Advertisement

ಜನಮೇಜಯನ “ಕಾಂತೇಶ’

08:28 PM Mar 06, 2020 | Lakshmi GovindaRaj |

ಕದರಮಂಡಲಗಿಯಲ್ಲಿರುವ ಪ್ರಾಣದೇವರ ಮೂರ್ತಿಯನ್ನು ದ್ವಾಪರಯುಗದಲ್ಲಿ ಜನಮೇಜಯ ಪ್ರತಿಷ್ಠಾಪಿಸಿದ ಎಂಬ ಪ್ರತೀತಿ ಇದೆ…

Advertisement

ಸರ್ವಧರ್ಮ ಸಮನ್ವಯ ಕ್ಷೇತ್ರ ಎಂದೇ ಖ್ಯಾತವಾದ ಕದರಮಂಡಲಗಿಯು, ಕಾಂತೇಶನೆಂದೇ ಪೂಜೆಗೊಳ್ಳುವ ಆಂಜನೇಯ ಸ್ವಾಮಿಯ ನೆಲೆವೀಡು. ಇಲ್ಲಿರುವ ಪ್ರಾಣದೇವರ ಮೂರ್ತಿಯನ್ನು ದ್ವಾಪರಯುಗದಲ್ಲಿ ಜನಮೇಜಯ ಪ್ರತಿಷ್ಠಾಪಿಸಿದ ಎಂಬ ಪ್ರತೀತಿ ಇದೆ. ಜೊತೆಗೆ ದಾಸಶ್ರೇಷ್ಠರಾದ ಕನಕದಾಸರು ಇಲ್ಲಿ ನೆಲೆಸಿ, “ಮೋಹನ ತರಂಗಿಣಿ’ ಎಂಬ ಕಾವ್ಯವನ್ನು ರಚಿಸಿ, ಕ್ಷೇತ್ರದ ಪಾವಿತ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂಬುದಕ್ಕೆ, ಇಲ್ಲಿ ಸಂಗ್ರಹಿಸಿಟ್ಟಿರುವ “ಮೋಹನ ತರಂಗಿಣಿ’ಯ ಹಸ್ತಪ್ರತಿ ಸಾಕ್ಷಿಯಾಗಿದೆ.

ಭವ್ಯ ದೇಗುಲ: ಇಲ್ಲಿದ್ದ ಕಾಂತೇಶನ ಶಿಥಿಲವಾಗಿದ್ದ ಗುಡಿಯನ್ನು ಎಂಜಿನಿಯರ್‌ ಐ.ಎಚ್‌. ಕೆಂಚರೆಡ್ಡಿಯವರು ಜೀರ್ಣೋದ್ಧಾರ ಮಾಡಿದ್ದಾರೆ. ಭವ್ಯ ದೇಗುಲ ಕಣ್ಮನ ಸೆಳೆಯುತ್ತದೆ. 8 ಅಂತಸ್ತಿನ ಭವ್ಯ ಹಾಗೂ ಸುಂದರವಾದ 101 ಅಡಿಗಳ ಗೋಪುರವನ್ನೂ ನಿರ್ಮಿಸಲಾಗಿದೆ. ಸುಂದರ ಪುಷ್ಕರಣಿ ಇದೆ. ದೇಗುಲದ ಸುತ್ತಲೂ ಎತ್ತರವಾದ ಆವರಣಗೋಡೆ ಇದೆ. ಈ ಗೋಡೆಯ ಮೇಲೆ ಅಶೋಕವನದಲ್ಲಿನ ಸೀತೆ, ಶ್ರೀರಾಮ ಹಾಗೂ ಆಂಜನೇಯರ ಆಲಿಂಗನ ಸೇರಿದಂತೆ ಹಲವು ಗಾರೆಯ ಶಿಲ್ಪಗಳನ್ನು ಅಳವಡಿಸಲಾಗಿದೆ.

ಕನಕದಾಸರ ಗುಡಿ: ಕಾಂತೇಶ ದೇಗುಲದ ಆವರಣದಲ್ಲಿ ಕನಕದಾಸರ ಗುಡಿ, ರಾಘವೇಂದ್ರ ಸ್ವಾಮಿ ಮಠ ಇವೆ. ಇಲ್ಲಿನ ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ “ಕನಕದಾಸರ ಗುಡಿ’ ಎಂದು ಕರೆಯುತ್ತಾರೆ. ಕನಕದಾಸರು ಹುಟ್ಟಿದ್ದು ಬಾಡ ಗ್ರಾಮದಲ್ಲಿ. ಅವರು ಕಾಗಿನೆಲೆಗೆ ಬಂದು ನೆಲೆಸಿದರು. ಅವರು ತಿರುಪತಿ ವೆಂಕಟೇಶನ ದರ್ಶನ ಪಡೆಯಲು ಆಗಾಗ ತಿರುಪತಿಗೆ ಹೋಗುತ್ತಿದ್ದರು. ಆಗ ಕದರಮಂಡಲಗಿ ಕಾಂತೇಶನ ದರ್ಶನ ಪಡೆದು ಲಕ್ಷಿ¾ನಾರಾಯಣನ ಗುಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರಂತೆ.

ನೇರ ದೃಷ್ಟಿಯ ಹನುಮ: ಗರ್ಭಗೃಹದ ಒಳಗೆ ಎದುರು ಮುಖದ ಸಾಲಿಗ್ರಾಮ ಶಿಲೆಯ ಕಾಂತೇಶನ ಸುಂದರ ಮೂರ್ತಿ ಇದೆ. ಈ ದೇವರ ಕಣ್ಣುಗಳನ್ನು ಸೂರ್ಯ ಸಾಲಿಗ್ರಾಮದಿಂದ ಮಾಡಲಾಗಿದ್ದು, ಆಂಜನೇಯ ನೇರವಾಗಿ ಎದುರು ನಿಂತ ಭಕ್ತರನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ. ಕಾಂತೇಶನ ಸನ್ನಿಧಾನದ ಪಕ್ಕದಲ್ಲಿಯೇ ಹನುಮನ ಪಾದುಕೆಗಳ ಗುಡಿಯೂ ಇದೆ.  ಈ ದೇಗುಲದಲ್ಲಿ ಪ್ರತಿದಿನ ಮಧ್ಯಾಹ್ನ 12- 3 ಗಂಟೆಯವರಿಗೆ ಭೋಜನ ವ್ಯವಸ್ಥೆ ಇದೆ.

Advertisement

ದರುಶನಕೆ ದಾರಿ…: ರಾಣೆಬೆನ್ನೂರಿನಿಂದ 12 ಕಿ.ಮೀ. ದೂರದಲ್ಲಿ ಕದರ ಮಂಡಲಗಿ ಕ್ಷೇತ್ರವಿದೆ. ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಕಿ.ಮೀ. ಸಾಗಿ, ಬಳಿಕ ಬ್ಯಾಡಗಿ- ಕಾಗಿನೆಲೆ ರಸ್ತೆಯಲ್ಲಿ 9 ಕಿ.ಮೀ. ಕ್ರಮಿಸಿದರೆ ಕಾಂತೇಶನ ಸನ್ನಿಧಿ ಸಿಗುತ್ತದೆ.

* ಲಕ್ಷ್ಮಿಕಾಂತ್‌ ಎಲ್‌.ವಿ.

Advertisement

Udayavani is now on Telegram. Click here to join our channel and stay updated with the latest news.

Next