Advertisement

ಜಾರಕಿಹೊಳಿ ಸೋದರರಿಗೆ ನಾಯಕರಿಂದ ಸಡ್ಡು?

12:53 AM Jan 24, 2022 | Team Udayavani |

ಬೆಳಗಾವಿ: ರಾಜ್ಯ ಮತ್ತು ಜಿಲ್ಲಾ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹಾಗೂ ವರ್ಚಸ್ಸು ಹೊಂದಿರುವ ಜಾರಕಿಹೊಳಿ ಸಹೋ ದರರನ್ನು ಬಿಜೆಪಿ ರಾಜಕೀಯ ಚಟುವಟಿಕೆಗಳಿಂದ ದೂರವಿಡುವ ಪ್ರಯತ್ನ ನಡೆದಿದೆ. ಇದೇ ಹಾದಿಯಲ್ಲಿ ಬಿಜೆಪಿಯ ಎಲ್ಲ ಸಮುದಾಯದ ಮುಖಂಡರೆಲ್ಲ ಒಂದಾಗಿದ್ದಾರೆ ಎಂಬ ಗುಲ್ಲು ಶುರುವಾಗಿದೆ. ಎರಡು ದಿನಗಳ ಹಿಂದೆ ಅರಣ್ಯ ಸಚಿವ ಉಮೇಶ ಕತ್ತಿ ಮನೆಯಲ್ಲಿ ನಡೆದ ಜಿಲ್ಲೆಯ ಪ್ರಮುಖ ಮುಖಂಡರ ರಹಸ್ಯ ಸಭೆ ಈ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

Advertisement

ಸಭೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ಪಿ.ರಾಜೀವ್‌, ಶ್ರೀಮಂತ ಪಾಟೀಲ್‌, ಮಹೇಶ ಕುಮಟಳ್ಳಿ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮೊದಲಾದವರಿದ್ದರು. ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಾತ್ರ ಸಭೆಗೆ ಆಹ್ವಾನ ನೀಡಿರಲಿಲ್ಲ.

ಬೆಳಗಾವಿ ಉಪಚುನಾವಣೆ, ವಿಧಾನ ಪರಿಷತ್‌ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿ ತಾಂಶದ ಬಳಿಕ ಜಿಲ್ಲಾ ರಾಜಕೀಯ ಮೊದಲಿ ನಂತಿಲ್ಲ ಎನ್ನಲಾಗುತ್ತಿದೆ. ಮುಖ್ಯವಾಗಿ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲು, ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಹಿನ್ನಡೆಯು ರಮೇಶ ಜಾರಕಿಹೊಳಿ ಮತ್ತು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಅನುಮಾನದಿಂದ ನೋಡುವಂತೆ ಮಾಡಿದೆ.

ಡಿಸಿಸಿ ಬ್ಯಾಂಕ್‌ ವಿಚಾರದಲ್ಲಿ ಕತ್ತಿ ಸಹೋದರರ ಜತೆ ಮುನಿಸಿಕೊಂಡಿದ್ದ ಲಕ್ಷ್ಮಣ ಸವದಿ ಅವರು ಉಮೇಶ ಕತ್ತಿ ಜತೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಮೇಲೆ ಸ್ಪರ್ಧಿಸುವ ಅವಕಾಶ ಇದ್ದರೂ ಪಕ್ಷೇತರರ ಹೆಸರಿನಲ್ಲಿ ತಮ್ಮ ಬೆಂಬಲಿಗರನ್ನು ನಿಲ್ಲಿಸಿ ಅವರನ್ನು ಗೆಲ್ಲಿಸಿ ತಂದಿದ್ದು, ಪಕ್ಷದ ನಿಷ್ಠಾವಂತ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣು

ಇನ್ನೊಂದೆಡೆ ಉಮೇಶ ಕತ್ತಿ ಅವರಿಗೆ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ ಡಿಸಿಸಿ ಬ್ಯಾಂಕ್‌ನಲ್ಲಿ ತಮ್ಮ ಶಕ್ತಿ ಇನ್ನೂ ಗಟ್ಟಿ ಮಾಡಿಕೊಳ್ಳಲು ಈ ಸಭೆ ಕರೆದಿದ್ದರು. ಇದೇ ಸಮಯದಲ್ಲಿ ಕೆಲ ಶಾಸಕರಿಗೆ ಸಚಿವ ಸ್ಥಾನ ಹಾಗೂ ನಿಗಮ-ಮಂಡಳಿ ಆಸೆಯನ್ನೂ ಸಹ ತೋರಿಸಲಾಗಿದೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಸಂಪುಟ ಪುನಾರಚನೆ ವೇಳೆ ಕತ್ತಿ ಹಾಗೂ ಜೊಲ್ಲೆ ಅವರನ್ನು ಕೈಬಿಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ಸ್ಥಾನಮಾನ ಚರ್ಚೆ
ಜಿಲ್ಲಾ ರಾಜಕೀಯದ ಜತೆಗೆ ಶಿವರಾತ್ರಿ ವೇಳೆಗೆ ಸಂಪುಟ ಪುನಾರಚನೆ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹಾಗೂ ಪಿ.ರಾಜೀವ್‌ಗೆ ಸಚಿವ ಸ್ಥಾನ, ಶಾಸಕ ಅನಿಲ ಬೆನಕೆ ಹಾಗೂ ಮಹಾಂತೇಶ ದೊಡ್ಡಗೌಡರಿಗೆ ನಿಗಮದ ಅಧ್ಯಕ್ಷ ಹುದ್ದೆ ಕೊಡಿಸುವ ಚರ್ಚೆ ನಡೆದಿದೆ. ಅಲ್ಲದೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆ, ಬೆಳಗಾವಿ ಪಾಲಿಕೆ ಮೇಯರ್‌, ಉಪ ಮೇಯರ್‌ ಆಯ್ಕೆ ಕುರಿತೂ ಚರ್ಚಿಸಲಾಗಿದೆ.

Advertisement

ಇದು ಬಿಜೆಪಿ ಅಧಿಕೃತ ಸಭೆ ಅಲ್ಲ. ದಿನಕ್ಕೊಂದು ಸಭೆ ನಡೆಯುತ್ತದೆ. ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವು ದಿಲ್ಲ. ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ಸಭೆ ಮಾಡಿದ್ದಾರೆ. ಪಕ್ಷದಲ್ಲಿ ಯಾರು ಏನು ಕೆಲಸ ಮಾಡಿದ್ದಾರೆ. ಯಾರ ಕೊಡುಗೆ ಏನು ಎಂಬುದು ವರಿಷ್ಠರಿಗೆ ಗೊತ್ತಿದೆ.
-ಬಾಲಚಂದ್ರ ಜಾರಕಿಹೊಳಿ, ಶಾಸಕರು

ಇದು ಯಾರ ವಿರುದ್ಧದ ಸಭೆಯೂ ಅಲ್ಲ. ಕೆಲವು ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣ ತಿಳಿದುಕೊಳ್ಳಲು ನಡೆಸಿದ ಸಭೆ. ಜಾರಕಿಹೊಳಿ ಸೋದರರನ್ನು ಕರೆಯದೇ ಇರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ.
– ಅಣ್ಣಾಸಾಹೇಬ ಜೊಲ್ಲೆ, ಸಂಸದ

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next