ನವದೆಹಲಿ: ವಿಶ್ವದಲ್ಲೇ ಅತ್ಯಂತ ದುಬಾರಿ ಎಂಬ ಖ್ಯಾತಿ ಪಡೆದಿರುವ ಮಿಯಾಝಾಕಿ ಮಾವುವನ್ನು ಇದೀಗ ಪಶ್ಚಿಮಬಂಗಾಳದಲ್ಲಿ ಬೆಳೆಸಲು ಸಿದ್ಧತೆ ನಡೆಸಲಾಗಿದೆ. ಜಪಾನೀಸ್ ಮಿಯಾಝಾಕಿ ಎಂದು ಕರೆಯಲ್ಪಡುವ ಈ ಮಾವಿನ ಹಣ್ಣಿನ ಕೆಜಿಗೆ ಲಕ್ಷಾಂತರ ರೂಪಾಯಿ ಬೆಲೆ ಇದೆ.
ಇದನ್ನೂ ಓದಿ:ಕರಾವಳಿಯ ಮೀನುಗಾರರ ಮೇಲೆ ಹಲ್ಲೆ: ಗಂಭೀರವಾಗಿ ಪರಿಗಣಿಸಲು ಸಿಎಂಗೆ ಮನವಿ
ಇದು ಆಗ್ನೇಯ ಏಷ್ಯಾದಲ್ಲಿ ಬೆಳೆಯುವ ಹಳದಿ ಪೆಲಿಕಾನ್ ಮಾವಿನಂತಿರುವ ಇರ್ವಿನ್ ಮಾವಿನ ಒಂದು ವಿಧವಾಗಿದೆ. ಮೂಲತಃ ಜಪಾನ್ ನ ಮಿಜಾಝಾಕಿ ನಗರದಲ್ಲಿ ಈ ಮಾವು ಬೆಳೆಯುತ್ತಿದೆ. ಇದೀಗ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ “ಕಿಂಗ್ ಆಫ್ ಮ್ಯಾಂಗೋ” ಮಿಯಾಝಾಕಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲು ಕೃಷಿ ಇಲಾಖೆ ನಿರ್ಧರಿಸಿದ್ದು, ಇನ್ಮುಂದೆ ಭಾರತದಲ್ಲಿಯೇ ಮಿಯಾಝಾಕಿ ಲಭ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ವರದಿ ತಿಳಿಸಿದೆ.
ಬಂಗಾಳದ ಈ ಪ್ರದೇಶದಲ್ಲಿ ಬೆಳೆಯುವ ಮಾಲ್ಡಾ ಮಾವಿನ ಹಣ್ಣು ಜಗತ್ತಿನಾದ್ಯಂತ ರಫ್ತಾಗುತ್ತವೆ. ಇದು ಪಶ್ಚಿಮಬಂಗಾಳದ ಪುರಾತನ ನಗರಗಳಲ್ಲಿ (7ನೇ ಶತಮಾನದಲ್ಲಿ ಮಾಲ್ಡಾ) ಒಂದಾಗಿತ್ತು ಎಂದು ವರದಿ ಹೇಳಿದೆ.
ಜಪಾನ್ ನ ಮಿಯಾಝಾಕಿ ನಗರದಿಂದ ಮಾವಿನ ಸಸಿಗಳನ್ನು ತಂದ ನಂತರ ಬಂಗಾಳದ ಇಂಗ್ಲಿಷ್ ಬಜಾರ್ ಬ್ಲಾಕ್ ನಲ್ಲಿ ಮಿಯಾಝಾಕಿ ಮಾವು ಬೆಳೆಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಲೆ ಬಾಳುವ ಮಿಯಾಝಾಕಿ ಸಸಿಗಳು ಒಂದು ವಾರದೊಳಗೆ ಮಾಲ್ಡಾ ತಲುಪುವ ನಿರೀಕ್ಷೆ ಇದೆ. ಸಾಟಿಯಿಲ್ಲದ ರುಚಿ ಮತ್ತು ವಿಶಿಷ್ಟ ಪರಿಮಳದ ಮೂಲಕ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಮಿಯಾಝಾಕಿ ಮಾವಿಗೆ ಭಾರತದಲ್ಲಿ ನೆಲೆಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಜಪಾನಿನ ಮಿಯಾಝಾಕಿ ಮಾವು ಈಗ ಮಾಲ್ಡಾದಲ್ಲಿ ಬೆಳೆಯುವ ಇತರ ನೂರು ಮಾವಿನ ತಳಿಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ.