Advertisement

ಜನೌಷಧ ಮಾರಾಟ: ರಾಜ್ಯದಲ್ಲಿ ಗರಿಷ್ಠ

12:20 AM Sep 18, 2019 | mahesh |

ಉಡುಪಿ: ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪ್ರಧಾನ ಜನೌಷಧ ಕೇಂದ್ರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಔಷಧಗಳು ಮಾರಾಟವಾಗುತ್ತಿದ್ದು, ಪ್ರತಿ ತಿಂಗಳು 4ರಿಂದ 5 ಕೋ.ರೂ. ವ್ಯವಹಾರವಾಗುತ್ತಿದೆ ಎಂದು ರಾಜ್ಯ ಜನೌಷಧದ ನೋಡಲ್‌ ಅಧಿಕಾರಿ ಡಾ| ಅನಿಲಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ದೇಶದಲ್ಲಿ ಪ್ರತಿ ತಾಲೂಕಿಗೆ ಒಂದರಂತೆ 2,600 ಪಿಎಂಜೆ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ 540 ಕೇಂದ್ರಗಳಿವೆ. ಅವಿಭಜಿತ ದ.ಕ ಜಿಲ್ಲೆಯಲ್ಲಿನ ಕೇಂದ್ರಗಳು ಅತ್ಯಧಿಕ ಪ್ರಮಾಣದಲ್ಲಿ ಜನರಿಕ್‌ ಔಷಧಗಳನ್ನು ಖರೀದಿಸುತ್ತಿವೆ.ಔಷಧ ಗುಣಮಟ್ಟದ ಬಗ್ಗೆ ಸಾಕಷ್ಟು ಪರೀಕ್ಷೆಗಳಾಗಿವೆ ಯಾವುದೇ ಲೋಪ ಸಿಕ್ಕಿಲ್ಲ ಎಂದರು.

ಆರೋಪದಲ್ಲಿ ಸತ್ಯವಿಲ್ಲ
ಕೇಂದ್ರದ ಔಷಧಗಳು ಕಾಳಸಂತೆ ಯಲ್ಲಿ ಮಾರಾಟವಾಗುತ್ತಿವೆ ಎನ್ನುವ ಆರೋಪಗಳಿವೆ. ಆದರೆ ಇದರಲ್ಲಿ ಸತ್ಯಾಂಶವಿಲ್ಲ. ಜನೌಷಧ ಕೇಂದ್ರಗಳಿಗೆ ವಿತರಣೆಯಾಗುವ ಪ್ರತಿಯೊಂದು ಔಷಧವೂ ಮಂಗಳೂರು ಹಾಗೂ ಮೈಸೂರಿನ ವಿತರಕರಿಂದ ದೇಶಾದ್ಯಂತ ವಿತರಣೆಯಾಗುತ್ತಿದ್ದು, ಅವುಗಳ ಮೇಲೆ ಪಿಎಂಜೆ ಮುದ್ರೆ ಇದೆ ಎಂದು ತಿಳಿಸಿದರು.

2016ರಲ್ಲಿ ಮತ್ತೆ ಬಿಡುಗಡೆ
2011ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಜನೌಷಧ ಕೇಂದ್ರಗಳನ್ನು ಪ್ರಾರಂಭಿಸಲಾಗಿತ್ತು. ಆದರೆ 2014ರಲ್ಲಿ ವಿವಿಧ ಕಾರಣಗಳಿಂದ ಸಂಪೂರ್ಣ ಸ್ಥಗಿತಗೊಂಡಿತ್ತು. 2016ರಲ್ಲಿ ಮತ್ತೆ ಪ್ರಧಾನಮಂತ್ರಿ ಜನೌಷಧ ಹೆಸರಿನಡಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾ ಗಿತ್ತು. ಜಾಗತಿಕ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ)ಯಿಂದ ಪ್ರಮಾಣಿತ 1,200 ಔಷಧ ತಯಾರಕರಲ್ಲಿ ಉತ್ತಮ 100 ಸಂಸ್ಥೆಗಳನ್ನು ಆಯ್ಕೆ ಮಾಡಿ ಅವರಿಂದ ಔಷಧಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಕಳೆದ ಬಾರಿ ಗುಣಮಟ್ಟದ ಔಷಧ ಒದಗಿಸದ 29 ತಯಾರಿಕಾ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಜನೌಷಧ ಕೇಂದ್ರದ ಮಾರುಕಟ್ಟೆಯ ಪ್ರಧಾನ ವ್ಯವಸ್ಥಾಪಕ ಹರೀಶ್‌ ಶರ್ಮ, ರಾಜ್ಯ ಮಾರುಕಟ್ಟೆ ಅಧಿಕಾರಿಗಳಾದ ಅಭಿಷೇಕ್‌, ಸಾಗರ್‌ ಸೇಜ್‌ಪಾಲ್‌ ಉಪಸ್ಥಿತರಿದ್ದರು.

Advertisement

ಉತ್ತಮ ಗುಣಮಟ್ಟ
ಜನರಿಕ್‌ ಔಷಧದಲ್ಲಿ ದೇಶದಲ್ಲಿ ಸುಮಾರು 850 ಪ್ರಮುಖ ಔಷಧಗಳನ್ನು ವಿತರಿಸಲಾಗುತ್ತಿದೆ. ತಯಾರಿಕರಿಂದ ನೇರವಾಗಿ ರೀದಿಸುತ್ತಿರುವುದರಿಂದ ಔಷಧಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿವೆ. ಇತರೆ ಬ್ರ್ಯಾಂಡ್‌ಗಳ ಔಷಧದೊಂದಿಗೆ ಹೋಲಿಸಿದರೆ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಪಿಎಂಜೆ ಕೇಂದ್ರಗಳಿದ್ದು ಉತ್ತಮ ಸ್ಪಂದನೆಯಿದೆ. ಈ ಕೇಂದ್ರಗಳಲ್ಲಿ ವೈದ್ಯರ ಚೀಟಿಯಿಲ್ಲದೇ ಎಚ್‌ ಪಟ್ಟಿಗೆ ಸೇರಿದ ಔಷಧಗಳನ್ನು ವಿತರಿಸುವುದಿಲ್ಲ.
– ಡಾ| ಅನಿಲಾ, ರಾಜ್ಯ ಜನೌಷಧದ ನೋಡಲ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next