ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ಅಕ್ರಮ ಅದಿರು ಸಾಗಾಣಿಕೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಹಾಗೂ ಇತರರ ವಿರುದ್ಧ ಲೋಕಾಯುಕ್ತ ವಿಶೇಷ ತನಿಖಾ ತಂಡ ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಆಪ್ತ ಕೆ.ಎಂ.ಆಲಿಖಾನ್, ಬಿ.ವಿ.ಶ್ರೀನಿವಾಸ ರೆಡ್ಡಿ ಮತ್ತು ದೇವಿ ಎಂಟರ್‌ಪ್ರೈಸೆಸ್ ಪಾಲುದಾರ ಹಾಗೂ ಶ್ರೀ.ಮಿನರಲ್ಸ್‌ನ ಪಾಲುದಾರರ ವಿರುದ್ಧ ಭಾರತೀಯ ದಂಡ ಸಂಹಿತೆ 379, 420 ಮತ್ತು ಕರ್ನಾಟಕ ಅರಣ್ಯ ನಿಯಮ-1969ರ ಸೆಕ್ಷನ್ 165 ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ವಿಶೇಷ ತನಿಖಾ ತಂಡದ ಪೊಲೀಸ್ ಮಹಾನಿರೀಕ್ಷಕ(ಐಜಿಪಿ) ಎಂ.ಚಂದ್ರಶೇಖರ್ ತಿಳಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಆಪ್ತ ಕೆ.ಎಂ.ಆಲಿಖಾನ್, ಬಿ.ವಿ.ಶ್ರೀನಿವಾಸ ರೆಡ್ಡಿ ಮತ್ತು ದೇವಿ ಎಂಟರ್‌ಪ್ರೈಸೆಸ್ ಪಾಲುದಾರ ಹಾಗೂ ಶ್ರೀ.ಮಿನರಲ್ಸ್‌ನ ಪಾಲುದಾರ ಸೇರಿಕೊಂಡು ಬಳ್ಳಾರಿಯ ಎನ್.ಶೇಖ್‌ಸಾಬ್ ಎಂಬುವರಿಗೆ ಸೇರಿದ ಗಣಿಪ್ರದೇಶವನ್ನು ಬಲವಂತವಾಗಿ ನಿಯಂತ್ರಣಕ್ಕೆ ಪಡೆದುಕೊಂಡು ಅಕ್ರಮ ಗಣಿಗಾರಿಕೆ ನಡೆಸಿ ಸುಮಾರು 1,69,263 ಮೆಟ್ರಿಕ್ ಟನ್ ಪ್ರಮಾಣದ ಕಬ್ಬಿಣದ ಅದಿರನ್ನು ಅಕ್ರಮವಾಗಿ ತೆಗೆದಿರುವುದು ಪತ್ತೆಯಾಗಿತ್ತು.
ಶೇಖ್‌ಸಾಬ್ ಅವರ ಗಣಿಪ್ರದೇಶದಲ್ಲಿ ತೆಗೆದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಮಾರಾಟ ಮಾಡಲು ಯಾವುದೇ ಪರವಾನಿಗೆ ಪಡೆಯದೇ ಪಾಪಿನಾಯಕನಹಳ್ಳಿ ಗ್ರಾಮ ವ್ಯಾಪ್ತಿಯ ಖಾಸಗಿ ಅನಧೀಕೃತ ಸ್ಥಳಕ್ಕೆ ಸಾಗಾಣಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಈ ಸ್ಥಳದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಾಗಾಣಿಕೆ ಮಾಡಿದ್ದ ಅದಿರನ್ನು ವಶಪಡಿಸಿಕೊಂಡಿತ್ತು. ಅಲ್ಲದೆ, ಇತರೆ ಟ್ರೇಡರ್‌ಗಳಿಗೆ ಯಾವುದೇ ಪರವಾನಿಗೆ ಪಡೆಯದೇ ಕಬ್ಬಿಣದ ಅದಿರು ಮಾರಾಟ ಮಾಡಿದ್ದರು. ಈ ಅಕ್ರಮ ಸಾಗಾಣಿಕೆ ಮತ್ತು ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ 23,89,648 ರೂ. ನಷ್ಟ ಉಂಟಾಗಿದೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ವಿಶೇಷ ತನಿಖಾ ತಂಡ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದೆ.
2009-10ನೇ ಸಾಲಿನಲ್ಲಿ ಜೆ.ಜನಾರ್ದನ ರೆಡ್ಡಿ, ಕೆ.ಎಂ.ಆಲಿಖಾನ್ ಹಾಗೂ ಇತರರು ಎನ್.ಶೇಖ್‌ಸಾಬ್ ಅವರ ಗಣಿಪ್ರದೇಶದ ಗುತ್ತಿಗೆಯನ್ನು “ಪಾಲುದಾರಿಕೆ ಮತ್ತು ಹಕ್ಕು ಸ್ವಾಮ್ಯದ’ ಮೂಲಕ ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡು ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದರು. ಈ ಸಂಬಂಧ ವಿಶೇಷ ತನಿಖಾ ತಂಡ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಅಂಶಗಳು
ಎನ್.ಶೇಖ್‌ಸಾಬ್ ಅವರ ಗಣಿಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಆರೋಪ
ಮಾಜಿ ಜನಾರ್ದನ ರೆಡ್ಡಿ, ಆಪ್ತ ಕೆ.ಎಂ.ಆಲಿಖಾನ್, ಬಿ.ವಿ.ಶ್ರೀನಿವಾಸರೆಡ್ಡಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ಲೋಕಾಯುಕ್ತ ಎಸ್‌ಐಟಿಯಿಂದ ಆರೋಪಪಟ್ಟಿ ಸಲ್ಲಿಕೆ
ಸರ್ಕಾರದ ಬೊಕ್ಕಸಕ್ಕೆ 23,89,648 ರೂ. ನಷ್ಟ ಆರೋಪ