ಗಂಗಾವತಿ: ಗಂಗಾವತಿಯಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮನೆ ಮಾಡಿರುವ ಬಳ್ಳಾರಿ ಗಣಿಧಣಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಮಂಗಳವಾರವೂ ನಗರದ ಪುರಾತನ ದೇಗುಲಗಳು ಹಾಗೂ ವಿವಿಧ ಪಕ್ಷಗಳ ಮನೆಗಳಿಗೆ ಭೇಟಿ ನೀಡಿ ಗೌಪ್ಯವಾಗಿ ಮಾತುಕತೆ ನಡೆಸಿ ಕುತೂಹಲಕ್ಕೆ ಕಾರಣರಾಗಿದ್ದಾರೆ.
ತಾಲೂಕಿನ ಪಂಪಾ ಸರೋವರದಲ್ಲಿ ಸೋಮವಾರ ರಾತ್ರಿ ತಂಗಿದ್ದ ಜನಾರ್ಧನ ರೆಡ್ಡಿ ಮಂಗಳವಾರ ಗಂಗಾವತಿ ಹೊರ ವಲಯದಲ್ಲಿರುವ ಸಾಯಿ ಮಂದಿರ, ಹಿರೇಜಂತಗಲ್ ಪ್ರಸನ್ನ, ಪಂಪಾ ವಿರೂಪಾಕ್ಷೇಶ್ವರ ದೇಗುಲ ಮತ್ತು ಪಂಪಾ ನಗರದಲ್ಲಿರುವ ಪುರಾತನ ಪಂಪಾಪತಿ ಗುಡಿಗೆ ತೆರಳಿ ದೇವರ ದರ್ಶನ ಪಡೆದು ಗಂಗಾವತಿಯಲ್ಲಿ ಜನರ ಸೇವೆ ಮಾಡುವ ಸಂಕಲ್ಪ ಮಾಡಿದರು.
ನಂತರ ವಾಲ್ಮೀಕಿ ಸಮಾಜದ ಹಾಗೂ ಬಿಜೆಪಿ ಮುಖಂಡ ಹೊಸಮಲಿ ಮಲ್ಲೇಶಪ್ಪ, ಆರ್ಯವೈಶ್ಯ ಸಮಾಜದ ಮಹಿಳಾ ಮುಖಂಡರಾದ ಸುಚೇತಾ ಶಿರಿಗೇರಿ ಮತ್ತು ಲಾಳಗೊಂಡ ಸಮಾಜದ ಹಿರಿಯ ಮುಖಂಡರಾದ ಹೊಸಳ್ಳಿ ಶಂಕ್ರಗೌಡ ಸೇರಿ ಇತರೆ ಸಮಾಜದ ಮುಖಂಡರ ಮನೆಗೆ ತೆರಳಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರು ಮಾತನಾಡಲು ಯತ್ನಿಸಿದಾಗ ಡಿ.18 ರ ವರೆಗೆ ರಾಜಕೀಯ ಸುದ್ದಿ ಏನನ್ನೂ ಮಾತನಾಡುವುದಿಲ್ಲ. ರಾಜಕೀಯ ಮತ್ತು ಜನರ ಸಾಮಾಜಿಕ ಸೇವೆ ಮಾಡಲು ಮನೆ ಮಾಡಿದ್ದು, ಮುಂದೆ ಗಂಗಾವತಿ ಜನರೊಂದಿಗೆ ಸದಾ ಸ್ಪಂದಿಸಲಿದ್ದು, ಕೆಲ ಹಿತೈಷಿಗಳು ಡಿ.18 ರ ವರೆಗೆ ಯಾವುದೇ ರಾಜಕೀಯ ಹೇಳಿಕೆ ನೀಡದಂತೆ ತಿಳಿಸಿದ್ದರಿಂದ ಸುಮ್ಮನಿದ್ದೇನೆ. ಕಲ್ಯಾಣ ಕರ್ನಾಟಕದ ಜನರು ತೋರಿಸುವ ಪ್ರೀತಿ-ಗೌರವಗಳಿಗೆ ಅಭಿನಂದನೆಗಳು ಎಂದರು.
ಬಿಜೆಪಿ ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ತಿಪ್ಪೇರುದ್ರಸ್ವಾಮಿ, ಕಾಂಗ್ರೆಸ್ ಮುಖಂಡ ವಡ್ರಟ್ಟಿ ವೀರಭದ್ರಪ್ಪ ನಾಯಕ ಸೇರಿ ಅನೇಕರಿದ್ದರು.