ಟೋಕಿಯೋ: ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಅವರು ರ‍್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಸ್ಮೋಕ್ ಬಾಂಬ್ ವೊಂದು ಸ್ಫೋಟಿಸಿರುವ ಘಟನೆ ಶನಿವಾರ( ಏ.15 ರಂದು) ನಡೆದಿರುವುದು ವರದಿಯಾಗಿದೆ.
ಶನಿವಾರ ವಕಯಾಮಾ ನಗರದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಆರಂಭಿಸಿದ್ದಾರೆ. ಇದೇ ವೇಳೆ ಅವರ ಹತ್ತಿರದಲ್ಲೇ ಸ್ಮೋಕ್ ಬಾಂಬ್ ವೊಂದು ಎಸೆದಿದ್ದು, ಅದು ಸ್ಫೋಟಗೊಂಡಿದೆ. ಜಪಾನ್ ಮಾಧ್ಯಮಗಳು ಈ ಕುರಿತ ವಿಡಿಯೋವನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಬಾಂಬ್ ಎಸೆದ ಬಳಿಕ ಹೊಗೆ ಕಾಣಿಸಿಕೊಂಡಿದ್ದು, ಭೀತಿಯಿಂದ ಜನ ಅತ್ತಿತ ಓಡುತ್ತಿರುವ ದೃಶ್ಯವನ್ನು ನೋಡಬಹುದು.
ಸದ್ಯ ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಪ್ರಧಾನಿ ಅವರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಚುನಾವಣಾ ಪ್ರಚಾರದ ಅಂಗವಾಗಿ ಈ ರ‍್ಯಾಲಿಯನ್ನು ಆಯೋಜಿಸಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷ ಜುಲೈನಲ್ಲಿ ಇದೇ ರೀತಿಯ ಭಾಷಣ ಮಾಡುತ್ತಿದ್ದಾಗ ಅಂದಿನ ಶಿಂಜೋ ಅಬೆ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ಆ ಬಳಿಕ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.