತ ಶಂಕರಪುರ ಮಲ್ಲಿಗೆ ಬೆಲೆ ಕಳೆದ ಮೂರ್ನಾಲ್ಕು ದಿನಗಳಿಂದ ಬೇಡಿಕೆ ಇಲ್ಲದ ಪರಿಣಾಮ ಭಾರೀ ಕುಸಿತ ಕಂಡಿದೆ. ಸೋಮವಾರ ಅಟ್ಟೆಗೆ 90 ರೂ. ಇದ್ದರೆ, ಮಂಗಳವಾರ 70 ರೂ. ಮತ್ತು ಬುಧವಾರವೂ 70 ರೂ. ದರ ಇದ್ದು, ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

Advertisement

ಬೆಳೆಗಾರರ ಸಂಕಷ್ಟ
ಉಡುಪಿ ತಾಲೂಕಿನ 10 ಗ್ರಾಮಗಳಲ್ಲಿ ಸುಮಾರು 5000 ಮಲ್ಲಿಗೆ ಬೆಳೆಗಾರರಿದ್ದು, ಸುಮಾರು 103 ಹೆಕ್ಟೇರ್‌ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿದೆ. ಇಲ್ಲಿ ಉತ್ತಮ ದರವಿರುವಾಗ ಬೆಳೆ ಇರುವುದಿಲ್ಲ, ಬೆಳೆ ಇರುವಾಗ ದರ ಇರುವುದಿಲ್ಲ ಹೀಗಾಗಿ ಮಲ್ಲಿಗೆ ಬೆಳೆಗಾರರಿಗೂ ಸಂಕಷ್ಟ ತಪ್ಪಿದ್ದಲ್ಲ. 800 ಹೂಗಳನ್ನು ಪೋಣಿಸಿದಾಗ 1 ಚೆಂಡು ಹೂ, 4 ಚೆಂಡು ಸೇರಿದರೆ 1 ಅಟ್ಟೆ ಹೂವು ಎಂದು ನಿಗದಿ. ಒಂದು ಅಟ್ಟೆಗೆ ಗರಿಷ್ಠ ಎಂದರೆ 820ರೂ.ಸಿಗುತ್ತದೆ. ಬೇಡಿಕೆ ಎಷ್ಟೇ ಹೆಚ್ಚಾದರೂ ಈ ದರವೇ ಅಂತಿಮ. ಆದರೆ ಕನಿಷ್ಠ ದರ ಎಂದಿಲ್ಲ. ಅತಿ ಹೆಚ್ಚು ಬೇಡಿಕೆ ಇರುವ ಸಂದರ್ಭ ಮಲ್ಲಿಗೆ ಮಾರಾಟಗಾರರು ಮಲ್ಲಿಗೆ ಹೂವನ್ನು ರೂ.1,000 ದಿಂದ 2000 ರೂ.ವರೆಗೂ ಮಾರುತ್ತಾರೆ. ಆದರೆ ಬೆಳೆಗಾರರಿಗೆ ಸಿಗುವುದು 820 ರೂ. ಮಾತ್ರ.

ದರ ಕುಸಿತ ಯಾಕೆ? 
ಮಳೆ-ಬಿಸಿಲಿನ ನಡುವೆ ಮಲ್ಲಿಗೆ ಇಳುವರಿ ಹೆಚ್ಚಾಗಿದೆ. ಈಗ ಜಾತ್ರೆ ಉತ್ಸವಾದಿಗಳಿಲ್ಲ. ಮೌಡ್ಯ ಹಿನ್ನೆಲೆಯಲ್ಲಿ ಯಾವುದೇ ಶುಭ ಸಮಾರಂಭಗಳೂ ಇಲ್ಲ. ಇನ್ನು ದೂರದ ಊರುಗಳಾದ ಮುಂಬಯಿ ವಿದೇಶಗಳಿಗೂ ಕಡಿಮೆ ಪ್ರಮಾಣದಲ್ಲಿ ರವಾನೆಯಾಗುತ್ತಿದೆ. ಆದ್ದರಿಂದ ಬೆಲೆ ವ್ಯಾಪಕ ಕುಸಿತ ಕಂಡಿದೆ.  


ಕನಿಷ್ಠ ದರ ನಿಗದಿ ಬೇಕು 

ಮಲ್ಲಿಗೆ ಅಟ್ಟೆಗೆ ಕನಿಷ್ಠವೆಂದರೂ 200 ರೂ. ನಿಗದಿಪಡಿಸಬೇಕು ಎಂಬುದು ಕೃಷಿಕರ ಒತ್ತಾಯ. ಕಾರಣ ಹೂಕಟ್ಟುವವರ ಅಭಾವದಿಂದಾಗಿ 1 ಚೆಂಡು ಹೂವು ಕಟ್ಟಲು 20 ರೂ.ನಂತೆ 1 ಅಟ್ಟೆಗೆ 80 ರೂ. ನೀಡಬೇಕು. ಇದರ ಹಗ್ಗವೂ ದುಬಾರಿ. ಬಾಳೆಯ ಹಗ್ಗದ ಬೆಲೆಯೂ ಸೇರಿದಾಗ ಮಾರುಕಟ್ಟೆ ಬೆಲೆಗಿಂತ ಖರ್ಚು ಹೆಚ್ಚಾಗಿ ಬೆಳೆಗಾರನಿಗೆ ನಷ್ಟವೇ ಆಗುತ್ತದೆ. ಇನ್ನು ಕೃಷಿಕ ದಿನಕ್ಕೆ 5 ಗಂಟೆ ಕೆಲಸ ಮಾಡಬೇಕು. ಇದರೊಂದಿಗೆ ಗಿಡಗಳಿಗೆ ರೋಗಬಾಧೆ, ಗೊಬ್ಬರ ಪೂರೈಕೆಯೂ ಅಗತ್ಯವಿದ್ದು ಶ್ರಮಕ್ಕೆ ಪ್ರತಿಫ‌ಲವೇನು? ಎಂದು ಕೃಷಿಕರು ಪ್ರಶ್ನಿಸುತ್ತಾರೆ. ಅಲ್ಲದೇ ಇತರ ಬೆಳೆಗಳಿಗೆ ಸಿಗುವ ವಿಮಾ ಪರಿಹಾರ ಇದಕ್ಕೂ ಸಿಗಬೇಕು ಎಂದು ಕೃಷಿಕರು ಆಗ್ರಹಿಸುತ್ತಾರೆ.

ಬೇಡಿಕೆಗೆ ಅನುಗುಣವಾಗಿ ದರ
ಮಳೆ ಬಂದು ಮಲ್ಲಿಗೆ ಹೂವು ಉತ್ಪಾದನೆ ಜಾಸ್ತಿ ಆಗಿದೆ. ಶುಭ ಸಮಾರಂಭಗಳಿಲ್ಲದೆ ಹೂವಿಗೆ ಬೇಡಿಕೆ ಕಡಿಮೆಯಾಗಿ ದರ ಕುಸಿತ ಕಂಡಿದೆ. ಹೂವಿನ ಬೇಡಿಕೆಗನುಗುಣವಾಗಿ ದರ ನಿಗದಿಯಾಗುತ್ತದೆ. ಮಲ್ಲಿಗೆ ಬೆಳೆ ಕಡಿಮೆಯಾಗಿ ಶುಭ ಸಮಾರಂಭಗಳು ಪ್ರಾರಂಭವಾದಲ್ಲಿ ದರ ಹೆಚ್ಚಾಗಲಿದೆ.
– ವಿನ್ಸೆಂಟ್‌ ರೊಡ್ರಿಗಸ್‌,  ಶಂಕರಪುರ ಮಲ್ಲಿಗೆ ವ್ಯಾಪಾರಿ

Advertisement

ಮಧ್ಯವರ್ತಿಗಳ ಹಾವಳಿ
ಮಧ್ಯವರ್ತಿಗಳ ಹಾವಳಿಯಿಂದಾಗಿ ಬೆಳೆಗಾರರಿಗೆ ಉತ್ತಮ ದರ ಸಿಗುತ್ತಿಲ್ಲ. ಮಲ್ಲಿಗೆ ಬೆಳೆಗಾರರು ಲಾಭವಿಲ್ಲದೆ ಪರದಾಡುತ್ತಿದ್ದು ಮಾರುಕಟ್ಟೆ ವ್ಯವಸ್ಥೆ ಬದಲಾಗಬೇಕಿದೆ.
– ವೈಲೆಟ್‌ ಕ್ಯಾಸ್ತಲಿನೊ, ಪಂಜಿಮಾರು, ಮಲ್ಲಿಗೆ ಬೆಳೆಗಾರ್ತಿ

ರೈತ ಉತ್ಪಾದಕ ಕಂಪೆನಿ
ಮಲ್ಲಿಗೆ ಬೆಳೆಗಾರರ ಸಂಕಷ್ಟಕ್ಕೆ ‘ರೈತ ಉತ್ಪಾದಕ ಕಂಪೆನಿ’ ಸ್ಥಾಪಿಸುವುದರ ಮೂಲಕ ಉತ್ಪಾದನೆಗೆ ಬೇಕಾದ ತಂತ್ರಜ್ಞಾನ, ಸಹಾಯಧನ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಮಲ್ಲಿಗೆ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬೇಕು. ಇದಕ್ಕೆ ಮಲ್ಲಿಗೆ ಬೆಳೆಗಾರರ ಸಹಕಾರ ಬೇಕಿದೆ.
– ಸಂಜೀವ ನಾಯ್ಕ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಉಡುಪಿ

ಮಲ್ಲಿಗೆ ದರ (ಅಟ್ಟೆಗೆ)
ಸೋಮವಾರ :
90 ರೂ.
ಮಂಗಳವಾರ : 70 ರೂ.
ಬುಧವಾರ : 70 ರೂ.

— ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next