Advertisement
ಅಂಡಮಾನ್! ಈ ದ್ವೀಪದಲ್ಲಿ ಕೌತುಕ ಮತ್ತು ನಿಗೂಢತೆ ಮನೆಮಾಡಿದೆ. ಚೆನ್ನೈನಿಂದ ಹೊರಟ ನಮ್ಮ ವಿಮಾನ ಸುಮಾರು ಎರಡು ಗಂಟೆಗಳ ನಂತರ ಅಂಡಮಾನ್ ಸಮೀಪಿಸುತ್ತಿದ್ದಂತೆ ಪಕ್ಕದಲ್ಲೇ ಕುಳಿತಿದ್ದ ಅಲ್ಲಿಯ ಸ್ಥಳೀಯ ನಿವಾಸಿಯೊಬ್ಬರು, ಕಿಟಕಿಯಿಂದ ಕಾಣಿಸುತ್ತಿದ್ದ ಕೆಲವು ದ್ವೀಪಗಳನ್ನು ತೋರಿಸುತ್ತಾ, “ಅದು ಆದಿವಾಸಿಗಳು ಜೀವಿಸುವ ಜಾಗ. ಬೇರೆಯವರ ಪ್ರವೇಶಕ್ಕೆ ಅನುಮತಿಯಿಲ್ಲ’ ಎಂದು ಹೇಳಿದಾಗ ಈ ನಿಗೂಢ ದ್ವೀಪಗಳ ಬಗ್ಗೆ ನನಗೆ ಮೊದಲೇ ಇದ್ದ ಕುತೂಹಲಕ್ಕೆ ರೆಕ್ಕೆಪುಕ್ಕ ಬಂದಂತಾಯಿತು.
Related Articles
Advertisement
ನಮ್ಮ ಚಾಲಕನ ಅನುಭವದ ಪ್ರಕಾರ, ಆ ಕಾಡಿನಲ್ಲಿ ಜಾರವಾಗಳು ಕಾಣಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ. ಒಂದು ವೇಳೆ ಕಾಣಿಸಿಕೊಂಡರೂ ನಾವು ಸುಮ್ಮನಿದ್ದರೆ ಅವರಿಂದ ಭಯಪಡುವ ಅವಶ್ಯಕತೆ ಇಲ್ಲ. ಆದರೆ, ಹೋಗುವಾಗಲೇ ನಮಗೆ ಇಬ್ಬರು ಜಾರವಾಗಳ ದರ್ಶನ ಲಭಿಸಿತು. ರಸ್ತೆಯ ಪಕ್ಕದಲ್ಲೇ ಇದ್ದ ಮರದಲ್ಲಿ ಜೇನು ಕೀಳುತ್ತಿದ್ದರು. ತಲೆಗೆ ಹಾಗೂ ಸೊಂಟಕ್ಕೆ ಕೆಂಪು ಪಟ್ಟಿಗಳನ್ನು ಬಿಟ್ಟು ಬೇರೇನೂ ಧರಿಸಿರಲಿಲ್ಲ. ಅವರ ಮುಖ ನೋಡಿದಾಗ ಬಹಳ ಸೌಮ್ಯವಾದ ಮುಗ್ಧತೆ ತುಂಬಿದ ಶಾಂತಮೂರ್ತಿಗಳಂತೆ ತೋರುತ್ತಿದ್ದರು. ಅವರ ಪ್ರಮುಖ ಆಹಾರ ಹಣ್ಣುಗಳು, ಜೇನು ಹಾಗೂ ಕಾಡುಹಂದಿ. ನೋಡಲು ಕೆರಿಬಿಯನ್ ದೇಶದ ನಿವಾಸಿಗಳಿಗಿಂತ ಭಿನ್ನವಾಗೇನಿರಲಿಲ್ಲ. ಇತ್ತೀಚೆಗೆ ಸೆಂಟಿನಲ್ ದ್ವೀಪದಲ್ಲಿ ಮೂಲನಿವಾಸಿಗಳಿಂದ ಹತ್ಯೆಯಾದ ಅಮೆರಿಕನ್ ಪ್ರಜೆಯ ವಿಷಯವನ್ನು ಓದಿದ ನನಗೆ ಈ ಪ್ರಕೃತಿಯ ಮಡಿಲಿನಲ್ಲಿ ಅದರಲ್ಲೇ ಒಂದಾಗಿ ಬದುಕುವ ಕಾಡುಜನರಿಗಿಂತ ನಾವು “ನಾಗರಿಕ’ರಲ್ಲೇ ಏನೋ ಸಮಸ್ಯೆಯಿದೆ ಎಂದೆನಿಸದೇ ಇರದು.
ನಮ್ಮ ಅದೃಷ್ಟಕ್ಕೆ ಸುಮಾರು 20 ಜನರಿದ್ದ ದೊಡ್ಡ ಜಾರವಾ ಕುಟುಂಬವೊಂದು ರಸ್ತೆಯ ಬದಿಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು. ಎಲ್ಲರೂ ನಗ್ನರಾಗಿಯೇ ಇದ್ದರು. ಆ ಗುಂಪಿನಲ್ಲಿ ಸಣ್ಣ ಸಣ್ಣ ಮಕ್ಕಳು, ಹೆಂಗಸರು, ಗಂಡಸರು ಒಟ್ಟಿನಲ್ಲಿ ಎಲ್ಲಾ ವಯೋಮಾನದವರಿದ್ದರು. ಜಾರವಾಗಳ ದರ್ಶನ ಲಭಿಸಿದ್ದು ನಮ್ಮ ಅದೃಷ್ಟ ಎಂದು ಏಕೆ ಹೇಳಿದೆನೆಂದರೆ, ಸುಮಾರು 100 ಚ.ಕಿ.ಮೀ.ಗಳಷ್ಟು ಹರಡಿರುವ ಕಾಡಿನಲ್ಲಿ ಕೇವಲ 350ರಷ್ಟು ಜನಸಂಖ್ಯೆ ಹೊಂದಿರುವ ಜನರು ಈ ಸಂಖ್ಯೆಯಲ್ಲಿ ಕಾಣಿಸಿದ್ದಾರೆಂಬುದು ಅದೃಷ್ಟವಲ್ಲದೆ ಮತ್ತೇನು! ಕಾಡಿನಲ್ಲಿ ವಾಸಿಸುವ, ಕ್ರೂರಿಗಳೆಂದು ಬಿಂಬಿತವಾದ ಜಾರವಾಗಳಲ್ಲಿರುವ ಕುಟುಂಬ ವ್ಯವಸ್ಥೆ ಈ “ಸಭ್ಯ’, “ನಾಗರಿಕ’, “ಸುಸಂಸ್ಕೃತ’ ಸಮಾಜದಲ್ಲಿ ಮಾಯವಾಗುತ್ತಿರುವಾಗ ಇಲ್ಲಿ ಅಸಲಿ ನಾಗರಿಕರು ಯಾರು ಎಂಬ ಪ್ರಶ್ನೆ ಮನದಲ್ಲಿ ಮೂಡದೇ ಇರದು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ತರುಣಿಯರು ಅನೇಕ ಪ್ಲಾಸ್ಟಿಕ್ ಬಾಟಲಿಗಳ ಕಲಾತ್ಮಕ ಗೊಂಚಲು ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದರು. ಅದು ಅವರ ಪರಿಸರ ಕಾಳಜಿಯೋ ಅಥವಾ “ಅದ್ಭುತವಾದ ವಸ್ತುವನ್ನು’ ಸಂಗ್ರಹಿಸುವ ಖಯಾಲಿಯೋ ತಿಳಿಯಲಿಲ್ಲ. ಅವರಲ್ಲಿ ನಾಗರಿಕ ಪ್ರಜ್ಞೆ ಮೂಡದೇ ಇರಬಹುದು, ಆದರೆ ಮುಗ್ಧತೆ ಮತ್ತು ಪರಿಸರ ಪ್ರೀತಿಯಲ್ಲಿ ಅವರು ನಮಗಿಂತ ಎಷ್ಟೋ ವಾಸಿ.
– ಸಚಿತ್ ರಾಜು