Advertisement

ಜಪಾನ್‌-ಭಾರತ ಮಾತುಕತೆ: ಸಹಯೋಗಕ್ಕಿದೆ ಶಕ್ತಿ

06:00 AM Oct 31, 2018 | Team Udayavani |

ಮಾಲ್ಡೀವ್ಸ್‌  ಫ‌ಲಿತಾಂಶದ ವಿಷಯದಲ್ಲಿ ಅಸಹನೆಯಿಂದ ಕುದಿಯುತ್ತಿದ್ದ ಚೀನಾ ಈಗ ಕೊಲಂಬೋದತ್ತ ದೌಡಾಯಿಸುವುದು ನಿಶ್ಚಿತ. ಹೀಗಾಗಿ, ಚೀನಾದ ತಂತ್ರಗಳನ್ನು ಎದುರಿಸಲು ಭಾರತಕ್ಕೆ ಜಪಾನ್‌ ಸಹಯೋಗ ಅತ್ಯಗತ್ಯ. 

Advertisement

ಭಾರತ ಮತ್ತು ಜಪಾನ್‌ ನಡುವಿನ ಸ್ನೇಹ ಮತ್ತೂಂದು ಹಂತಕ್ಕೆ ತಲುಪಿದೆ. ಭಾರತ-ಜಪಾನ್‌ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಯವರು ಜಪಾನ್‌ಗೆ ತಲುಪಿದಾಗ ಶಿಂಜೋ ಅಬೆ ಅವರು ಅತ್ಯುತ್ಸಾಹದಿಂದ ಬರಮಾಡಿಕೊಂಡ-ಮಾತನಾಡಿದ ರೀತಿ ಮತ್ತು ಭದ್ರತೆ ಹಾಗೂ ಆರ್ಥಿಕ ಸಹಯೋಗದ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಆದ ಮಾತುಕತೆ-ಒಪ್ಪಂದಗಳು ಇಂಥ ವಿಶ್ವಾಸವನ್ನು ಹುಟ್ಟುಹಾಕಿವೆ. ಇದು ಎರಡೂ ರಾಷ್ಟ್ರಗಳ ನಾಯಕರುಗಳ ನಡುವಿನ 12ನೇ ಭೇಟಿ ಎನ್ನುವುದು ವಿಶೇಷ. ಪ್ರಧಾನಮಂತ್ರಿ ನರೇಂದ್ರ ಮೋದಿಯವರದ್ದು ಇದು ಮೂರನೇ ಬಾರಿಯ ಜಪಾನ್‌ ಯಾತ್ರೆ. ಶಿಂಜೋ ಅಬೆ ಕೂಡ ಮೂರು ಬಾರಿ ಭಾರತಕ್ಕೆ ಬಂದುಹೋಗಿದ್ದಾರೆ. ಈ ಭೇಟಿಗಳ ಸಮಯದಲ್ಲೆಲ್ಲ ಎರಡೂ ದೇಶಗಳು ವ್ಯಾಪಾರ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಾಡಿಕೊಂಡ ಒಪ್ಪಂದಗಳು ಉಲ್ಲೇಖನೀಯ. ಆರ್ಥಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಹಯೋಗದ ವಿಚಾರಕ್ಕೆ ಬರುವುದಾದರೆ ಜಪಾನ್‌ ಮೊದಲಿನಿಂದಲೂ ಭಾರತದ ಅತ್ಯಂತ ವಿಶ್ವಾಸಾರ್ಹ ಸ್ನೇಹಿತನಾಗಿ ನಡೆದುಕೊಂಡು ಬಂದಿದೆ.

 ಪ್ರಸಕ್ತ ವಿಶ್ವದ ಅರ್ಥ್ಯವ್ಯವಸ್ಥೆಯ ಸ್ಥಿತಿಯನ್ನು ಗಮನಿಸಿದರೆ ಭಾರತ-ಜಪಾನ್‌ನ ಸಹಯೋಗ ಅತ್ಯಂತ ಮಹತ್ವ ಪಡೆದುಬಿಡುತ್ತವೆ. ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ  ಭಾರತ, ಜಪಾನ್‌ ಮತ್ತು ಚೀನಾದ ಅಸ್ತಿತ್ವ ಬಲಿಷ್ಠವಾಗಿದೆ ಎನ್ನುವುದು ತಿಳಿದಿರುವಂಥದ್ದೆ. ಅತ್ತ ಚೀನಾಕ್ಕೆ ಭಾರತವಷ್ಟೇ ಅಲ್ಲ, ಜಪಾನ್‌ನೊಂದಿಗೆ ದ್ವೇಷವಿದ್ದೇ ಇದೆ. ಅದು ತನ್ನ ವಿಸ್ತರಣಾವಾದಿ ನೀತಿಗಷ್ಟೇ ಮಹತ್ವ ಕೊಡುತ್ತದೆ. ಪರಿಸ್ಥಿತಿ ಹೀಗಿರುವಾಗ ಪೆಸಿಫಿಕ್‌ ಪ್ರದೇಶ ದಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಭಾರತ ಮತ್ತು ಜಪಾನ್‌ಗೆ ಈ ರೀತಿಯ ಆರ್ಥಿಕ ಸಹಯೋಗ ಅನಿವಾರ್ಯವೂ ಹೌದು. ಗಮನಿಸಲೇಬೇಕಾದ ಅಂಶ ವೆಂದರೆ, ಈ ಶೃಂಗದ ವೇಳೆ ಎರಡೂ ರಾಷ್ಟ್ರಗಳ ನಾಯಕರೂ ಈ ಕ್ಷೇತ್ರದಲ್ಲಿನ ಸಹಯೋಗದ ಮೇಲೆಯೇ ಹೆಚ್ಚಾಗಿ ಗಮನ ಕೇಂದ್ರೀಕರಿಸಿದ್ದಾರೆ ಎನ್ನುವುದು. 

ಡೋಕ್ಲಾಂ ವಿವಾದದ ನಂತರ ಭಾರತ ಜಪಾನ್‌ಗೆ ಇನ್ನಷ್ಟು ಹತ್ತಿರ ವಾಗುತ್ತಿದೆ. ಶಿಂಜೋ ಅಬೆ ಕಳೆದ ವಾರ ವಷ್ಟೇ ಚೀನಾದ ಪ್ರವಾಸ ಮುಗಿಸಿಕೊಂಡು ಹಿಂದಿರುಗಿದ್ದಾರೆ. ಇದೇ ಕಾರಣಕ್ಕಾಗಿಯೇ ಭಾರತ-ಜಪಾನ್‌ ನಾಯಕರ ಈ ಭೇಟಿ ಚೀನಾದ ನಿಲುವನ್ನು ಅರ್ಥಮಾಡಿಕೊಳ್ಳುವ ವಿಚಾರದಲ್ಲೂ ಸಹಕಾರಿ. ಒಂದು ವೇಳೆ ಭಾರತ ಮತ್ತು ಜಪಾನ್‌ ಜೊತೆಯಾಗಿ ಚೀನಾದೊಂದಿಗೆ ಮಾತನಾಡಿದರೆ ಅದು ಹೆಚ್ಚು ಪ್ರಭಾವಪೂರ್ಣ ನಡೆಯಾಗಲಿದೆ. ತದನಂತರ ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ಎರಡೂ ದೇಶಗಳು ಸಾಮರಿಕ ಅಭ್ಯಾಸ ಮಾಡಿದರೆ ಚೀನಾಕ್ಕೆ ತಳಮಳ ಹೆಚ್ಚುವುದಂತೂ ನಿಶ್ಚಿತ. 

ಭಾರತ ಜಪಾನ್‌ನೊಂದಿಗೆ ಈ ಹೆಜ್ಜೆಗಳನ್ನು ಆದಷ್ಟು ವೇಗವಾಗಿ ಇಡಲೇಬೇಕಾದ ಅನಿವಾರ್ಯತೆಯಿದೆ. ಏಕೆಂದರೆ, ಇತ್ತ ಶ್ರೀಲಂಕಾದಲ್ಲಿ  ಭಾನುವಾರ ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನಾ ಅವರು ವಿಕ್ರಮಸಿಂಘೆ ಸರ್ಕಾರವನ್ನು ಬರ್ಖಾಸ್ತುಗೊಳಿಸಿ ಮಹಿಂದಾ ರಾಜಪಕ್ಷೆಯವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದಾರೆ. ಈ ವಿದ್ಯಮಾನವು ಶ್ರೀಲಂಕಾದಲ್ಲಿ ತೀವ್ರ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸಹಜವಾಗಿಯೇ ಇದೆಲ್ಲದರಿಂದಾಗಿ ಭಾರತದ ಮೇಲೂ ಋಣಾತ್ಮಕ ಪರಿಣಾಮ ಉಂಟಾಗಲಿರುವುದು ನಿಶ್ಚಿತ. ಏಕೆಂದರೆ ಇದುವರೆಗೂ ವಿಕ್ರಮಸಿಂಘೆ ಸರ್ಕಾರ ಚೀನಾದೊಂದಿಗೆ ಸ್ನೇಹ ಸಂಭಾಳಿಸುವ ಜೊತೆಗೆ ಭಾರತಕ್ಕೂ ಹತ್ತಿರವಾಗಿತ್ತು. ಆದರೆ ರಾಜಪಕ್ಷೆ ಬಹಿರಂಗವಾಗಿಯೇ ಭಾರತವನ್ನು ಧಿಕ್ಕರಿಸಿ ಚೀನಾದತ್ತ ಕೈಚಾಚುವವರು. ಹೀಗಾಗಿ ಚೀನಾ ಶ್ರೀಲಂಕಾದತ್ತ ದೌಡಾಯಿಸಲು ಸರ್ವಸನ್ನದ್ಧವಾಗಿದೆ ಎನ್ನಬಹುದು. 

Advertisement

ತಿಂಗಳ ಹಿಂದಷ್ಟೇ ಮಾಲ್ಡೀವ್ಸ್‌ನಲ್ಲಿ ನಡೆದ ಚುನಾವಣೆಯಲ್ಲಿ ಚೀನಾ ಬೆಂಬಲಿತ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡಿತ್ತು. ಈಗ ಅಲ್ಲಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ನವದೆಹಲಿಗೆ ಹತ್ತಿರವಾಗಿಬಿಟ್ಟಿದೆ. ಸರಳವಾಗಿ ಹೇಳಬೇಕೆಂದರೆ, ಮಾಲ್ಡೀವ್ಸ್‌  ಫ‌ಲಿತಾಂಶದಲ್ಲಿ ಭಾರತ ಚೀನಾ ವಿರುದ್ಧ ಮೇಲುಗೈ ಸಾಧಿಸಿತ್ತು.  ಈ ವಿಷಯದಲ್ಲಿ ಅಸಹನೆಯಿಂದ ಕುದಿಯುತ್ತಿದ್ದ ಚೀನಾ ಈಗ ಕೊಲಂಬೋದತ್ತ ದೌಡಾಯಿಸಿ ಭಾರತಕ್ಕೆ ಸವಾಲೊಡ್ಡುವುದು ನಿಶ್ಚಿತ. ಹೀಗಾಗಿ, ಚೀನಾದ ತಂತ್ರಗಳನ್ನು ಎದುರಿಸಲು ಭಾರತಕ್ಕೆ ಜಪಾನ್‌ನಂಥ ವಿಶ್ವಾಸಾರ್ಹ ರಾಷ್ಟ್ರದ ಸಹಯೋಗ ಅತ್ಯಗತ್ಯ. 

Advertisement

Udayavani is now on Telegram. Click here to join our channel and stay updated with the latest news.

Next