ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯುತ್ತಿದೆ. ಉಭಯ ತಂಡಗಳೂ ಸಮಬಲದ ಹೋರಾಟ ನಡೆಸುತ್ತಿದೆ. ಆದರೆ ಸರಣಿಯಲ್ಲಿ ಆಗಾಗ ಮೈದಾನಕ್ಕೆ ನುಗ್ಗಿ ಕೀಟಲೆ ಮಾಡುತ್ತಿದ್ದ ವಿಚಿತ್ರ ಅಭಿಮಾನಿ ಜಾರ್ವೋ ಓವಲ್ ಟೆಸ್ಟ್ ಪಂದ್ಯದ ಎರಡನೇ ದಿನವೂ ಕೆಲ ಕಾಲ ಮೈದಾನದಲ್ಲಿ ಓಡಾಡಿ ಗಮನ ಸೆಳೆದರು.
ಭಾರತ ತಂಡದ ಅಭಿಮಾನಿಯಾಗಿರುವ ಜಾರ್ವೋ, ಟೀಂ ಇಂಡಿಯಾ ಜೆರ್ಸಿ ತೊಟ್ಟು ಮೈದಾನಕ್ಕೆ ಆಗಮಿಸಿದ್ದರು. ಈ ವೇಳೆ ಭಾರತ ತಂಡ ಬೌಲಿಂಗ್ ಮಾಡುತ್ತಿತ್ತು. ಕೈಯಲ್ಲಿ ಬಾಲ್ ಹಿಡಿದುಕೊಂಡು ಬಂದ ಜಾರ್ವೋ ತಾನು ಬೌಲಿಂಗ್ ಮಾಡಲು ಮುಂದಾದರು.
ಜಾರ್ವೋ ನಾನ್ ಸ್ಟ್ರೈಕ್ ನಲ್ಲಿದ್ದ ಇಂಗ್ಲೆಂಡ್ ಆಟಗಾರ ಜಾನಿ ಬೆರಿಸ್ಟೋ ಗೆ ಢಿಕ್ಕಿ ಹೊಡೆದರು. ಕೂಡಲೇ ಮೈದಾನಕ್ಕೆ ಆಗಮಿಸಿದ ಸೆಕ್ಯುರಿಟಿ ಸಿಬ್ಬಂದಿ ಜಾರ್ವೋನನ್ನು ಹಿಡಿದು ಮೈದಾನದಿಂದ ಹೊರಕ್ಕೆಳೆದುಕೊಂಡು ಹೋದರು.
ಇದನ್ನೂ ಓದಿ:ಟೆಸ್ಟ್ ತಂಡದಲ್ಲೂ ಅಶ್ವಿನ್ ರನ್ನೇಕೆ ಕಡೆಗಣಿಸಲಾಗುತ್ತಿದೆ?
ಘಟನೆಯನ್ನು ಐಸಿಬಿ ಗಂಭೀರವಾಗಿ ಪರಿಗಣಿಸಿದೆ. ಸೌತ್ ಲಂಡನ್ ಪೊಲೀಸರು ಜಾರ್ವೋನನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಜಾನಿ ಬೆರಿಸ್ಟೋಗೆ ಢಿಕ್ಕಿ ಹೊಡೆದ ಜಾರ್ವೋ, ಬೆರಿಸ್ಟೋಗೆ ಹಲ್ಲೆ ಮಾಡಲು ಯತ್ನಿಸಿದ್ದಾರೆಂದು ಅವರ ಬಂಧನವಾಗಿದೆ.
ಜಾರ್ವೋ ಸರಣಿಯಲ್ಲಿ ಮೂರು ಸಲ ಭದ್ರತೆ ಉಲ್ಲಂಘಿಸಿ ಮೈದಾನದೊಳಗೆ ನುಗ್ಗಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಗಂಭೀರ ಕ್ರಮ ಕೈಗೊಳ್ಳಬೇಕಿದೆ. ಒಂದು ವೇಳೆ ಭಾರತದಲ್ಲಿ ಇಂತಹ ಘಟನೆಗಳು ನಡೆದಿದ್ದರೆ ಏನಾಗುತ್ತಿತ್ತು ಊಹಿಸಿ? ಕೆಲವರಂತೂ ವಿರಾಟ್ ಕೊಹ್ಲಿಯ ರಾಜೀನಾಮೆಯನ್ನೇ ಬಯಸುತ್ತಿದ್ದರು ಎನ್ನುವಂತಹ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.