ಕೆಜಿಎಫ್: ಅಮೃತ್ ಸಿಟಿ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ನಗರಸಭೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರೂ, ನಗರಸಭಾ ವ್ಯಾಪ್ತಿಗೆ ಸೇರಿದ ವಾರ್ಡ್‌ವೊಂದರಲ್ಲಿ ಶೌಚಾಲಯ, ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ಎಲ್ಲಿ ನೋಡಿದರೂ ಮುಳ್ಳು ಪೊದೆಗಳು ತುಂಬಿಕೊಂಡು ಹಾವು, ಚೇಳುಗಳ ಆವಾಸ ಸ್ಥಾನವಾಗಿರುವ ಜಾಗದಲ್ಲಿ ನಾಗರಿಕರು ಸೌಲಭ್ಯಗಳಿಲ್ಲದೇ ಪರದಾಡುವಂತಹ ಸ್ಥಿತಿ ಎದುರಾಗಿದೆ. ನಗರಸಭೆ ವ್ಯಾಪ್ತಿ ಯ ವಾರ್ಡ್ ನಂ 21ರ ಮಂಜು ನಾಥ ನಗರ ಗ್ರೀನ್ ಲ್ಯಾಂಡ್ ಜನತಾ ಕಾಲೋನಿಯೇ ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಿರುವ ವಾರ್ಡ್ ಆಗಿದ್ದು, ಇಲ್ಲಿ ವಾಸಿಸುವ ಬಹುತೇಕ ನಿವಾಸಿಗಳಿಗೆ ಇಂದಿಗೂ ರೇಷನ್ ಕಾರ್ಡ್, ವೋಟರ್ ಕಾರ್ಡ್ ಇಲ್ಲ.
40 ವರ್ಷದ ಹಿಂದೆ ಕಾಲೋನಿ ನಿರ್ಮಾಣ: 21ನೇ ಶತಮಾನದಲ್ಲಿದ್ದರೂ ಆಧುನಿಕ ಸೌಲಭ್ಯ ಮತ್ತು ಸೌಕರ್ಯಗಳಿಂದ ವಂಚಿತವಾಗಿ ಇಲ್ಲಿನ ನಿವಾಸಿಗಳು ದಿನದೂಡುತ್ತಿರುವುದು ದುರ್ದೈವದ ಸಂಗತಿ ಎಂದರೆ ತಪ್ಪಾಗದು. ಸುಮಾರು 40 ವರ್ಷಗಳ ಹಿಂದೆ ಅಂದು ಶಾಸಕರಾಗಿದ್ದ ದಿ.ಎಂ. ಭಕ್ತವತ್ಸಲಂ ಅವರ ಕಾಲದಲ್ಲಿ ನಗರದ ಸ್ವತ್ಛತೆಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರಿಗಾಗಿ ಸ್ಲಂ ಬೋರ್ಡ್ ಮೂಲಕ 300ಕ್ಕೂ ಹೆಚ್ಚು ಜನತಾ ಮನೆಗಳನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದ್ದು, ಸರ್ಮಪಕ ಮೂಲಭೂತ ಸೌಲಭ್ಯ ಕಲ್ಪಿಸದೇ ಇರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇಲ್ಲದೇ ಇರುವುದರಿಂದ ಇಲ್ಲಿನ ನಾಗರಿಕರು ಕುಡಿಯುವ ನೀರಿಗಾಗಿ ನೂರಾರು ರೂಪಾಯಿಗಳನ್ನು ನೀಡಿ ಟ್ಯಾಂಕರ್ ನೀರನ್ನು ಕೊಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನಿವಾಸಿಗಳು ಅಳಲನ್ನು ತೋಡಿಕೊಂಡಿದ್ದಾರೆ.
ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಲೋನಿಯಲ್ಲಿ ನಿರ್ಮಾಣ ಮಾಡಲಾಗಿರುವ ಮನೆಗಳ ತಾರಸಿ ಗೋಡೆಗಳು ಆಗಿಂದ್ದಾಗ್ಗೆ ಸುರಿ ಯುತ್ತಿರುವ ಮಳೆಗೆ ಕುಸಿದು ಬಿದ್ದಿವೆ. ಅಲ್ಲದೇ ಒಂದೆಡೆಯಿಂದ ಮತ್ತೂಂದೆಡೆಗೆ ಸರಾಗವಾಗಿ ಸಂಚರಿಸಲು ಕಾಲೋನಿಯಲ್ಲಿ ಯೋಗ್ಯವಾದ ರಸ್ತೆ ಇಲ್ಲ. ಮನೆಗಳ ನೀರು ಹೊರ ಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಪರಿಣಾಮವಾಗಿ ಕೊಳಚೆ ನೀರು ಎಲ್ಲೆಂದರಲ್ಲಿ ನಿಂತು ಮಲೇ ರಿಯಾ, ಡೆಂ , ಚಿಕನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
21ನೇ ಶತಮಾನದಲ್ಲೂ ಪಾಳು ಬಿದ್ದಿರುವ ಮನೆಗಳಲ್ಲಿ ಜನರು ವಾಸಿಸುತ್ತಿರುವುದು ಈ ಭಾಗದ ಜನ ಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿನ ಜನರು ಹಾವು-ಚೇಳುಗಳ ನಡುವೆ ಜೀವ ಭಯದಲ್ಲೇ ಜನರು ವಾಸಿಸುತ್ತಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಿದೆ.
– ದಾಸ್, ದಲಿತ ಬಹುಜನ ಚಳಿವಳಿ ರಾಜ್ಯ ಉಪಾಧ್ಯಕ್ಷ
ವಾರ್ಡ್‌ನ ಬಹುತೇಕ ಮನೆಗಳು ಪಾಳು ಬಿದ್ದಿರುವುದರಿಂದ ಅನೈತಿಕ ಚಟುವಟಿಕೆಗಳ ಕೇಂದ್ರಗಳಾಗಿ ಮಾರ್ಪಟ್ಟಿದೆ. ಮಹಿಳೆಯರು, ಮಕ್ಕಳು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಒಂದೆಡೆಯಿಂದ ಮತ್ತೂಂದೆಡೆಗೆ ಸಾಗಬೇಕಾಗಿದೆ. ಜನಪ್ರತಿನಿ ಧಿಗಳು ಇತ್ತ ಗಮನಹರಿಸಿ ಪಾಳು ಬಿದ್ದಿರುವ ಮನೆಗಳನ್ನು ಕೆಡವಿ ಮರು ನಿರ್ಮಾಣ ಮಾಡಬೇಕಾಗಿದೆ.
-ರವಿ ಹರಿಜ್ಞಾನ್, ಸ್ಥಳೀಯ ನಿವಾಸಿ
-ನಾಗೇಂದ್ರ ಕೆ.