ಬೆಂಗಳೂರು: ಪಿಎಲ್‌ಡಿ ಬ್ಯಾಂಕ್ ಚುನಾವಣೆ ಗೊಂದಲದ ಮೂಲಕ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಕಂಟಕವಾಗಿರುವ ಜಾರಕಿಹೊಳಿ ಸಹೋದರರ ವರ್ಗಾವಣೆ ಬೇಡಿಕೆಗಳಿಗೆ ಮಣಿಯುವ ಮೂಲಕ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭವಾಗಿದೆ.
ರಮೇಶ್ ಜಾರಕಿಹೊಳಿ ಅವರ ಹೊಣೆಗಾರಿಕೆ ಪೌರಾಡಳಿತ ಇಲಾಖೆಯ ವಿವಿಧ ಗ್ರೇಡ್‌ನ 141 ಅಧಿಕಾರಿಗಳನ್ನು ಒಂದೇ ದಿನ ವರ್ಗಾವಣೆ ಮಾಡುವ ಮೂಲಕ ಅವರ ಬೇಡಿಕೆಗೆ ಮುಖ್ಯಮಂತ್ರಿ ಸ್ಪಂದಿಸುವ ಪ್ರಯತ್ನ ನಡೆಸಿದ್ದಾರೆ.
ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಕಡತ ಕಳುಹಿಸಿ ಒಂದು ತಿಂಗಳು ಕಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ ಸಚಿವ ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದರು. ಆದರೆ ಆ ಅಸಮಾಧಾನ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಸ್ಫೋಟಗೊಂಡಿತ್ತು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದ್ದ ರಮೇಶ್ ಜಾರಕಿಹೊಳಿ ವರ್ಗಾವಣೆ ವಿಚಾರದಲ್ಲಿ ಹಿನ್ನಡೆಯಾಗಿದ್ದರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು.
ನಾವು ಹೇಳಿದ ಅಧಿಕಾರಿಯ ಬದಲು ಬೆಳಗಾವಿ ಜಿಲ್ಲೆಯ ಅಧಿಕಾರಿಗಳನ್ನು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಶಿಫಾರಸ್ಸು ಮಾಡಿದವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಮಾಹಿತಿಯನ್ನು ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ಪೌರಾಡಳಿತ ಇಲಾಖೆಯ 53 ಮುಖ್ಯಾಯುಕ್ತರು, 14 ಸಹಾಯಕ ಕಾರ್ಯಪಾಲಕ ಇಂಜನಿಯರ್‌ಗಳು, 6 ಜನ ಪೌರಾಯುಕ್ತರು, 7 ಯೋಜನಾ ನಿರ್ದೇಶಕರು, 1 ಕಾರ್ಯಪಾಲಕ ಎಂಜನೀಯರ್, 8 ಸಮುದಾಯ ಸಂಘಟನಾಧಿಕಾರಿಗಳು, 36 ಸಹಾಯಕ ಎಂಜನೀಯರ್‌ಗಳು, 8 ಪರಿಸರ ಎಂಜನಿಯರ್‌ಗಳು, 8 ಲೆಕ್ಕಾಧಿಕಾರಿಗಳ ವರ್ಗಾವಣೆ ಮಾಡಲು ಸೂಚಿಸಿದ್ದರು. ಅದರಂತೆ ಸಂಜೆ ಆದೇಶ ಹೊರಡಿಸಲಾಗಿದೆ
ಈ ಹಿಂದೆ 2006 ರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಬೆಳಗಾವಿ ಜಾರಕಿಹೊಳಿ ಸಹೋದರರ ರೀತಿಯಲ್ಲಿಯೇ ಬಳ್ಳಾರಿಯ ರೆಡ್ಡಿ ಸಹೋದರರು ಅಲ್ಲಿನ ಜಿಲ್ಲಾಧಿಕಾರಿ ಹಾಗೂ ಪೊಲಿಸ್ ವರಿಷ್ಠಾಧಿಕಾರಿಯನ್ನು ತಮಗೆ ಬೇಕಾದವರನ್ನು ವರ್ಗಾವಣೆ ಮಾಡಬೇಕೆಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ಒಪ್ಪದಿದ್ದಾಗ 150 ಕೋಟಿ ರೂಪಾಯಿ ಗಣಿ ಲಂಚ ಆರೋಪವೂ ಕೇಳಿ ಬಂದಿತು. ಆ ಪ್ರಕರಣ ಸಮ್ಮಿಶ್ರ ಸರ್ಕಾರದ ಪತನಕ್ಕೂ ನಾಂದಿಯಾಯಿತು.