Advertisement

Jammu: ಉಗ್ರ ದಮನ, ಉದ್ಯೋಗ ಸೃಷ್ಟಿ ಬಿಜೆಪಿ ಸಂಕಲ್ಪ

01:02 AM Sep 07, 2024 | Team Udayavani |

ಜಮ್ಮು: ಭಯೋತ್ಪಾದನೆ ನಿರ್ಮೂಲನೆ, ಹಿಂದೂ ದೇಗುಲಗಳ ಮರು ನಿರ್ಮಾಣ, ಕಾಶ್ಮೀರಿ ಪಂಡಿತರ ಪುನರ್ವಸತಿ. 5 ಲಕ್ಷ ಉದ್ಯೋಗ ಸೃಷ್ಟಿ ಸೇರಿದಂತೆ ಒಟ್ಟು 25 ಸಂಕಲ್ಪಗಳೊಂದಿಗೆ ಬಿಜೆಪಿ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿದೆ.

Advertisement

ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು  “ಹೊಸ ಜಮ್ಮು-ಕಾಶ್ಮೀರಕ್ಕೆ 25 ಆಶ್ವಾಸನೆಗಳು’ ಎಂಬ ಸಂಕಲ್ಪದೊಂದಿಗೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಈ ಹಿನ್ನೆಲೆಯಲ್ಲಿ ಕೆಲವು ವಿಪಕ್ಷಗಳು ಈ ವಿಧಿಯನ್ನು ವಾಪಸ್‌ ತರುವ ಆಶ್ವಾಸನೆ ನೀಡುತ್ತಿದ್ದರೆ, ಬಿಜೆಪಿ 370ನೇ ವಿಧಿ ಮರುಜಾರಿಯ ಪ್ರಶ್ನೆಯೇ ಇಲ್ಲ ಎಂದಿದೆ. ಯುವಕರ ಕೈಗೆ ಶಸ್ತ್ರಾಸ್ತ್ರಗಳು ಲಭ್ಯವಾಗಲು ಈ ವಿಧಿಯೇ ಕಾರಣ ಎಂದು ಸಚಿವ ಶಾ ಹೇಳಿದ್ದಾರೆ.

ಟೆರರಿಸ್ಟ್‌ ಹಾಟ್‌ಸ್ಪಾಟ್‌ ಆಗಿದ್ದ ಕಾಶ್ಮೀರವನ್ನು ಪ್ರಧಾನಿ ಮೋದಿಯವರು ಟೂರಿಸ್ಟ್‌ ಹಾಟ್‌ಸ್ಪಾಟ್‌ ಆಗಿ ಬದಲಿಸಿದ್ದಾರೆ ಎಂದೂ ಹೇಳಿದ್ದಾರೆ. ಪ್ರಣಾಳಿಕೆ ಬಿಡುಗಡೆ ಮೂಲಕ ಕಾಶ್ಮೀರದಲ್ಲಿ ಚುನಾವಣ ಪ್ರಚಾರದ ಕಹಳೆ ಮೊಳಗಿಸಿರುವ ಅಮಿತ್‌ ಶಾ, ಶನಿವಾರ 2 ರ್ಯಾಲಿಗಳನ್ನು ನಡೆಸಲಿದ್ದಾರೆ.

ಪಾಕ್‌ ಜತೆ ಮಾತುಕತೆ ಇಲ್ಲ: ಶಾ ಸ್ಪಷ್ಟನೆ

Advertisement

ಭಯೋತ್ಪಾದನೆ ಕೊನೆಗೊಳ್ಳುವವರೆಗೂ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸುವುದಿಲ್ಲ. ಆದರೆ  ಕಾಶ್ಮೀರದ ಯುವಕರೊಂದಿಗೆ ನಾವು ಖಂಡಿತಾ ಮಾತುಕತೆ ನಡೆಸುತ್ತೇವೆ ಎಂದು ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ. ಎಲ್‌ಒಸಿಯಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧ ಪುನಃಸ್ಥಾಪನೆಗಾಗಿ ಭಾರತ-ಪಾಕ್‌ ಮಾತುಕತೆ ನಡೆಯಬೇಕು ಎಂದು ವಿವಿಧ ರಾಜಕೀಯ ಪಕ್ಷಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

370ನೇ ವಿಧಿ ಮರುಜಾರಿ ಪ್ರಶ್ನೆಯೇ ಇಲ್ಲ: ಸಚಿವ

ಕೆಲವು ರಾಜಕೀಯ ಪಕ್ಷಗಳು 370ನೇ ವಿಧಿ ಮರುಜಾರಿಯ ಆಶ್ವಾಸನೆಯೊಂದಿಗೆ ಚುನಾವಣೆ ಎದುರಿಸಲು ಮುಂದಾಗಿರುವಂತೆಯೇ ಬಿಜೆಪಿ ಈ ವಿಧಿಯನ್ನು ಪುನಃಸ್ಥಾಪಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ. 370ನೇ ವಿಧಿ ಈಗ ಇತಿಹಾಸದ ಪುಟ ಸೇರಿದೆ. ಕಳೆದ 10 ವರ್ಷಗಳ ಅವಧಿಯು ಚರಿತ್ರೆಯಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆಯುವಂಥ ಅವಧಿಯಾಗಿತ್ತು. ಹೀಗಾಗಿ ಜಮ್ಮು-ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿ ಮಾಡುವುದಿಲ್ಲ ಎಂದು ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು

– ಕಣಿವೆ ರಾಜ್ಯದ ಜಮ್ಮು-ಕಾಶ್ಮೀರದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವ ವಾಗ್ಧಾನ

– ಪ್ರಗತಿ ಶಿಕ್ಷಾ ಯೋಜನೆ ಅನ್ವಯ ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ 3,000 ರೂ. ಪ್ರಯಾಣ ಭತ್ತೆ ನೀಡಲಾಗುವುದು

– ಕುಗ್ರಾಮಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್‌ಲೆಟ್‌/ಲ್ಯಾಪ್‌ಟಾಪ್‌ ಹಂಚಿಕೆ

– ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರ ಪಿಂಚಣಿಯನ್ನು ಈಗಿರುವ 1,000 ರೂ.ಗಳಿಂದ 3,000ರೂ.ಗೆ ಏರಿಕೆ

– ಕಣಿವ ರಾಜ್ಯದ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ಛಕ್ತಿ ದರ ಶೇ.50ರಷ್ಟು ಇಳಿಕೆ

– ಶ್ವೇತಪತ್ರ ಹೊರಡಿಸಿ, ಭಯೋತ್ಪಾದನೆಯ ಎಲ್ಲ ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯ ಒದಗಿಸುವುದು ವಾಗ್ಧಾನ

– ಋಷಿ ಕಶ್ಯಪ ಯಾತ್ರಾಸ್ಥಳ ಪುನರುತ್ಥಾನ ಅಭಿಯಾನದ ಅಡಿ 100 ಶಿಥಿಲಗೊಂಡ ದೇಗುಲಗಳ ಮರುನಿರ್ಮಾಣ

– ಶಂಕರಾಚಾರ್ಯ ದೇಗುಲ, ರಘುನಾಥ, ಮಾರ್ತಾಂಡ ಸೂರ್ಯ ದೇಗುಲ ಸೇರಿದಂತೆ ಇತರ ದೇಗುಲಗಳ ಅಭಿವೃದ್ಧಿ

– ಕಾಶ್ಮೀರಿ ಪಂಡಿತರು, ಪಶ್ಚಿಮ ಪಾಕಿಸ್ಥಾನಿ ನಿರಾಶ್ರಿತರು, ಪಿಒಜೆಕೆ ನಿರಾಶ್ರಿತರು, ವಾಲ್ಮೀಕಿ, ಗೋರ್ಖಾ ಸೇರಿ ನಿರ್ಲಕ್ಷಿತ ಸಮುದಾಯಗಳ ಪುನರ್ವಸತಿಗೆ ಕ್ರಮ

– ವಿಶ್ವದರ್ಜೆಯ ಪ್ರವಾಸಿ ತಾಣವಾಗಿ ದಾಲ್‌ ಸರೋವರ ಅಭಿವೃದ್ಧಿಯ ಭರವಸೆ

– ಜಮ್ಮು-ಕಾಶ್ಮೀರದಲ್ಲಿ ವಿಶೇಷ ಆರ್ಥಿಕ ವಲಯ, ಐಟಿ ಹಬ್‌, ಫಾರ್ಮಾ ಪಾರ್ಕ್‌, ಆಯುಷ್‌ ಹರ್ಬಲ್‌ ಪಾರ್ಕ್‌ ಸ್ಥಾಪನೆ

– ಸರಕಾರಿ ಉದ್ಯೋಗದಲ್ಲಿ ಅಗ್ನಿವೀರರಿಗೆ ಶೇ.20 ಕೋಟಾ ಭರವಸೆ.

Advertisement

Udayavani is now on Telegram. Click here to join our channel and stay updated with the latest news.

Next