ಬಂಕಾಪುರ: ಪ್ರಕೃತಿ ಮುಂದೆ ಮಾನವ ಸಂಕುಲ ತೃಣಕ್ಕೆ ಸಮಾನ ಎಂಬುದು ಕೊರೊನಾ ಮಹಾಮಾರಿ ವೈರಸ್‌ನಿಂದಾಗಿ ಜನ ಅರಿತವರಾಗಿದ್ದಾರೆ. ಮನುಷ್ಯ ಜೀವನ ಮುಕ್ತಿ ಪಡೆಯಬೇಕಾದರೆ ಜ್ಞಾನ ಎಂಬುದು ಬಹಳ ಮುಖ್ಯವಾಗಿದೆ. ಮನುಷ್ಯನಿಗೆ ಲೌಕಿಕ ಜ್ಞಾನ ಎಷ್ಟು ಮುಖ್ಯವೋ ಅಲೌಕಿಕ ಜ್ಞಾನ ಅಷ್ಟೇ ಮುಖ್ಯವಾಗಿದೆ ಎಂದು ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಸ್ವಾಮಿಗಳು ಹೇಳಿದರು.
ಪಟ್ಟಣದ ಹುಚ್ಚೇಶ್ವರ ಮಹಾಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಪಾರಾಯಣ, ಜನಜಾಗೃತಿ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿ, ಕೊರೊನಾದಿಂದ ಮನುಷ್ಯ ನಾನೇ ರಾಜನೆಂದು ಮೆರೆಯುವ ಕಾಲ ದೂರದ ಮಾತಾಗಿ ಹೋಯಿತು. ಮನುಷ್ಯ ನಾನು, ನನ್ನದು, ಬಡವ, ಶ್ರೀಮಂತ, ಅಧಿಕಾರಿ, ರಾಜಕಾರಣಿ ಎಂಬ ಅಹಂಬಾವವನ್ನು ಮರೆತು ಸರ್ವರನ್ನು ಪ್ರೀತಿಸುವ ಮನೋಬಾವ ಬೆಳೆಸಿಕೊಂಡು ನಡೆದಾಗ ಮಾನವ ಜನ್ಮ ಮೋಕ್ಷ ಹೊಂದಲಿದೆ ಎಂದು ಹೇಳಿದರು.
ಕೂಡಲದ ಶ್ರೀ ಗುರು ನಂಜೇಶ್ವರ ಮಠದ ಶ್ರೀ ಗುರುಮಹೇಶ್ವರ ಸ್ವಾಮೀಜಿ ಮಾತನಾಡಿ, ಅಂಗದ ಮೇಲೆ ಲಿಂಗ ಧರಿಸಿದಾತನೆ ನಿಜವಾದ ವಿರಶೈವ ಲಿಂಗಾಯತ ನಾಗಬಲ್ಲ. ಆಧುನಿಕತೆಗೆಮರುಳಾಗಿ ಧರ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಮರೆಯಬಾರದು ಎಂದರು.
ಗುಡ್ಡದ ಆನ್ವೇರಿಯ ಶ್ರೀ ಶಿವಯೋಗಿ ಸ್ವಾಮೀಜಿ ಮಾತನಾಡಿ, ಧರ್ಮ ಗ್ರಂಥದಲ್ಲಿ ಮನುಷ್ಯನ ಆಯಸ್ಸು 100 ವರುಷ ಎಂದು ಉಲ್ಲೇಖೀಸಲಾಗಿದೆ. ಆದರೆ ಮನುಷ್ಯ ಧರ್ಮದ ದಾರಿಯಲ್ಲಿ ನಡೆಯಲಾಗದೆ ಮಧ್ಯದಲ್ಲಿಯೇ ಕೊನೆ ಉಸಿರು ಎಳೆಯುತ್ತಿದ್ದಾನೆ. ಮನುಷ್ಯ ಒಂದೇ ದಿನ ಬದುಕಿದರು ಹೂವಿನ ಹಾಗೆ, ಪ್ರತಿಯೊಬ್ಬರೂ ಇಷ್ಟಪಡುವಂತೆ ನಗು ನಗುತಾ ಬದುಕಬೇಕು. ದಾನ ಧರ್ಮ, ಪರೋಪಕಾರ ಮಾಡುವ ಮೂಲಕಧರ್ಮದ ದಾರಿಯಲ್ಲಿ ನಡೆಯುವ ಮನುಷ್ಯ ನೂರುಕಾಲ ಬದುಕಬಲ್ಲ ಎಂದು ಹೇಳಿದರು.
ಹೋತನಹಳ್ಳಿ ಶ್ರೀ ಶಂಭುಲಿಂಗ ಶಿವಾಚಾರ್ಯರು ಸಭೆ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಪರಶುರಾಮ ನರೇಗಲ್ಲಸಂಗಡಿಗರಿಂದ ಸಂಗೀತ ಸೇವೆ ನಡೆಯಿತು. ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ಮಲ್ಲಯ್ಯಹುಚ್ಚಯ್ಯನಮಠ, ನಿಂಗನಗೌಡ್ರ ಪಾಟೀಲ, ಸಿದ್ದಪ್ಪಹರವಿ, ಕೊಟೆಪ್ಪ ಸಕ್ರಿ, ಕಲ್ಲಪ್ಪ ಹರವಿ, ರಮೇಶಶೆಟ್ಟರ, ಜಗದೀಶ ಎಲಿಗಾರ, ಮುರಗಯ್ಯ ದೇಸಾಯಿಮಠ, ಜಿ.ಐ. ಸಜ್ಜನಗೌಡ್ರ, ಗಂಗಾಧರಮಾ.ಪ. ಶೆಟ್ಟರ, ಗದಿಗಯ್ಯ ಹುಚ್ಚಯ್ಯನಮಠ, ಶಂಕ್ರಯ್ಯ ಹುಚ್ಚಯ್ಯನಮಠ, ಸುರೇಶ ಮುರಿಗೇಣ್ಣವರ ಇದ್ದರು. ಎ.ಕೆ. ಆದವಾನಿಮಠ ಸ್ವಾಗತಿಸಿದರು. ಎಂ.ಬಿ. ಉಂಕಿ ನಿರೂಪಿಸಿದರು.