Advertisement

ಅತಿ ಕಡಿಮೆ ಪ್ರೀಮಿಯಂ ದರದ ಜನರಕ್ಷಾ ವಿಮೆ ಜಾರಿ

12:10 PM Mar 16, 2022 | Team Udayavani |

ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ವತಿಯಿಂದ ಲಿಬರ್ಟಿ ಇನ್ಸುರನ್ಸ್‌ ಕಂಪನಿ ಸಹಯೋಗದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಅತಿ ಕಡಿಮೆ ಪ್ರೀಮಿಯಂ ದರದ ವಿಮಾ ಯೋಜನೆ ಜಾರಿ ಮಾಡಲಾಗಿದೆ.

Advertisement

ನಗರದ ಕೆವಿಜಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್‌ ಅಧ್ಯಕ್ಷ ಪಿ.ಗೋಪಿಕೃಷ್ಣ ಹಾಗೂ ಲಿಬರ್ಟಿ ಕಂಪನಿ ಉಪಾಧ್ಯಕ್ಷ ಮನೀಶ್‌ ಕೊಟ್ಯಾನ್‌ ಸಮ್ಮುಖದಲ್ಲಿ ಜನರಕ್ಷಾ ಹೆಸರಿನ ಈ ಯೋಜನೆ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ, 9 ಜಿಲ್ಲೆಗಳ ಕಾರ್ಯ ಕ್ಷೇತ್ರದಲ್ಲಿ 2 ಸಾವಿರಕ್ಕೂ ಮಿಕ್ಕಿದ ಗ್ರಾಮಗಳನ್ನು ಹೊಂದಿದ್ದು, ಸುಮಾರು 90 ಲಕ್ಷ ಗ್ರಾಹರನ್ನು ಹೊಂದಿದೆ. ಹಳ್ಳಿ ಮತ್ತು ಪಟ್ಟಣಗಳಲ್ಲಿ ಡೆಂಘೀ ಜ್ವರ, ಮಲೇರಿಯಾ, ಚಿಕೂನ್‌ ಗುನ್ಯಾ ಸಾಮಾನ್ಯವಾಗಿದ್ದು, ಈ ರೋಗದಿಂದ ಅಥವಾ ಇನ್ನಿತರೆ ವಾಹಕ ರೋಗಗಳಾದ ಜಪಾನೀಸ್‌ ಎನ್ಸೆಫಾಲಿಟಿಸ್ಕ, ಕಲಾ-ಅಜರ್‌, ದುಗ್ಧರಸ ಫೈಲೇರಿಯಾಸಿಸ್‌, ಝಿಕಾ ವೈರಸ್‌ ರೋಗಗಳಿಂದ ಬಳಲುವವರಿಗೆ ಕೇವಲ 35 ರೂ. ವಾರ್ಷಿಕ ಪ್ರೀಮಿಯಂ ದರದಲ್ಲಿ 10,000 ರೂ.ಪರಿಹಾರ ರೂಪದಲ್ಲಿ ನೀಡಲಾಗುತ್ತದೆ. ಇದರ ಜತೆಗೆ ಅಪಘಾತ ಸಾವಿಗೆ 20,000 ರೂ. ವಿಮಾ ಸೌಲಭ್ಯ ಒದಗಿಸಲಾಗುತ್ತದೆ ಎಂದರು.

ಕೇವಲ ಸಾಮಾಜಿಕ ಕಳಕಳಿ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ಯಾವುದೇ ವಯಸ್ಸಿನ ನಿರ್ಬಂಧವಿರಲ್ಲ. ಬ್ಯಾಂಕಿನ ಎಲ್ಲ ಗ್ರಾಹಕರನ್ನು ಈ ವಿಮಾ ಯೋಜನೆಯೊಳಗಡೆ ತರಲು ಯೋಜಿಸಲಾಗಿದೆ. ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸದ ಗ್ರಾಹಕರು ಸಂಬಂಧಿತ ಶಾಖೆಗೆ ತಿಳಿಸಿದಲ್ಲಿ ಅವರ ಹಣ ವಾಪಸ್‌ ನೀಡಲಾಗುವುದು ಎಂದರು.

ಲಿಬರ್ಟಿ ಜನರಲ್‌ ಇನ್ಶೂರೆನ್ಸ್‌ನ ಹಿರಿಯ ಉಪಾಧ್ಯಕ್ಷ ಮನೀಶ್‌ ಕೋಟ್ಯಾನ್‌ ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಗ್ರಾಹಕರಿಗೆ ಮಾತ್ರ ಈ ಯೋಜನೆ ಜಾರಿಗೆ ತರಲಾಗಿದೆ. ಈ ವಿಮಾ ಯೋಜನೆ ಅತ್ಯಂತ ವಿಶೇಷವಾಗಿದ್ದು, ಸದ್ಯಕ್ಕೆ ದೇಶದ ಯಾವುದೇ ಬ್ಯಾಂಕಿನಲ್ಲಿ ಲಭ್ಯವಿಲ್ಲ. ಇದನ್ನು ಅತ್ಯಂತ ಸರಳೀಕರಿಸಲಾಗಿದ್ದು, 10,000 ರೂ. ಹಣವನ್ನು ಕ್ಲೇಮು ಮಾಡಲು ಅಧಿಕೃತ ವೈದ್ಯಾಧಿಕಾರಿಯಿಂದ ರೋಗದಿಂದ ಬಳಲುತ್ತಿರುವ ಬಗ್ಗೆ ಪ್ರಮಾಣ ಪತ್ರ, ಲ್ಯಾಬ್‌ ರಿಪೋರ್ಟ್‌ ಸಾಕು. ಇದಲ್ಲದೇ ಆಸ್ಪತ್ರೆ ದಾಖಲಾತಿ ಅವಶ್ಯವಿಲ್ಲ. ಅಪಘಾತ ವಿಮೆಗೆ ಸಂಬಂಧಿಸಿ 20,000 ಕ್ಲೇಮು ಮಾಡುವ ವಿಧಾನ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗೆ ಸರಿಸಮಾನವಾಗಿದೆ ಎಂದರು.

Advertisement

ಬ್ಯಾಂಕ್‌ನ ಮಹಾಪ್ರಬಂಧಕ ಬಿ.ಸಿ.ರವಿಚಂದ್ರ, ಮುಖ್ಯ ವ್ಯವಸ್ಥಾಪಕಿ ಎಸ್‌.ಎಸ್‌.ಮಣೂರ, ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ, ಲಿಬರ್ಟಿ ಇನ್ಶೂರೆನ್ಸ್‌ ನ ಉಪಾಧ್ಯಕ್ಷ ಪ್ರವೀಣ ಟಿ.ಎಸ್‌, ಅಸೋಸಿಯೇಟ್‌ ಉಪಾಧ್ಯಕ್ಷ ಕಲ್ಯಾಣ ರೇವಣೂರ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next