ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಜನಪ್ರಿಯ ಸರಕಾರವನ್ನು ರಚಿಸುವ ದಿಶೆಯಲ್ಲಿ ಪರಸ್ಪರ ಬದ್ಧ ವೈರಿಗಳಾಗಿರುವ ಪಿಡಿಪಿ, ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಜತೆಗೂಡುವ ಸಾಧ್ಯತೆಗಳು ಈಗ ತೋರಿಬರುತ್ತಿವೆ.
ಒಂದೊಮ್ಮೆ ಈ ಘಟಬಂಧನ ಸಾಧ್ಯವಾಯಿತೆಂದರೆ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇಲ್ಲ; ಬದಲು ಪಿಡಿಪಿಯ ಯಾವುದಾದರೂ ಹಿರಿಯ ನಾಯಕರೋರ್ವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಜಮ್ಮು ಕಾಶ್ಮೀರ ಪ್ರಕೃತ ರಾಜ್ಯಪಾಲರ ಆಡಳಿತೆಯಲ್ಲಿದೆ. ಇದೇ ವರ್ಷ ಡಿ.19ರಂದು ರಾಜ್ಯಪಾಲರ ಆಡಳಿತೆಯ ಮೊದಲ 6 ತಿಂಗಳ ಮುಗಿದಾಗ ಅದನ್ನು ಮತ್ತೆ ಹೊಸ ಅವಧಿಗೆ ಮುಂದುವರಿಸುವ ಸಾಧ್ಯತೆ ಇದೆ.
ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಪ್ರಸ್ತಾಪ ಇದೆಯಾದರೂ 87 ಸದಸ್ಯ ಬಲದ ರಾಜ್ಯ ವಿಧಾನಸಭೆಯನ್ನು ಇನ್ನೂ ವಿಸರ್ಜಿಸಲಾಗಿಲ್ಲ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳುತ್ತಾರೆ.
ಕಳೆದ ಜೂ.16ರಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರ ಸರಕಾರದ ಪಾಲುದಾರ ಪಕ್ಷವಾಗಿರುವ ಬಿಜೆಪಿ ಅಸಮಾಧಾನ, ಅತೃಪ್ತಿಯ ಕಾರಣಕ್ಕೆ ಸರಕಾರದಿಂದ ಹೊರಬಂದಿತ್ತು.
ಈ ನಡುವೆ ಪೀಪಲ್ ಕಾನ್ಫರೆನ್ಸ್‌ನ ಸಜ್ಜದ್ ಲೋನ್ ನೇತೃತ್ವದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಪೀಪಲ್ ಕಾನ್ಫರೆನ್ಸ್ ಕೇವಲ ಎರಡನೇ ಶಾಸಕರನ್ನು ಹೊಂದಿದೆ; ಆದರೆ ಸರಕಾರ ರಚಿಸಲು ಅದಕ್ಕೆ ಬಿಜೆಪಿಯ 25 ಶಾಸಕರ ಬೆಂಬಲ ಸಿಗಲಿದೆ.
ಹಾಗಿದ್ದರೂ ಸರಕಾರ ರಚನೆಗೆ ಅವಶ್ಯವಿರುವ 44 ಸದಸ್ಯರ ಮ್ಯಾಜಿಕ್ ಸಂಖ್ಯೆಯನ್ನು ಪಿಡಿಪಿ ವಿಭಜನೆಯ ಮೂಲಕ ಸಾಧಿಸುವ ಯತ್ನವೂ ಒಳಗಿಂದೊಳಗೇ ಸಾಗುತ್ತಿದೆ ಎನ್ನಲಾಗಿದೆ. ಪಿಡಿಪಿ ಯೊಳಗೆ ನಾಯಕತ್ವದ ವಿರುದ್ಧ ಭಿನ್ನಮತ, ಬಂಡಾಯ ಅಡಗಿದ್ದು ಅದು ಯಾವ ಹೊತ್ತಿನಲ್ಲೂ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.