Advertisement

ಜನಾರ್ದನ ರೆಡ್ಡಿ ಕೊರಳ ತುಂಬಾ ಕಾನೂನಿನ ಉರುಳು

06:00 AM Nov 12, 2018 | Team Udayavani |

ಬೆಂಗಳೂರು: ಇತ್ತೀಚೆಗಿನ ಉಪಚುನಾವಣೆ ಸಂದರ್ಭದಲ್ಲಿ ಅಬ್ಬರಿಸಿದ್ದ ಜನಾರ್ದನ ರೆಡ್ಡಿ ಈಗಜೈಲು ಸೇರಿದ್ದಾರೆ. ಅಕ್ರಮ ಗಣಿಗಾರಿಕೆ, ಅಕ್ರಮ  ಅದಿರು ಸಾಗಾಟ, ಕ್ಯಾಷ್‌ ಫಾರ್‌ ಬೇಲ್‌ ಪ್ರಕರಣಗಳಲ್ಲಿ ಜಾಮೀನು ಪಡೆದು ಕೊಂಚ ನಿರಾಳರಾಗಿದ್ದ ರೆಡ್ಡಿಗೆ ಇದೀಗ “ಡೀಲ್‌’ ಹೆಸರಲ್ಲಿ ಮತ್ತೂಂದು ಸುತ್ತಿನ ಕಾನೂನು ಕುಣಿಕೆ ಸುತ್ತಿಕೊಂಡಿದೆ.

Advertisement

ರೆಡ್ಡಿ ವಿರುದ್ಧ ಅಕ್ರಮ ಗಣಿಗಾಣಿಕೆ, ಅಕ್ರಮ ಅದಿರು ಸಾಗಾಟ, ಕ್ಯಾಷ್‌ ಫಾರ್‌ ಬೇಲ್‌ ಪ್ರಕರಣಗಳು ಸೇರಿ ಪ್ರಮುಖವಾಗಿ 6 ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳಲ್ಲಿ ಅವರಿಗೆ ಜಾಮೀನು ಸಿಕ್ಕಿದ್ದು, ಈ ಎಲ್ಲ ಪ್ರಕರಣಗಳು ಅಧೀನ ನ್ಯಾಯಾಲಯ, ಸಿಬಿಐ ವಿಶೇಷ ನ್ಯಾಯಾಲಯ,ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ವಿಚಾರಣಾ ಹಂತದಲ್ಲಿ ಬಾಕಿ ಇವೆ.

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ರೆಡ್ಡಿಯವರು ಜೈಲು ಸೇರಲು ಪ್ರಮುಖ ಕಾರಣವಾಗಿದ್ದು ಆಂಧ್ರಪ್ರದೇಶ ಸರ್ಕಾರ, ಕರ್ನಾಟಕದ ಲೋಕಾಯುಕ್ತ ಹಾಗೂ ಸಮಾಜ ಪರಿವರ್ತನಾ ಸಮುದಾಯ. ರೆಡ್ಡಿ ವಿರುದಟಛಿ ಮೊದಲ ಪ್ರಕರಣ ದಾಖಲಾಗಿದ್ದು 2009ರಲ್ಲಿ ಓಬಳಾಪುರಂ ಮೈನಿಂಗ್‌ ಕಂಪನಿಯಿಂದ (ಓಎಂಸಿ) ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ದಲ್ಲಿ. ಈ ಪ್ರಕರಣವನ್ನುಆಂಧ್ರಪ್ರದೇಶ ಎಸಿಬಿ  ದಾಖಲಿಸಿತ್ತು. ಈ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದ್ದು, ಈ ಪ್ರಕರಣ ಹೈದರಾಬಾದ್‌ ಸಿಬಿಐನಲ್ಲಿ ತನಿಖಾ ಹಂತದಲ್ಲಿ ಬಾಕಿ ಇದೆ.

ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿ (ಎಎಂಸಿ) ಮೂಲಕ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರಲ್ಲಿ ಸುಪ್ರೀಂಕೋರ್ಟ್‌ ತನಿಖೆಗೆ ಆದೇಶಿಸಿತ್ತು. ತನಿಖೆ ನಡೆಸಿದ ಬೆಂಗಳೂರು ಸಿಬಿಐ, 2013ರಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಈ ಅಕ್ರಮದಿಂದ ರಾಜ್ಯದ ಬೊಕ್ಕಸಕ್ಕೆ 480 ಕೋಟಿ ರೂ.ನಷ್ಟ ಆಗಿದೆ ಎಂದು ಚಾರ್ಜ್‌ ಶೀಟ್‌ನಲ್ಲಿ ಹೇಳಲಾಗಿತ್ತು. ಈ ಪ್ರಕರಣದಲ್ಲೂ ರೆಡ್ಡಿಗೆ ಜಾಮೀನು ಸಿಕ್ಕಿದ್ದು, ಬೆಂಗಳೂರು ಸಿಬಿಐ, ಕರ್ನಾಟಕ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ನಲ್ಲಿ ಈ ಪ್ರಕರಣ ವಿವಿಧ
ಹಂತಗಳಲ್ಲಿ ವಿಚಾರಣೆಗೆ ಬಾಕಿ ಇದೆ.

ಬೇಲೆಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಾಟ ಮಾಡಿದ ಹಾಗೂ ಅದಿರು ಕಳ್ಳತನ ಮಾಡಿದ್ದ ಆರೋಪದಲ್ಲಿ ಬೆಂಗಳೂರು ಸಿಬಿಐ, 2012ರಲ್ಲಿ ಐದು ಪ್ರತ್ಯೇಕ ಎಫ್ಐಆರ್‌ಗಳನ್ನು ದಾಖಲಿಸಿಕೊಂಡಿತ್ತು.ಈ ಪ್ರಕರಣದಲ್ಲೂ ಜಾಮೀನು ಸಿಕ್ಕಿದ್ದು ಸಿಬಿಐನಲ್ಲಿ ತನಿಖೆ ಮುಂದುವರಿದಿದೆ.

Advertisement

ಕ್ಯಾಷ್‌ ಫಾರ್‌ ಬೇಲ್‌ ಪ್ರಕರಣ: ಈ ಮಧ್ಯೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ರೆಡ್ಡಿ, ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳಲು ಜಡ್ಜ್ಗೆ 60 ಕೋಟಿ ರೂ.ಲಂಚದ ಆಮಿವೊಡ್ಡಿದ್ದ ಆರೋಪ ಕೇಳಿ ಬಂತು. “ಕ್ಯಾಷ್‌ ಫಾರ್‌ ಬೇಲ್‌’ ಹೆಸರಲ್ಲಿ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂಚಲನ ಉಂಟು ಮಾಡಿತ್ತು.2012ರಲ್ಲಿ ನಡೆದ ಈ ಪ್ರಕರಣದ ತನಿಖೆ ಹೈದರಬಾದ್‌ ಸಿಬಿಐನಲ್ಲಿ ಸದ್ಯ ನನೆಗುದಿಗೆ ಬಿದ್ದಿದೆ.

ಸುದೀರ್ಘ‌ ಅವಧಿ ಜೈಲಲ್ಲಿ
ರೆಡ್ಡಿಯ ಮೊದಲು ಬಂಧನವಾಗಿದ್ದು 2011ರ ಸೆಪ್ಟೆಂಬರ್‌ 5ರಂದು. ಆಗ ಓಬಳಾಪುರಂ ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಹೈದರಾಬಾದ್‌ ಸಿಬಿಐ ಅವರನ್ನು ಬಂಧಿಸಿತ್ತು. ಸುಮಾರು ಒಂದು ವರ್ಷ ಚಂಚಲಗುಡ್ಡ ಜೈಲಿನಲ್ಲಿದ್ದ ಅವರು, ಎಎಂಸಿ ಅಕ್ರಮ ಗಣಿಗಾರಿಕೆ, ಬೇಲೆಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಯಿತು. ಎಲ್ಲ ಪ್ರಕರಣಗಳಲ್ಲಿ ಅವರಿಗೆ 2015ರ ಜ.21ರಂದು ಜಾಮೀನು ಸಿಕ್ಕಿತು. ಸತತ ಮೂರು ವರ್ಷ 3 ತಿಂಗಳು ರೆಡ್ಡಿ ಜೈಲಲ್ಲಿ ಇರಬೇಕಾಯಿತು. ಯಾವ ಪ್ರಕರಣದಲ್ಲೂ ಶಿಕ್ಷೆಯಾಗದೆ ಒಬ್ಬ ವಿಚಾರಣಾಧೀನ ಕೈದಿ ಇಷ್ಟೊಂದು ಸುದೀರ್ಘ‌ ಅವಧಿ ಜೈಲಲ್ಲಿ ಕಳೆದದ್ದು ದೇಶದ ಇತಿಹಾಸದಲ್ಲೇ ಮೊದಲು ಎಂದು ಸ್ವತ: ಸಿಬಿಐ ಹೇಳಿತ್ತು.

ರೆಡ್ಡಿ ವಿರುದ್ಧ  ಅಕ್ರಮ ಗಣಿಗಾರಿಕೆ ಆರೋಪದ ಎಲ್ಲ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ. ಆದರೆ, ಪ್ರಕರಣಗಳು ವಿಚಾರಣಾ ಹಂತದಲ್ಲಿ ಬಾಕಿ ಇವೆ. ಇದರಲ್ಲಿ ಕೆಲವೊಂದು ಅರ್ಜಿಗಳು ಹೈಕೋರ್ಟ್‌ನಲ್ಲಿ ಹಾಗೂ ಕೆಲವು ಮೇಲ್ಮನವಿಗಳು ಸುಪ್ರೀಂಕೋರ್ಟ್‌ನಲ್ಲಿ ಇವೆ.
– ಪ್ರಸನ್ನಕುಮಾರ್‌, ಸಿಬಿಐ ಪರ ವಕೀಲರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೆಡ್ಡಿ ವಿರುದ್ಧದ ಪ್ರಕರಣಗಳ ಶೀಘ್ರ ತನಿಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇಚ್ಛಾಶಕ್ತಿಯಿಲ್ಲ. ತನಿಖಾ ಸಂಸ್ಥೆಗಳಿಗೆ ಆಸಕ್ತಿ ಇಲ್ಲದಂತಾಗಿದೆ. ಆದ್ದರಿಂದ ಎಲ್ಲ ಪ್ರಕರಣಗಳು ಸಂಪೂರ್ಣವಾಗಿ ನನೆಗುದಿಗೆ ಬಿದ್ದಿವೆ. ಈಗಿನ ಪ್ರಕರಣವೂ ಆ ಪಟ್ಟಿಗೆ ಸೇರುತ್ತದಷ್ಟೇ.
– ಎಸ್‌.ಆರ್‌. ಹಿರೇಮಠ, ಸಂಸ್ಥಾಪಕ ಅಧ್ಯಕ್ಷ,
ಸಮಾಜ ಪರಿವರ್ತನಾ ಸಮುದಾಯ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next