Advertisement

ಜಾರಬಹುದು ಜಾಗ್ರತೆ !

03:45 AM Feb 17, 2017 | |

ಮನೆಯ ಹಿರಿಯ ಸದಸ್ಯರಿಗಾದರೆ ಅಕ್ಕಿ ತಿಂಡಿ ಮಾಡಿದರೆ ಇಷ್ಟ ಆಗುತ್ತದೆ. ಆದರೆ, ಮಕ್ಕಳಿಗೆ ಇಷ್ಟವಾಗಬೇಕಲ್ಲ ! ಇಡ್ಲಿ-ದೋಸೆ ಮಾಡಿದರೆ, “ದಿನಾ ಇದೇ ತಿಂಡಿನಾ?’ ಅಂತ ಮುಖ ಸಿಂಡರಿಸುತ್ತಾರೆ. ಹಾಗಾಗಿ, ಎಲ್ಲರಿಗೂ ಹಿಡಿಸುವ, ಇಷ್ಟವಾಗುವ ತಿಂಡಿ ತಯಾರಿಸಬೇಕು.

Advertisement

ಪರಿಚಿತರೊಬ್ಬರು ಮನೆಯಲ್ಲಿ  ಸ್ನಾನದ ಕೋಣೆಯಲ್ಲಿ  ಬಿದ್ದು ಕಾಲು ಮುರಿದುಕೊಂಡಿದ್ದರು. ಮಲಗಿದಲ್ಲೇ ಇದ್ದ ಅವರನ್ನು ಕಾಣಲು ಹೋಗಿದ್ದೆವು.  “”ಏನಾಯ್ತು ಅಂತ ಹೇಳುವುದು, ನನ್ನ ಗ್ರಹಚಾರ. ಮೀಯಲು ಹೋಗಿದ್ದೆ. ಅದು ಹ್ಯಾಗೆ ಕಾಲು ಜಾರಿತು ಅಂತ ಗೊತ್ತಾಗಲಿಲ್ಲ. ಬಿದ್ದಾಯ್ತು ನೋಡು” ಅಂದರು. ಸ್ವಲ್ಪ ಹೊತ್ತು ಮಾತಾಡಿ ಎದ್ದು ಬರುವಾಗ ಕುತೂಹಲದಿಂದಲೇ ಅವರು ಬಿದ್ದ ಬಾತ್‌ರೂಮ್‌ ಅವಲೋಕಿಸಿದ್ದೆ. ಅತ್ಯಾಧುನಿಕವಾಗಿ ಕಟ್ಟಿಸಿದ ಸ್ನಾನದ ಕೋಣೆ.  ಕಾಲಿಟ್ಟರೆ ಎಲ್ಲಿ ಮಾಸುತ್ತದೋ ಅನ್ನುವ ಚೆಂದ. ಎಲ್ಲೆಲ್ಲಿ ನೋಡಿದರೂ ನಯವೇ ನಯ. ಫ‌ಳಫ‌ಳಿಸುವ ಬಾತ್‌ರೂಮ್‌ ನಾನು ಗಮನಿಸುವುದನ್ನು ಕಂಡ ಮನೆಯೊಡತಿಗೆ ಹೆಮ್ಮೆ. “”ತುಂಬಾ ಖರ್ಚಾಗಿದೆ ಇದಕ್ಕೆ ನಮಗೆ. ನೆಲಕ್ಕೆ ಹಾಸುವ ಟೈಲ್ಸ… ಆಯ್ಕೆ ಮಾಡಬೇಕಾದರೇ ಸುಮಾರು ಕಡೆ ಹುಡುಕಾಡಿದ್ದೆವು. ಈ ಕಲರ್‌, ಕ್ವಾಲಿಟಿ ತುಂಬಾ ಚೆನ್ನಾಗಿದೆ ಅಂದರು ನೋಡಿದವರೆಲ್ಲ. ನಿಜವಾಗಿ ಅದ್ಭುತವಾಗಿದೆ. ಅಲ್ಲೇ ಹಾಸಿಕೊಂಡು  ಮಲಗಬಹುದು. ಅಷ್ಟೂ ಅಂದ. ಹೊಸದಾಗಿ ಕಟ್ಟಿಸಿದ ಮನೆ, ಕಣ್ಸೆಳೆಯುವ ಭರ್ಜರಿ ಲುಕ್‌, ನೆಲದಲ್ಲಿ ಮುಖ ನೋಡಿಕೊಳ್ಳಬಹುದು ಅಂಥ ನೆಲ. ರೇಶಿಮೆಯ ನುಣುಪು. ಯಜಮಾನಿ¤ಯ ಕಣ್ತುಂಬ ಸಂಭ್ರಮದ ಝಲಕ್‌”.

ಹಿರಿಯರು, ಕಿರಿಯರು ಎಲ್ಲರೂ  ಒಟ್ಟಾಗಿ ವಾಸ ಮಾಡುವ ಮನೆ ಅಂದರೆ ಅಲ್ಲಿ ಮಕ್ಕಳೂ ಇರುತ್ತಾರೆ; ವಯಸ್ಸಾದವರೂ ಇದ್ದೇ ಇರುತ್ತಾರೆ. ಎಳೆಯ ಮಕ್ಕಳಿಗೆ  ಆಗಬಹುದಾದ ತೊಂದರೆ, ಅಪಾಯಗಳ ಅರಿವಿರುವುದಿಲ್ಲ; ಹಿರಿಯರಿಗೆ ಆ ಮಟ್ಟಿನ ಮಾಹಿತಿ ಗೊತ್ತಿದ್ದರೂ ಪರಿಸ್ಥಿತಿಯ ಎದುರಿಗೆ ಅಸಹಾಯಕತೆ ಮುಂದಾಗುತ್ತದೆ.  ಇಂದಿಗೆ ನೂತನ ಗೃಹಗಳೆಂದರೆ ಸ್ಪರ್ಧೆಗೆ ಬಿದ್ದವರ ಹಾಗೆ ಅದರ ಅಂದ, ಚೆಂದ, ಸೌಲಭ್ಯಗಳು, ವಿನ್ಯಾಸ, ಅಲಂಕಾರ ಹೆಚ್ಚುತ್ತಲೇ ಇರಬೇಕು. ಮನೆ ಅಂದರೆ ಜೀವನದಲ್ಲಿ ಒಮ್ಮೆ ಅಲ್ವಾ, ಖರ್ಚಾಗುತ್ತದೆ, ಏನ್ಮಾಡಲಾಗುತ್ತದೆ, ಸಾಲವಾದರೂ ಪರವಾಗಿಲ್ಲ, ಭರ್ಜರಿಯಾಗಿ ಕಟ್ಟಿಸಿ ಬಿಡುವಾ ಅಂತ ಲೆಕ್ಕಾಚಾರ ಹಾಕಿ ನಿರ್ಮಿಸುವುದು ಮಾನವ ಸಹಜ ಗುಣ. ಅದರಿಂದಾಗಿ  “ಮನೆ ಕಟ್ಟಿ ನೋಡು; ಮದುವೆ ಮಾಡಿ ನೋಡು’ ಅಂತ ಗಾದೆ ಹುಟ್ಟಿಕೊಂಡದ್ದು ನಿಜ.  ನೆಲದ ಅಲಂಕಾರವಂತೂ ಸುತ್ತಮುತ್ತ ಅದ್ಯಾರ ಮನೆಯಲ್ಲಿಯೂ ಇರಬಾರದು, ಅಂಥಾ ಅದ್ಭುತವಾಗಿರತಕ್ಕದ್ದು ಎಂಬ ನಿರ್ಣಯ ಸರ್ವಾನುಮತದಿಂದ ಅಂಗೀಕರಿಸಲ್ಪಡುತ್ತದೆ.  ಅರ್ಥಶಾಸ್ತ್ರದಲ್ಲಿ ಹೇಳುವ ಹಾಗೆ ಆಸೆಗಳು ಅಸಂಖ್ಯಾತ; ಆದರೆ ಮಿತಿ ! 

ಏನು ಹೇಳಹೊರಟದ್ದು ಅಂದರೆ ನೂತನ ಮನೆಯಲ್ಲಿ ಗೃಹಪ್ರವೇಶದ ನಂತರ ಮನೆಯಲ್ಲಿ ಹಿರಿಯರು ಜೊತೆಗಿದ್ದಲ್ಲಿ  ನಂತರ ಉಂಟಾಗುವ ಸಮಸ್ಯೆಗಳು ಹಿಡಿತ ಮೀರಿ ಹೋಗುತ್ತವೆ.  ನಡೆದರೆ ಜಾರಿ ಬೀಳುವಂಥ ನುಣುಪಿನ ಮೊಸಾಯಿಕ್‌, ಮಾರ್ಬಲ್‌, ಟೈಲ್ಸ… ಅಳವಡಿಸಿದ ನೆಲದಲ್ಲಿ ಕಾಲೂರಲೇ ಕಷ್ಟ. ಗ್ರಹಚಾರ ತಪ್ಪಿಜಾರಿ ಬಿದ್ದರೆ ನಂತರ ಅನುಭವಿಸಲೇಬೇಕು. ವಯಸ್ಸಿನ ಕಾರಣದಿಂದಾಗಿ ತಲೆಸುತ್ತು, ಅಶಕ್ತತೆ, ಮೈ ಮಾಲುವುದು ತಪ್ಪಿದ್ದಲ್ಲ. ಹಳೆಯಕಾಲದ ಮನೆಗಳೆಂದರೆ ಅಲ್ಲಿ ತುಸು ಒರಟಾದ ನೆಲವಿದ್ದು ಅದಕ್ಕೆ ಹೊಂದಿಕೊಂಡವರಿಗೆ ಇಲ್ಲಿ ನಡೆಯಲೂ ಭೀತಿ. ಬಿದ್ದರೆ ಅಪಾಯ. ಅವಸರದಲ್ಲಿ ಹೋದರೆ ಅಪಾಯ. ಅಕಸ್ಮಾತ್‌ ಅಂಥ ನೆಲದಲ್ಲಿ ನೀರು ಅಥವಾ ದ್ರವವೇನಾದರೂ ಇದ್ದರೆ ಗೊತ್ತಾಗುವುದಿಲ್ಲ ಫ‌ಕ್ಕನೆ. ಇನ್ನು ಸ್ನಾನದ ಕೋಣೆ ಮತ್ತು ಟಾಯ್ಲೆಟ್‌ ಒಂದೇ ಕಡೆ ಇರುವುದು ಗಮನಿಸಬಹುದು. ನುಣುಪಾಗಿ ಹೊಳೆಯುವ ಸುಂದರವಾದ ಬಾತ್‌ರೂಮು ಜಾಹೀರಾತುಗಳಲ್ಲಿ ತೋರಿಸುವ ಹಾಗೆ ಇರಬಹುದು. ಸಮಸ್ಯೆ ಏನೆಂದರೆ ಸದಾ ನೀರು ಬೀಳುವ ಅಲ್ಲಿ ಪಾದ ತುಸು ಜಾರಿದರೆ ಹಿಡಿಯಲು ಆಧಾರ ಅದಕ್ಕಿಂತ ನಯದ ಗೋಡೆ.  ಬಿದ್ದಾಗ ಕಾಲು ಅಥವಾ ಕೈಗೆ ಏಟು ಬಲವಾಗೇ ಬೀಳುತ್ತದೆ. ಸೋಪಿನ ನೊರೆ, ಶ್ಯಾಂಪೂ ಬಳಕೆಯ ನಂತರದ ಜಾರುವಿಕೆ, ನೀರು ಬಿದ್ದು ಏನೂ ಇರಬಹುದು. ಬಿದ್ದ ಏಟಿಗೆ ಕೈಯದೋ, ಕಾಲಿನದೋ  ಮೂಳೆ ಜರಗುವುದೋ, ಅಥವಾ ಎಲುಬು ಮುರಿಯುವಿಕೆ, ಸೊಂಟಕ್ಕೆ ಪೆಟ್ಟು ಇಂಥದ್ದು ಸಂಭವಿಸಿದರೆ ಅವರ ಪಾಡು ಬಲು ಕಠಿಣ.  ಮಕ್ಕಳು, ಹೆತ್ತವರು ಬೀಳುವುದಿಲ್ಲ ಎನ್ನುವ ಹಾಗಿಲ್ಲ. ಬಾತ್‌ರೂಮ್‌ ಸರಿಯಾಗಿ ಉಜ್ಜದೆ ಇದ್ದರೆ ಅದೂ ಜಾರಲು ಮುಖ್ಯ ಕಾರಣವಾಗುತ್ತದೆ.  ಯಾರೇ ಬಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೆಚ್ಚಿನ  ಮೂಳೆ ಮುರಿತದ  ಘಟನೆಗಳಲ್ಲಿ ಬಾತ್‌ರೂಮ್‌ ಅಥವಾ ಟಾಯ್ಲೆಟ್‌ ಗಳಲ್ಲಿ ಕಾಲು, ಕೈ ಜಾರಿ ಬಿದ್ದದ್ದರಿಂದ ಉಂಟಾಗುವ ಅನಾಹುತವೇ ಹೆಚ್ಚು. 

ಹಿಂದಿನ ದಿನಗಳಲ್ಲಿ, ಹಳ್ಳಿಯ ಕಡೆಯಲ್ಲಿ ಬಚ್ಚಲು ಮನೆಗಳಲ್ಲಿ ಒರಟಾದ ಹಾಸುಗಲ್ಲುಗಳನ್ನು ಹಾಸುತ್ತಿದ್ದ ಕಾರಣ ಇದೇ ಇರಬಹುದು ಎನ್ನಿಸುತ್ತಿದೆ. ಕಾಲಿಗೆ ಬಲವಾದ ಆಧಾರವಾಗಿ ಸಿಕ್ಕುವ ಇಂಥ ಕಲ್ಲುಗಳು ಜಾರಿ ಬಿದ್ದು ಬಿಡುವುದನ್ನು ತಡೆಯುತ್ತದೆ. ಇಲ್ಲಿ ಎಣ್ಣೆಸ್ನಾನದ ನಂತರ ಉಳಿಯುವ ಪಸೆಯಾಗಲೀ, ಸೋಪಿನ ನೊರೆಯಾಗಲಿ ಅಪಾಯ ತಾರದು. ತುಸು ಒರಟಾದ ಹಾಸುಗಲ್ಲುಗಳಾದ ಕಾರಣ ತಿಕ್ಕಿ ತೊಳೆಯದೆ ಇದ್ದರೆ ಅಪಾಯವಿಲ್ಲ.ಅಥವಾ ಬಚ್ಚಲಮನೆಗೆ ತುಸು ದೊರಗಾಗಿ ಸಿಮೆಂಟನ್ನು ಹಾಕಿಬಿಡುವ ಹಿಂದಿನ ಉದ್ದೇಶ ಇದಕ್ಕಾಗೇ ಇರಬಹುದು. ಹಾಗೆಂದು, ಅಲ್ಲಿ ಬೀಳುವುದೇ ಇಲ್ವಾ? ಅಥವಾ ಬಿದ್ದವರಿಲ್ವಾ ಅಂದರೆ ಇರಬಹುದು. ಅದು ನುಣುಪಾದ ನೆಲದಲ್ಲಿ  ಸಂಭವಿಸಬಹುದಾದ ಅಪಾಯದ ಹಾಗೆ ಅಲ್ಲ. ಗೋಡೆ ಆಧಾರಕ್ಕೆ ಲಭ್ಯವಿರುತ್ತದೆ. ಬೀಳುವವರು ಎಲ್ಲಿಯಾದರೂ ಬಿದ್ದೇಬೀಳುತ್ತಾರೆ ಅಂತ ಕುತರ್ಕವಾಡುವವರೂ ಇಲ್ಲದಿಲ್ಲ. ಅದೇನೇ ಇದ್ದರೂ ಮನೆಗಳಲ್ಲಿನ ನೆಲ ನಯವಾಗಿ, ನುಣುಪಾಗೇ ಇರುವುದು ಹೆಚ್ಚಿನ ಕಡೆ ಗಮನಿಸಬಹುದು. ಹಾಗೇ ಬಾತ್‌ರೂಮು ಜೊತೆಗೆ ಟಾಯ್ಲೆಟ್‌ಗಳೂ. ಹಿರಿಯ ಜೀವಗಳಿಗೆ ವಾರ್ಧಕ್ಯದ ಅಶಕ್ತತೆ, ಕಾಯಿಲೆಗಳ ಕಾರಣ ಕಿರಿಯರಷ್ಟು ಚಟುವಟಿಕೆಯಿಂದ ಅಪಾಯವನ್ನು ತಪ್ಪಿಸಿಕೊಳ್ಳಲು ಅಸಾಧ್ಯವೇ ನಿಜ. ಆದರೆ ಅಡಿ ತಪ್ಪಿದರೆ ಆನೆಯೂ ಬಿದ್ದೀತು ಅನ್ನುವ ಗಾದೆಮಾತೂ ಅರ್ಥಗರ್ಭಿತ.  ನೀರು ಬಿದ್ದು ಒದ್ದೆಯಾಗಿರುವ ನೆಲದಲ್ಲಿ ನೀರಿನ ಗುರುತು ಕಾಣಿಸಬೇಕು, ಸರಿಯಾಗಿ ಕ್ಲೀನಿಂಗ್‌ ಬೇಕು, ಮತ್ತು ವಿಪರೀತವಾಗಿ ನುಣುಪಿನ ನೆಲಕ್ಕಿಂತ ತುಸು ದೊರಗಿನ ನೆಲವೇ  ಅಳವಡಿಸಿದರೆ ಸ್ವಲ್ಪಮಟ್ಟಿಗಿನ ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಬಹುದು.

Advertisement

– ಕೃಷ್ಣವೇಣಿ ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next