ಉಳ್ಳಾಲ: ಜನತಾ ಕರ್ಪ್ಯೂಗೆ ಉಳ್ಳಾಲ ಸೇರಿದಂತೆ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಂಪೂರ್ಣ ಬಂದ್ ಆಗಿದೆ.
ತಲಪಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಪೂರ್ಣ ಬಂದ್ ಆಗಿದ್ದು ವಾಹನಗಳು ರಸ್ತೆಗೆ ಇಳಿದಿಲ್ಲ. ಹೆದ್ದಾರಿ ಸಂಪರ್ಕಿಸುವ ಕಲ್ಲಾಪು, ಆಡಂಕುದ್ರು, ತೊಕ್ಕೊಟ್ಟು, ಕಾಪಿಕಾಡು, ಕುಂಪಲ ಬೈಪಾಸ್, ಕೊಲ್ಯ, ಅಡ್ಕ, ಕೋಟೆಕಾರು, ಬೀರಿ, ಸೋಮೇಶ್ವರ ಉಚ್ಚಿಲ, ಕೆ. ಸಿ.ರೋಡ್, ತಲಪಾಡಿವರೆಗೆ ಎಲ್ಲಾ ಅಂಗಡಿ ಮುಗ್ಗಟ್ಟು ಮುಚ್ಚಿದ್ದು ವಾಹನಗಳು ರಸ್ತೆಗೆ ಇಳಿಯಲಿಲ್ಲ. ಕಾಸರಗೋಡುವಿನಿಂದ ಮಂಗಳೂರು ಕಡೆ ಆಗಮಿಸುವ ವಾಹನಗಳು ಸಂಪೂರ್ಣ ಸ್ಥಗಿತಗೊಂಡಿದೆ.
ಚೆಕ್ ಪಾಯಿಂಟ್ ಗಳಲ್ಲಿ ಕಟ್ಟೆಚ್ಚರ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಚೆಕ್ ಪೋಸ್ಟ್ ಗಳ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಆರೋಗ್ಯ ತಪಾಸಕರಿಗೆ ರಿಲೀಫ್ : ಕಳೆದ ಕೆಲವು ದಿನಗಳಿಂದ ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದ ಅರೋಗ್ಯ ಸಿಬಂದಿಗಳಿಗೆ ರವಿವಾರ ಜನತಾ ಕರ್ಪ್ಯೂನಿಂದ ರಿಲೀಫ್ ಸಿಕ್ಕಿದೆ. ನಿನ್ನೆ ಮಧ್ಯಾಹ್ನದಿಂದ ಗಢಿಪ್ರದೇಶದಲ್ಲಿ ಜನ ಸಂಚಾರ ವಾಹನ ಸಂಚಾರ ಸ್ಥಗಿತಗೊಂಡ ಬಳಿಕ ಸಿಬ್ಬಂದಿಗಳು ನಿರಾಳರಾದರೆ ಬಸ್ಸಿನಲ್ಲಿ ಆಗಮಿಸಿ ಗಡಿ ದಾಟುತ್ತಿದ್ದ ಪ್ರಯಾಣಿಕರಿಗೆ ತಪಾಸಣೆ ನಡೆಸಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.
ತಲಪಾಡಿ ಚೆಕ್ ಪೋಸ್ಟ್ ಹೊರತು ಪಡಿಸಿ ಬೇರೆ ಯಾವುದೇ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರೊಂದಿಗೆ ಆರೋಗ್ಯ ಸಿಬಂದಿಗಳು ಇರಲಿಲ್ಲ. ಗ್ರಾಮೀಣ ಪ್ರದೇಶ ಇದೇ ಮೊದಲ ಬಾರಿ ಸಂಪೂರ್ಣ ಸ್ಥಬ್ದವಾಗಿದೆ