Advertisement

 ಕಿನ್ನಿಗೋಳಿಯಲ್ಲಿ ಜನಪರ ಉತ್ಸವ

12:38 PM Dec 29, 2017 | Team Udayavani |

ಕಿನ್ನಿಗೋಳಿ: ಗ್ರಾಮೀಣ ಪ್ರದೇಶಗಳಲ್ಲಿ ಇರುವ ಜನಪದ ಕಲಾವಿದರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನೇಕ ಯೋಜನೆಗಳಿಂದ ಪ್ರೋತ್ಸಾಹಿಸುತ್ತಿದೆ. ಈ ಹಿನ್ನಲೆಯಲ್ಲಿ ಜನಪರ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಭಯಚಂದ್ರ ಜೈನ್‌ ಹೇಳಿದರು. ಅವರು. ಡಿ. 28 ರಂದು ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯ ಕಲಾವಿದರು ಸಂಘಟನೆಯ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ‘ಜನಪರ ಉತ್ಸವ’ ಉದ್ಘಾಟಿಸಿ ಮಾತನಾಡಿದರು.

Advertisement

ಮಹಿಳೆಯರು ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು, ತನ್ನ ಕ್ಷೇತ್ರದಲ್ಲಿ ವಿಧಾನ ಸಭೆಗೆ ಮಹಿಳಾ ಮೀಸಲಾತಿ ಬಂದರೆ ಸ್ವಾಗತಿಸುವುದಾಗಿ ಶಾಸಕರು ತಿಳಿಸಿದರು. ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಮಾತನಾಡಿ, 60ವರ್ಷ ಮೀರಿದ ಕಲಾವಿದರ ಆರೋಗ್ಯಕ್ಕೆ ಇಲಾಖೆ ಸಹಾಯ ಹಸ್ತ ನೀಡುತ್ತಿದ್ದು, ಅದನ್ನು ಸದುಪಯೋಗಿಸಿಕೊಳ್ಳಬೇಕೆಂದರು.

ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿದರು. ಜಿ.ಪಂ. ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು, ತಾ.ಪಂ. ಸದಸ್ಯ ದಿವಾಕರ ಕರ್ಕೇರ, ರೋಟರಿ ಅಧ್ಯಕ್ಷೆ ಸೆವ್ರಿನ್‌ ಲೋಬೋ, ಕಿನ್ನಿಗೋಳಿ ಗ್ರಾ.ಪಂ. ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಶಾಂಭವಿ ಶೆಟ್ಟಿ, ತಾಳಿಪಾಡಿ ಪ್ರಾಥಮಿಕ ನೇಕಾರರ ಸಹಕಾರಿ ಸಂಘದ ಆನಂದ ಶೆಟ್ಟಿಗಾರ್‌, ರಾಜೇಶ್‌ ಕೆಂಚನಕೆರೆ ಮತ್ತಿತರರಿದ್ದರು. ಮಂಜುಳಾ ಶೆಟ್ಟಿ ನಿರೂಪಿಸಿದರು. ಇನ್ನೂರಕ್ಕೂ ಹೆಚ್ಚು ಕಲಾವಿದರು ಹಿಂದೂಸ್ತಾನಿ ಸಂಗೀತ, ಭರತನಾಟ್ಯ, ನಾಟಕ, ಸುಗಮ ಸಂಗೀತ, ಮಾದಿರ ಕುಣಿತ, ವೀರಗಾಸೆ, ತಿತ್ತಿರಿ ತಿರಿ ಮಜಲು ಜಾನಪದ ನೃತ್ಯ, ದಾಸರ ಪದಗಳು ಹೀಗೆ ಸಾಂಸ್ಕೃತಿಕ ವೈಭವವನ್ನು ಸಾರಿದರು.

ಮಹಿಳೆಯರಿಗೂ ಅವಕಾಶ ಸಿಗಲಿ
ಗ್ರಾಮೀಣ ಮಟ್ಟದಲ್ಲಿ ತೆರೆ, ಮರೆಯಲ್ಲಿ ಹಲವಾರು ಜನಪದ – ಜನಪರ ಕಲಾವಿದರಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೂ ಇಲಾಖೆಯ ಮೂಲಕ ಅವಕಾಶ ಸಿಗಬೇಕು.
–  ಕಸ್ತೂರಿ ಪಂಜ, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ 

Advertisement

Udayavani is now on Telegram. Click here to join our channel and stay updated with the latest news.

Next