ಹೈದರಾಬಾದ್: ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧನವಾಗಿದ್ದ ಖ್ಯಾತ ನೃತ್ಯ ಸಂಯೋಜಕ (Choreographer) ಜಾನಿ ಮಾಸ್ಟರ್ (Jani Master) ಅವರಿಗೆ ಕೋರ್ಟ್ ಷರತ್ತಬದ್ಧ ಜಾಮೀನು ಮಂಜೂರು ಮಾಡಿದೆ ಎಂದು ವರದಿಯಾಗಿದೆ.
ಅತ್ಯಾಚಾರ ಆರೋಪಿ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅವರಿಗೆ ಹೈದರಾಬಾದ್‌ನ ರಂಗಾ ರೆಡ್ಡಿ ಜಿಲ್ಲಾ ನ್ಯಾಯಾಲಯ ಗುರುವಾರ (ಅಕ್ಟೋಬರ್ 3) ಷರತ್ತುಬದ್ಧ ಮಧ್ಯಂತರ ಜಾಮೀನು (interim bail) ಮಂಜೂರು ಮಾಡಿದೆ.
ಇದನ್ನೂ ಓದಿ: Indian 3: ʼಇಂಡಿಯನ್ -2ʼ ನಿಂದ ಅಪಾರ ನಷ್ಟ; ಮೂರನೇ ಭಾಗ ನೇರವಾಗಿ ಓಟಿಟಿಯಲ್ಲಿ ರಿಲೀಸ್?
ಅಕ್ಟೋಬರ್ 6 ರಿಂದ ಅಕ್ಟೋಬರ್ 10 ರವರೆಗೆ ಜಾಮೀನು ಮಂಜೂರು ಮಾಡಲಾಗಿದ್ದು, ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಅವರಿಗೆ ಜಾಮೀನು ನೀಡಲಾಗಿದೆ.
ಅಕ್ಟೋಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ತಲಾ 2 ಲಕ್ಷ ರೂ. ಶ್ಯೂರಿಟಿ ನೀಡಬೇಕು ಮತ್ತು ಈ ಅವಧಿಯಲ್ಲಿ ಮಾಧ್ಯಮ ಸಂದರ್ಶನಗಳನ್ನು ನೀಡದಂತೆ ಅಥವಾ ಯಾವುದೇ ಹೊಸ ಮಧ್ಯಂತರ ಜಾಮೀನು ಅರ್ಜಿಗಳನ್ನು ಸಲ್ಲಿಸದಂತೆ ಜಾನಿ ಮಾಸ್ಟರ್‌ಗೆ ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ ಎಂದು ವರದಿ ತಿಳಿಸಿದೆ.
ಧನುಷ್ ಮತ್ತು ನಿತ್ಯಾ ಮೆನೆನ್ ಅಭಿನಯದ ʼತಿರುಚಿತ್ರಾಂಬಲಂʼ ಚಿತ್ರದ ʼಮೇಘಂ ಕರುಕ್ಕಾಟʼ ಹಾಡಿನಲ್ಲಿನ ಅವರ ಕೆಲಸಕ್ಕಾಗಿ ಜಾನಿ ಮಾಸ್ಟರ್ ಅವರಿಗೆ ಆಗಸ್ಟ್ ತಿಂಗಳಿನಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಸಮಾರಂಭವು ಈ ವಾರದ ಕೊನೆಯಲ್ಲಿ ದೆಹಲಿಯಲ್ಲಿ ನಡೆಯಲಿದೆ.
ಜಾನಿ ಮಾಸ್ಟರ್ ಮೇಲಿನ ಆರೋಪವೇನು?:
ಇತ್ತೀಚೆಗೆ 21 ವರ್ಷದ ಯುವತಿಯೊಬ್ಬಳು ನೃತ್ಯ ಸಂಯೋಜಕ ಜಾನಿ ಮಾಸ್ಟರ್ (ಶೇಕ್ ಜಾನಿ ಬಾಷಾ) ಮೇಲೆ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದಳು. ಈ ಸಂಬಂಧ ಸೈಬರಾಬಾದ್‌ನ ನರಸಿಂಗಿ ಪೊಲೀಸರು ಸೆ.18ರಂದು ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದರು.
ದೂರಿನಲ್ಲಿ ಏನಿದೆ?:
ದೂರು ನೀಡಿದ ಯುವತಿ ಕೂಡ ನೃತ್ಯ ಸಂಯೋಜಕಿಯಾಗಿದ್ದು, ಕಳೆದ ಕೆಲ ತಿಂಗಳಿನಿಂದ ಈಕೆ ಜಾನಿ ಮಾಸ್ಟರ್ ಜೊತೆಗೆ ಕೆಲಸ ಮಾಡುತ್ತಿದ್ದಳು. ಜಾನಿ ಮಾಸ್ಟರ್ ಹೊರಾಂಗಣ ಚಿತ್ರೀಕರಣದ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.
ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಚಿತ್ರೀಕರಣದ ಸಮಯದಲ್ಲಿ ಜಾನಿ ಮಾಸ್ಟರ್ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರು ನರಸಿಂಗಿಯಲ್ಲಿರುವ ತನ್ನ ನಿವಾಸದಲ್ಲಿ ಹಲವಾರು ಬಾರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರೆ ಹೇಳಿದ್ದಾಳೆ.
ಪೊಲೀಸರು ದೂರು ದಾಖಲಿಸಿಕೊಂಡು ಜಾನಿ ಮಾಸ್ಟರ್ ಅವರ ಬಂಧನಕ್ಕೆ ಬಲೆ ಬೀಸಿದ್ದರು. ಜಾನಿ ಮಾಸ್ಟರ್ ಅವರ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ತಲೆ ಮರೆಸಿಕೊಂಡಿದ್ದ ಅವರನ್ನು ವಿಶೇಷ ಕಾರ್ಯಾಚರಣೆ ತಂಡದ ಪೊಲೀಸರು ಸೆ.19ರಂದು ಗೋವಾದಲ್ಲಿ ಬಂಧಿಸಲಾಗಿತ್ತು.