Advertisement

ಡೈರಿ ಬಿಡಿ; ಬರಗಾಲದತ್ತ ಗಮನ ನೀಡಿ : ಜನಾರ್ದನ  ಪೂಜಾರಿ

12:35 PM Feb 28, 2017 | Team Udayavani |

ಮಂಗಳೂರು: ರಾಜ್ಯದಲ್ಲಿ ಬರಗಾಲದ ಸಮಸ್ಯೆ ಎದುರಾಗಿದ್ದರೂ ಯಾವ ಪಕ್ಷಗಳೂ ಪರಿಹಾರಕ್ಕೆಯತ್ನಿಸುತ್ತಿಲ್ಲ. ಆದರೆ ಹೈಕಮಾಂಡ್‌ಗೆ ಕಪ್ಪದ ಕುರಿತ “ಡೈರಿ ವಿವಾದ’ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇಲ್ಲಿನ ಬರಗಾಲದ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲೂ ಚರ್ಚೆಯಾಗಿಲ್ಲ. ರಾಜ್ಯದ ಬರಸ್ಥಿತಿ ನೋಡಿ ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಸುರಿಸಿದ್ದಾರೆ. ಬರಗಾಲ ಪರಿಹಾರ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಇಲ್ಲಿಯವರೆಗೆ ಕಾಣದಷ್ಟು ಬರಗಾಲ ಇದ್ದು, ಮಾಜಿ ಪ್ರಧಾನಿಯ ಕಣ್ಣೀರು ಸಿದ್ದರಾಮಯ್ಯ ಅವರಿಗೆ ಕಾಣುವುದಿಲ್ಲವೇ? ಸಿಎಂ  ನಿದ್ದೆ ಮಾಡುತ್ತಿದ್ದಾರಾ? ನಿಮಗೆ ನಡೆಸಲು ಸಾಧ್ಯವಿಲ್ಲ ಎಂದು ತೋರಿಸಿಕೊಟ್ಟಿದ್ದೀರಿ. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರು ಡೈರಿಯಲ್ಲಿ ಹೆಸರಿರುವ ಸಚಿವರು ರಾಜೀನಾಮೆ ನೀಡಬೇಕೆಂದು ನೀಡಿರುವ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಕಠಿನ
ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಧೈರ್ಯವಿಲ್ಲ. ಅವರಿಗೆ ಅಧಿಕಾರದ ಆಸೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಅಸಹಾಯಕತೆಯೇ ನಿಮಗೆ? ಎಂದು ಪ್ರಶ್ನಿಸಿದರು. 

ಕಾಂಗ್ರೆಸ್‌ ಹೈಕಮಾಂಡ್‌ಗೆ ಎಷ್ಟು ಹಣ ಹೋಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಬಿಜೆಪಿಯಿಂದ ಪ್ರಧಾನ ಮಂತ್ರಿಯವರಿಗೆ ಕರ್ನಾಟಕದಿಂದ ಎಷ್ಟು ಹಣ ಹೋಗಿದೆ ಎಂದು ತಿಳಿಸುವ ಕೆಲಸ ಮಾಡಲಿ ಎಂದರು.
ಬಿಜೆಪಿಯವರು ಆ ಪಕ್ಷದ ಹೈಕಮಾಂಡ್‌ಗೆ 2 ಚೆಕ್‌ ಮೂಲಕ ಕಪ್ಪ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ದಾಖಲೆ ಇದ್ದಲ್ಲಿ ಕೂಡಲೇ ಬಿಡುಗಡೆ ಮಾಡುವುದು ನಿಮ್ಮ ಕರ್ತವ್ಯ. ವೃಥಾರೋಪ ಮಾಡಿದರೆ ಅಪರಾಧ ಎಂದರು. 

ಸಿದ್ದು ಏನು ಮಾಡಿದ್ದಾರೆ ಈ ಪಕ್ಷವನ್ನು ಕಟ್ಟಿ, ಬೆಳೆಸಿದವರು ಕಾರ್ಯಕರ್ತರೇ ಹೊರತು ಸಿದ್ದರಾಮಯ್ಯ ಅಲ್ಲ. ಕಾಂಗ್ರೆಸ್‌ ಪಕ್ಷಕ್ಕಾಗಿ, ಕಾರ್ಯಕರ್ತರಿಗಾಗಿ ಏನು ಮಾಡಿದ್ದಾರೆಂದು ಹೇಳಲಿ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ತನ್ನ ಹೇಳಿಕೆಯಲ್ಲಿ ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರನ್ನು ಕೈಬಿಡಬೇಕೆಂದು ಹೇಳಿದ್ದಾರೆ. ಪರಮೇಶ್ವರ್‌ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯರಾದವರು, ಹೇಳಿಕೆ ನೀಡುವಾಗ ಸ್ವಲ್ಪ ಯೋಚಿಸಬೇಕು ಎಂದು ಹೇಳಿದರು.

ಮೂರ್ಖತನದ ಪರಮಾವಧಿ

Advertisement

ಸಚಿವ ಖಾದರ್‌ ವಿವಾದಾತ್ಮಕ ಹೇಳಿಕೆ ಕುರಿತು ಪತ್ರಕರ್ತರು ಕೇಳಿದಾಗ, ಖಾದರ್‌ ಅವರದು ಮೂರ್ಖತನದ ಪರಮಾವಧಿ. ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಓದಿದ್ದಾರಾ?  ಪ್ರತಿಭಟನೆ ಹಕ್ಕು ಎಲ್ಲರಿಗೂ ಇದೆ. ಮಾತನಾಡುವಾಗ ಜಾಗೃತೆಯಿಂದಿರ ಬೇಕೆಂದು ಖಾದರ್‌ಗೆ ಹಿಂದೆಯೇ ಬುದ್ಧಿ ಹೇಳಿದ್ದೆ, ಈ ರೀತಿಯ ಹೇಳಿಕೆ ನೀಡುತ್ತಾರೆ, ಮತ್ತೆ ನನ್ನ ಶಿಷ್ಯ ಎಂದು ಹೇಳುತ್ತಿದ್ದಾರೆ ಎಂದರು.

ಯುವಕರಿಗೆ ಅಧಿಕಾರ ಕೊಡಿ
ಹಿರಿಯರ ಮಾರ್ಗದರ್ಶನ ಪಡೆದುಕೊಂಡು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಬೆಳೆಯಬೇಕು. ಅನುಭವಸ್ಥ ಕೆಲವು ಹಿರಿಯರು ಮತ್ತು ಯುವಸಮುದಾಯ ಅಧಿಕಾರ ನಡೆಸಿದರೆ ಉತ್ತಮ ಆಡಳಿತ ಸಾಧ್ಯವಿದೆ. ಇನ್ನು ಮುಂದಿನ ದಿನಗಳಲ್ಲಿ ಯುವಕರ ಕೈಗೆ ಅಧಿಕಾರ ಕೊಡಿ, ಹಿರಿಯರು ಮಾರ್ಗದರ್ಶಕರಾಗಿರಲಿ ಎಂದರು. ಅರುಣ್‌ ಕುವೆಲ್ಲೋ, ಕಳ್ಳಿಗೆ ತಾರಾನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ಪುರಂದರದಾಸ ಕೂಳೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next