ಆಂಧ್ರಪ್ರದೇಶ: ಎನ್‌ಟಿಆರ್ ಜಿಲ್ಲೆಯಲ್ಲಿ ಆಂಧ್ರಪ್ರದೇಶ ಪೊಲೀಸರು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಮತ್ತು ಅದರ ಹಿರಿಯ ನಾಯಕ ನಾದೆಂಡ್ಲಾ ಮನೋಹರ್ ಅವರನ್ನು ಮುನ್ನೆಚ್ಚರಿಕೆಯಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸದ್ಯ ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ಪವನ್ ಕಲ್ಯಾಣ್ ಅವರು ಶನಿವಾರ ನಂದ್ಯಾಲದಲ್ಲಿ ನಡೆದ ಮುಂಜಾನೆ ಕಾರ್ಯಾಚರಣೆಯಲ್ಲಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಖಂಡಿಸಿದರು ಮತ್ತು ಮಾಜಿ ಮುಖ್ಯಮಂತ್ರಿಯನ್ನು ಬೆಂಬಲಿಸಲು ವಿಜಯವಾಡಕ್ಕೆ ವಿಶೇಷ ವಿಮಾನದ ಮೂಲಕ ತೆರಳಲು ಸಿದ್ಧತೆಯಲ್ಲಿದ್ದ ಪವನ್ ಕಲ್ಯಾಣ್ ಅವರ ವಿಮಾನಯಾನವನ್ನು ತಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾದರು ಬಳಿಕ ರಸ್ತೆ ಮಾರ್ಗವಾಗಿ ಸಂಚರಿಸಲು ನಿರ್ಧರಿಸಿದ್ದರು ಎನ್ನಲಾಗಿದೆ.
ಶನಿವಾರದಂದು ಎರಡು ಬಾರಿ ಎನ್‌ಟಿಆರ್ ಜಿಲ್ಲೆಯಲ್ಲಿ ಪವನ್ ಕಲ್ಯಾಣ್ ಅವರ ಬೆಂಗಾವಲು ವಾಹನವನ್ನು ತಡೆಹಿಡಿಯಲಾಯಿತು ಈ ವೇಳೆ ರಸ್ತೆಯಲ್ಲೇ ಮಲಗಿ ಪ್ರತಿಭಟನೆಗೆ ಮುಂದಾದ ಪವನ್ ಕಲ್ಯಾಣ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸರು ‘ನಾವು ಪವನ್ ಕಲ್ಯಾಣ್ ಮತ್ತು ಮನೋಹರ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ನಾವು ಅವರನ್ನು ವಿಜಯವಾಡಕ್ಕೆ ಕರೆದೊಯ್ಯುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Morocco Quake: 2,000 ದಾಟಿದ ಮೃತರ ಸಂಖ್ಯೆ… ಸಹಾಯಕ್ಕೆ ಧಾವಿಸಿದ ನೆರೆಯ ರಾಷ್ಟ್ರಗಳು