Advertisement

ಜನವರಿ ಚಿತ್ರನೋಟ

11:07 AM Jan 02, 2018 | Team Udayavani |

ಹೊಸ ವರ್ಷ, ಹೊಸ ಕನಸು, ಹೊಸ ಸಿನಿಮಾ… ಹೌದು, ಹೊಸ ವರ್ಷ ಬಂದಾಗಿದೆ. 2018 ಕ್ಕೆ ಹೊಸತನದ ಚಿತ್ರಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲು ಚಿತ್ರರಂಗವೂ ಅಣಿಯಾಗಿದೆ. ಈ ವರ್ಷವೂ ಹೊಸಬರು ಮತ್ತು ಹಳಬರ ಸಾರಥ್ಯದಲ್ಲಿ ಒಂದಷ್ಟು ಹೊಸಬಗೆಯ ಚಿತ್ರಗಳು ಬಿಡುಗಡೆಯಾಗಲಿವೆ. ವರ್ಷದ ಆರಂಭ ಜನವರಿಯಲ್ಲಿ ಇಬ್ಬರು ಸ್ಟಾರ್‌ ಚಿತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಹೊಸಬರ ಚಿತ್ರಗಳೇ ತೆರೆಗೆ ಬರಲು ಸಜ್ಜಾಗಿವೆ.

Advertisement

ಈ ಬಾರಿಯೂ ಸ್ಟಾರ್‌ಗಳ ಹಾಗೂ ಹೊಸಬರ ಬಿಡುಗಡೆ ಭರಾಟೆ ಜೋರಾಗಿದೆ. ಹೊಸ ವರ್ಷದ ಮೊದಲ ತಿಂಗಳಾ ಜನವರಿಯಲ್ಲಿ ಯಾವ್ಯಾವ ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ ಎಂಬ ಕುರಿತು ಒಂದು ರೌಂಡಪ್‌. ಹೊಸ ವರ್ಷದ ಮೊದಲ ತಿಂಗಳಲ್ಲೇ ಹತ್ತಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇವು ಅಧಿಕೃತವಾಗಿ ಬಿಡುಗಡೆಯನ್ನು ಘೋಷಿಸಿಕೊಂಡು ಲೆಕ್ಕಕ್ಕೆ ಸಿಕ್ಕ ಚಿತ್ರಗಳು.

ಇನ್ನು ಬಿಡುಗಡೆಯಾಗದೆ ಇರುವಂತಹ ಚಿತ್ರಗಳೂ ಇವೆ. ಅವು ಕೊನೆಯ ಹಂತದಲ್ಲಿ ಚಿತ್ರಮಂದಿರಕ್ಕೆ ಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹೊಸ ವರ್ಷದ ಮೊದಲ ವಾರದಲ್ಲಿ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ರವಿಚಂದ್ರನ್‌ ಪುತ್ರ ಮನೋರಂಜನ್‌ ಅಭಿನಯದ “ಬೃಹಸ್ಪತಿ’ ಜನವರಿ 5 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ನಂದಕಿಶೋರ್‌ ನಿರ್ದೇಶಕರು.

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಚಿತ್ರ ತಮಿಳಿನ “ವಿಐಪಿ’ ಚಿತ್ರದ ರಿಮೇಕ್‌. ಇದರಲ್ಲಿ ಕನ್ನಿಕಾ, ಸಿತಾರಾ, ಸಾಯಿಕುಮಾರ್‌, ಅವಿನಾಶ್‌, ಸಾಧುಕೋಕಿಲ, ವೀಣಾಸುಂದರ್‌ ಸೇರಿದಂತೆ ಇತರರು ನಟಿಸಿದ್ದಾರೆ. ಸತ್ಯಹೆಗಡೆ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್‌ ಸಂಕಲನ ಮಾಡಿದ್ದಾರೆ. ಥ್ರಿಲ್ಲರ್‌ ಮಂಜು ಸಾಹಸವಿದೆ. ಯೋಗಾನಂದ್‌ ಮುದ್ದಾನ್‌ ಸಂಭಾಷಣೆ ಬರೆದಿದ್ದಾರೆ.

ಹೊಸಬರ “ಪುನರಾರಂಭ’ ಚಿತ್ರವೂ ಜನವರಿ 5 ರಂದು ತೆರೆಗೆ ಬರುತ್ತಿದೆ. ಇದು ಹೊಸಬರ ಚಿತ್ರ. ರೂಪಕುಮಾರ್‌ ನಿರ್ಮಾಣದ ಈ ಚಿತ್ರಕ್ಕೆ ಡಾ.ವಿಜಯ್‌ಕುಮಾರ್‌ ಮತ್ತು ಗಣೇಶ್‌ರಾವ್‌ ನಿರ್ದೇಶಕರು. ಡಾ.ವಿಜಯ್‌ಕುಮಾರ್‌ ಹೀರೋ ಆಗಿಯೂ ನಟಿಸಿದ್ದಾರೆ. ನಾಗೇಂದ್ರಪ್ರಸಾದ್‌ ಸಂಗೀತವಿದೆ. ಮುತ್ತುರಾಜ್‌ ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರದಲ್ಲಿ ಐಶ್ವರ್ಯ, ಶೋಭ್‌ರಾಜ್‌, ಶಂಕರ್‌ ಅಶ್ವತ್ಥ್ ಇತರರು ನಟಿಸಿದ್ದಾರೆ.

Advertisement

ಅದೇ ದಿನ “ನಮ್ಮವರು’ ಚಿತ್ರ ಕೂಡ ತೆರೆಗೆ ಬರುತ್ತಿದೆ. ಪುರುಷೋತ್ತಮ್‌ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರದಲ್ಲಿ ಗಣೇಶ್‌ರಾವ್‌, ಜ್ಯೋತಿ, ಜಯಲಕ್ಮಿ, ಮಾ.ಚಿನ್ಮಯಿ ಇತರರು ನಟಿಸಿದ್ದಾರೆ. ಮುನಿಯಪ್ಪ ನಿರ್ಮಾಣವಿದೆ. ಇವುಗಳ ಜತೆಗೆ ಹೊಸಬರ “ಪುನರಪಿ’ ಎಂಬ ಚಿತ್ರವೂ ತೆರೆಗೆ ಬರುತ್ತಿದೆ. ಇನ್ನು, ಜನವರಿ ಎರಡನೇ ವಾರ ಅಂದರೆ, ಜ.12 ರಂದು ಮೂರು ಚಿತ್ರಗಳು ತೆರೆಗೆ ಬರುತ್ತಿವೆ.

“ಹಂಬಲ್‌ ಪೊಲಿಟಿಶೀಯನ್‌ ನೋಗ್‌ರಾಜ್‌’ ತೆರೆಗೆ ಬರುತ್ತಿದೆ. ರಕ್ಷಿತ್‌ ಶೆಟ್ಟಿ, ಪುಷ್ಕರ್‌ ಮಲ್ಲಿಕಾರ್ಜುನ್‌, ಹೇಮಂತ್‌ ರಾವ್‌ ನಿರ್ಮಾಣದ ಈ ಚಿತ್ರಕ್ಕೆ ಸಾದ್‌ಖಾನ್‌ ನಿರ್ದೇಶನವಿದೆ. ದಾನೀಶ್‌ ಸೇಠ್, ರೋಜರ್‌ ನಾರಾಯಣ್‌, ಶ್ರುತಿ ಹರಿಹರನ್‌,ಸುಮುಖೀ ಸುರೇಶ್‌, ವಿಜಯ್‌ ಚೆಂಡೂರ್‌ ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ.  ಜನಾರ್ದನ್‌ ನಿರ್ದೇಶಿಸಿ, ನಟಿಸಿರುವ “ನೀನಿಲ್ಲದ ಮಳೆ’ ಚಿತ್ರ ಕೂಡ ತೆರೆಗೆ ಬರುತ್ತಿದೆ.

ವಿದೇಶಿ ಬೆಡಗಿ ವ್ಯಾಲರಿ ಈ ಚಿತ್ರದ ನಾಯಕಿ. ಇಲ್ಲಿ ಲಕ್ಕಿ ಶಂಕರ್‌, ತಬಲಾ ನಾಣಿ, ಮೋಹನ್‌ ಜುನೇಜ ಇತರರು ನಟಿಸಿದ್ದಾರೆ. ಡಾ.ಶೈಲೇಂದ್ರ ಬೆಲ್ದಾಳ್‌ ಮತ್ತು ದೇವರಾಜ್‌ ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಇಂದ್ರಸೇನ ಸಂಗೀತ ನೀಡಿದ್ದಾರೆ. ರಘುಶಿವಮೊಗ್ಗ ನಿರ್ದೇಶನದ “ಚೂರಿಕಟ್ಟೆ’ ಚಿತ್ರ ಕೂಡ ಬಿಡುಗಡೆಯಾಗುತ್ತಿದ್ದು, ನಯಾಜುದ್ದೀನ್‌, ತುಳಸಿರಾಮುಡು ನಿರ್ಮಾಪಕರು. ಚಿತ್ರಕ್ಕೆ ವಾಸುಕಿ ವೈಭವ ಸಂಗೀತ ನೀಡಿದ್ದಾರೆ.

ಪ್ರವೀಣ್‌, ಪ್ರೇರಣಾ, ಅಚ್ಯುತ್‌ಕುಮಾರ್‌,ದತ್ತಣ್ಣ, ಮಂಜುನಾಥ್‌ ಹೆಗಡೆ ಇತರರು ನಟಿಸಿದ್ದಾರೆ. ಜನವರಿ 19ರಂದು “ರಾಜು ಕನ್ನಡ ಮೀಡಿಯಂ’ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಈ ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ಕಾರಣ, ಸುದೀಪ್‌ ಇಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ಟೀಸರ್‌ ಜೋರು ಸದ್ದು ಮಾಡಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಕೆ.ಎ. ಸುರೇಶ್‌ ನಿರ್ಮಾಣದ ಈ ಚಿತ್ರಕ್ಕೆ ನರೇಶ್‌ಕುಮಾರ್‌ ನಿರ್ದೇಶಕರು.

ಗುರುನಂದನ್‌ ಚಿತ್ರದ ನಾಯಕ, ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಅದೇ ದಿನ ಹೊಸಬರೇ ಹೊಸ ಪ್ರಯತ್ನ ಮಾಡಿರುವ “3 ಗಂಟೆ 30 ದಿನ 30 ಸೆಕೆಂಡ್‌’ ಚಿತ್ರ ಕೂಡ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಮತ್ತು ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿವೆ. ಮಧುಸೂದನ್‌ ನಿರ್ದೇಶನದ ಈ ಚಿತ್ರದಲ್ಲಿ ಅರುಗೌಡ, ಕಾವ್ಯಾಶೆಟ್ಟಿ, ಸುಧಾರಾಣಿ, ದೇವರಾಜ್‌, ಎಡಕಲ್ಲು ಗುಡ್ಡದ ಖ್ಯಾತಿಯ ಚಂದ್ರಶೇಖರ್‌ ಇತರರು ನಟಿಸಿದ್ದಾರೆ.

ಚಂದ್ರಶೇಖರ್‌ ಪದ್ಮಶಾಲಿ ಗೆಳೆಯರ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಧರ್‌ ವಿ.ಸಂಭ್ರಮ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದರ ಜೊತೆಗೇ ಶ್ರೀನಿವಾಸ ರಾಜು ನಿರ್ದೇಶನದ “ದಂಡುಪಾಳ್ಯ 3′ ಚಿತ್ರ ಸಹ ಬಿಡುಗಡೆಯಾಗುತ್ತಿದೆ. ಇನ್ನು, ಜನವರಿ ಅಂತ್ಯದಲ್ಲಿ ಅಂದರೆ, ಜನವರಿ 26ರ ಗಣರಾಜ್ಯೋತ್ಸವ ದಿನದಂದು “ದುನಿಯಾ’ ವಿಜಯ್‌ ಅಭಿನಯದ “ಕನಕ’ ತೆರೆಗೆ ಬರುತ್ತಿದೆ.

ಆರ್‌.ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಮಾನ್ವಿತಾ ಹರೀಶ್‌ ಮತ್ತು ಹರಿಪ್ರಿಯ ನಾಯಕಿಯರು. ಸತ್ಯಹೆಗಡೆ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಇದಕ್ಕಿಂತ ಒಂದು ದಿನ ಮುಂಚೆ ಅಂದರೆ ಜನವರಿ 25ರಂದು ನಿರೂಪ್‌ ಭಂಡಾರಿ, ಆವಂತಿಕಾ ಶೆಟ್ಟಿ, ರವಿಶಂಕರ್‌ ಮುಂತಾದವರು ನಟಿಸಿರುವ “ರಾಜರಥ’ ಚಿತ್ರವು ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ಅನೂಪ್‌ ಭಂಡಾರಿ ನಿರ್ದೇಶಿಸಿದ್ದು, ತಮಿಳು ನಟ ಆರ್ಯ ಅತಿಥಿ ಕಲಾವಿದರಾಗಿ ನಟಿಸಿದ್ದಾರೆ. ಅಂದಹಾಗೆ, ಇಲ್ಲಿ ಹೆಸರಿಸಿರುವ ಚಿತ್ರಗಳು ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಿಕೊಂಡಂತವುಗಳು. ಇನ್ನು ಒಂದಷ್ಟು ಚಿತ್ರಗಳು ಈ ತಿಂಗಳಲ್ಲಿ ಒಳ್ಳೆಯ ದಿನಕ್ಕಾಗಿ, ಚಿತ್ರಮಂದಿರಗಳಿಗಾಗಿ ಕಾಯುತ್ತಿವೆ. ಕೊನೆಯ ಹಂತದಲ್ಲಿ ಬಿಡುಗಡೆ ದಿನಾಂಕ ಘೋಷಿಸಿದರೆ ಅಚ್ಚರಿಯೇನಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next