ಮಹಾರಾಷ್ಟ್ರದ ರಾಯ್ ಗಢ್ ಸಮೀಪದ ಮುರುದ್ ಜಂಜೀರಾ ಕೋಟೆ ಸಮುದ್ರದ ಮಧ್ಯದಲ್ಲಿರುವ ಅದ್ಭುತ ಐತಿಹಾಸಿಕ ಕೋಟೆಯಾಗಿದ್ದು, ಇದು ಪ್ರವಾಸಿಗರ ಪ್ರೇಕ್ಷಣಿಯ ಸ್ಥಳವಾಗಿದೆ. ಮುರುದ್-ಜಂಜೀರಾ ಮಹಾರಾಷ್ಟ್ರ ರಾಯ್ ಗಢ್ ಜಿಲ್ಲೆಯ ಸಮುದ್ರ ತೀರದ ಒಂದು ಹಳ್ಳಿಯಾಗಿದೆ. ಮೂಲ ಅರೇಬಿಕ್ ಭಾಷೆಯಲ್ಲಿ “ಜಜೀರಾ” ಎಂದರೆ ದ್ವೀಪ ಎಂದರ್ಥ. ಅದರಿಂದಲೇ ಈ ದ್ವೀಪದಲ್ಲಿರುವ ಕೋಟೆಗೆ ಜಂಜೀರಾ ಕೋಟೆ ಎಂಬ ಹೆಸರು ಬಂದಿದೆ. ಇವೆಲ್ಲಕ್ಕಿಂತಲೂ ಕುತೂಹಲಕಾರಿ ವಿಚಾರವೇನೆಂದರೆ ಈ ಕೋಟೆಯನ್ನು ಯಾವ ರಾಜನಿಂದಲೂ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು!
ಮರಾಠರು, ಬ್ರಿಟಿಷರು, ಪೋರ್ಚುಗೀಸರು ಹಾಗೂ ಡಚ್ಚರು ಜಂಜೀರಾ ಕೋಟೆಯ ಮೇಲೆ ದಾಳಿ ನಡೆಸಿದ್ದರು ಕೂಡಾ ಯಾರಿಂದಲೂ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲವಾಗಿತ್ತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.
ಅಂಡಾಕಾರದ ಸುಂದರ ಕೋಟೆ:
ಮುರುದ್ ಜಂಜೀರಾ ಕೋಟೆಯು ಮುಂಬೈನ ದಕ್ಷಿಣಕ್ಕೆ 165 ಕಿಲೋ ಮೀಟರ್ ದೂರದಲ್ಲಿದೆ. ಜಂಜೀರಾ ಕೋಟೆಯು ಸಾಮಾನ್ಯ ಚದರ ಆಕಾರದ ಬದಲಿಗೆ ಅಂಡಾಕಾರದಲ್ಲಿದೆ. ಜಂಜೀರಾವನ್ನು ಭಾರತದ ಪ್ರಬಲ ಕರಾವಳಿ ಕೋಟೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಕೋಟೆಯ ಗೋಡೆಯು ಸುಮಾರು 40 ಅಡಿ ಎತ್ತರವಿದ್ದು, ಸುಮಾರು 19 ದುಂಡಿಗನ ಕಮಾನುಗಳನ್ನು ಹೊಂದಿದೆ. ಕೋಟೆಯೊಳಗೆ ಬೃಹತ್ ಫಿರಂಗಿಗಳಿವೆ. ಇಲ್ಲಿ ಸ್ಥಳೀಯ ಮತ್ತು ಯುರೋಪಿಯನ್ ನಿರ್ಮಿತ ಅನೇಕ ಫಿರಂಗಿಗಳು ತುಕ್ಕು ಹಿಡಿದೆವೆ. ಪಾಳು ಬಿದ್ದಿರುವ ಜಂಜೀರಾ ಕೋಟೆಯಲ್ಲಿ ಬ್ಯಾರಕ್ ಗಳು, ಅಧಿಕಾರಿಗಳ ವಸತಿಗೃಹ, ಮಸೀದಿಗಳ ಕುರುಹುಗಳಿವೆ. ಅಷ್ಟೇ ಅಲ್ಲ ಸುತ್ತಲೂ ಉಪ್ಪು ನೀರಿನಿಂದ ಆವೃತ್ತವಾಗಿರುವ ಸಮುದ್ರದ ಮಧ್ಯದಲ್ಲಿರುವ ಜಂಜೀರಾ ಕೋಟೆಯಲ್ಲಿ 60 ಅಡಿ ಆಳದ ಎರಡು ಬೃಹತ್ ಸಿಹಿ ನೀರಿನ ಕೊಳಗಳಿವೆ ಎಂಬುದು ಅಚ್ಚರಿಯ ಸಂಗತಿ. ಅದನ್ನು ಪ್ರವಾಸಿಗರೂ ಈವಾಗಲೂ ಕುಡಿಯಲು ಬಳಸುತ್ತಾರೆ.
ಈ ಕೋಟೆಯ ವಿಶೇಷ ಆಕರ್ಷಣೆಯೆಂದರೆ ಕಲಾಲ್ ಬಾಂಗಡಿ, ಚಾವ್ರಿ ಮತ್ತು ಲಂಡ ಕಸಂ ಎಂಬ 3 ದೈತ್ಯಾಕಾರದ ಫಿರಂಗಿಗಳು. ವಿಶಿಷ್ಟ ವಾಸ್ತು ಶಿಲ್ಪದ ಕಲ್ಪನೆಯಲ್ಲಿ ನಿರ್ಮಿಸಲ್ಪಟ್ಟಿರುವ ಜಂಜೀರಾ ಕೋಟೆ ವಿಸ್ಮಯಗಳಲ್ಲಿ ಒಂದಾಗಿದೆ.
ನೀವೂ ಜಂಜೀರಾ ಕೋಟೆಗೆ ಭೇಟಿ ಕೊಡ್ತೀರಾ?
ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಜಂಜೀರಾ ಕೋಟೆಗೆ ಭೇಟಿ ನೀಡಲು ಉತ್ತಮ ಕಾಲವಾಗಿದೆ. ಮಹಾರಾಷ್ಟ್ರದ ರಾಯ್ ಗಢ್ ನಿಂದ 84 ಕಿಲೋ ಮೀಟರ್ ದೂರದಲ್ಲಿರುವ ಜಂಜೀರಾ ಕೋಟೆಯನ್ನು ಸಣ್ಣ ಹಳ್ಳಿಯಾದ ರಾಜಪುರಿಯಿಂದ ದೋಣಿಯ ಮೂಲಕ ಪ್ರಯಾಣಿಸಿ ಕೋಟೆಯನ್ನು ಪ್ರವೇಶಿಸಬಹುದಾಗಿದೆ. ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆವರೆಗೆ ಕೋಟೆ ಪ್ರವೇಶಕ್ಕೆ ಅವಕಾಶವಿದೆ.
ಜಂಜೀರಾ ಕೋಟೆ ಹಿಂದಿನ ಇತಿಹಾಸ:
ಸುಮಾರು 15ನೇ ಶತಮಾನದಲ್ಲಿ “ರಾಜಾ ರಾಮ್ ಪಾಟೀಲ್” ಜಂಜೀರಾ ದ್ವೀಪದ ಮುಖ್ಯಸ್ಥನಾಗಿದ್ದರು. ಮೀನುಗಾರ ಸಮುದಾಯದ ಮುಖಂಡರಾಗಿದ್ದ ಪಾಟೀಲ್ ಕಡಲ್ಗಳ್ಳರ ಕಾಟದಿಂದ ತಪ್ಪಿಸಿಕೊಂಡ ಶಾಂತಿಯುತವಾಗಿ ಜೀವನ ನಡೆಸುವ ನಿಟ್ಟಿನಲ್ಲಿ ಅಹ್ಮದ್ ನಗರ ಸುಲ್ತಾನ್ ನಿಂದ ಅನುಮತಿ ಪಡೆದುಕೊಂಡು ಮರದ ಕೋಟೆಯನ್ನು ಕಟ್ಟಿಸಿದ್ದ. ಆದರೆ ಪಾಟೀಲ್ ಸುಲ್ತಾನ್ ನ ಆದೇಶಗಳನ್ನು ಪಾಲಿಸಲು ನಿರಾಕರಿಸಿಬಿಟ್ಟಿದ್ದ. ಇದರಿಂದ ಕುಪಿತನಾದ ನಿಜಾಮ್ ಶಾಹಿ ಸುಲ್ತಾನ್ ಜಂಜೀರಾ ಕೋಟೆಯನ್ನು ವಶಪಡಿಸಿಕೊಳ್ಳಲು ಅಡ್ಮಿರಲ್ ಪೀರಮ್ ಖಾನ್ ಎಂಬಾತನಿಗೆ ಹೊಣೆ ಹೊರಿಸಿದ್ದ.
ಜಂಜೀರಾ ದ್ವೀಪವನ್ನು ಆಕ್ರಮಿಸಿಕೊಳ್ಳಲು ಪೀರಮ್ ಖಾನ್ ಸೇನಾ ತುಕಡಿ ಹಾಗೂ ಯುದ್ಧ ಸಾಮಗ್ರಿಗಳೊಂದಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರೂ ಅದು ಸಫಲವಾಗಿಲ್ಲವಾಗಿತ್ತು. ನಂತರ ವ್ಯಾಪಾರಿಯಂತೆ ವೇಷ ಧರಿಸಿ ಜಂಜೀರಾ ಕೋಟೆಗೆ ಬಂದ ಪೀರಮ್ ಖಾನ್ ತಾನು ತಂದಿದ್ದ ವೈನ್ ಬ್ಯಾರೆಲ್ ಗಳ ಜೊತೆ ಒಂದು ರಾತ್ರಿ ಉಳಿಯಲು ಅವಕಾಶ ನೀಡಬೇಕೆಂದು ಪಾಟೀಲ್ ಬಳಿ ವಿನಂತಿಸಿಕೊಂಡಿದ್ದ. ಅನುಮತಿ ಸಿಕ್ಕ ಬಳಿಕ ಪೀರಮ್ ಖಾನ್ ಪಾಟೀಲ್ ಅವರನ್ನು ಅಭಿನಂದಿಸಲು ಪಾರ್ಟಿಯನ್ನು ಆಯೋಜಿಸಿದ್ದ. ಅಂದು ರಾತ್ರಿ ಪಾಟೀಲ್ ಸೇರಿದಂತೆ ಎಲ್ಲರಿಗೂ ಮದ್ಯವನ್ನು ನೀಡಿದ್ದ. ಪೂರ್ವ ಯೋಜಿತ ಸಂಚಿನಂತೆ ಬ್ಯಾರೆಲ್ ಗಳಲ್ಲಿ ಅಡಗಿದ್ದ ಜನರ ಜೊತೆ ಸೇರಿ ಪೀರಂ ಖಾನ್ ದ್ವೀಪವನ್ನು ವಶಪಡಿಸಿಕೊಂಡಿದ್ದ.
1567ರಲ್ಲಿ ಮಲಿಕ್ ಅಂಬರ್ ಜಂಜೀರಾ ದ್ವೀಪದಲ್ಲಿದ್ದ ಕೋಟೆಯನ್ನು ನಾಶಪಡಿಸಿ, ಕಲ್ಲು, ಗಾರೆಗಳಿಂದ ಬಲಿಷ್ಠವಾದ ಕೋಟೆಯನ್ನು ನಿರ್ಮಿಸುವ ಮೂಲಕ ಸಿದ್ದಿಗಳ ಆಶ್ರಯ ತಾಣವಾಯಿತು. ಸಿದ್ದಿಗಳ ಆಡಳಿತಾವಧಿಯಲ್ಲಿ ಶಿವಾಜಿ ಮಹಾರಾಜ ಕೂಡಾ ಜಂಜೀರಾ ಕೋಟೆಯ ಮೇಲೆ 13 ಬಾರಿ ದಾಳಿ ನಡೆಸಿದ್ದರು ಕೂಡಾ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲವಾಗಿತ್ತು. ಶಿವಾಜಿ ಕಾಲಾನಂತರ ಮಗ ಸಂಭಾಜಿ ಕೂಡಾ ಜಲಮಾರ್ಗದಲ್ಲಿ ಸುರಂಗ ತೋಡಿ ಕೋಟೆಯನ್ನು ವಶಪಡಿಸಿಕೊಳ್ಳಲು ಯತ್ನಿಸಿ ವಿಫಲನಾಗಿದ್ದ. ಇದಕ್ಕೆ ಸವಾಲಾಗಿ ಸಂಭಾಜಿ 1676ರಲ್ಲಿ ಜಂಜೀರಾದಿಂದ ನೈಋತ್ಯ ದಿಕ್ಕಿಗೆ ಪದ್ಮ ದುರ್ಗ ಎಂಬ ಕೋಟೆಯನ್ನು ಕಟ್ಟಿಸಿದ್ದ. ಇದೀಗ ಪದ್ಮದುರ್ಗ ಕೋಟೆ ಭಾರತೀಯ ನೌಕಾಸೇನಾ ಆಡಳಿತದಲ್ಲಿದ್ದು, ಅಲ್ಲಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.