Advertisement

370ನೇ ವಿಧಿ ರದ್ದತಿಗೆ ಕೈ ವಿರೋಧ; ಮುಂದಿನ ಗುರಿ ಪಿಒಕೆ-ವಿಪಕ್ಷಗಳ ವಿರೋಧಕ್ಕೆ ಶಾ ತಿರುಗೇಟು

09:40 AM Aug 07, 2019 | Nagendra Trasi |

ನವದೆಹಲಿ:“ನೀವು ಪಾಕ್ ಆಕ್ರಮಿತ ಕಾಶ್ಮೀರದ” ಬಗ್ಗೆ ನೀವು ಆಲೋಚಿಸಿದ್ದೀರಾ ಎಂಬುದು ನನಗೆ ಗೊತ್ತಿಲ್ಲ. ಆದರೆ ನೀವು ಎಲ್ಲಾ ಕಾನೂನನ್ನು ಉಲ್ಲಂಘಿಸಿದ್ದೀರಿ. ಒಂದು ದಿನದೊಳಗೆ ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದೀರಿ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಕೇಂದ್ರದ ನಿರ್ಧಾರದ ವಿರುದ್ಧ ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಂಗಳವಾರ ಲೋಕಸಭೆ ಕಲಾಪದಲ್ಲಿ ಜಮ್ಮು ಕಾಶ್ಮೀರ ಪುನಾರಚನೆ ವಿಧೇಯಕದ ಮೇಲೆ ನಡೆಯುತ್ತಿರುವ ಚರ್ಚೆ ವೇಳೆ ಕಾಂಗ್ರೆಸ್ ಸಂಸದರು ತೀವ್ರ 370ನೇ ವಿಧಿ ರದ್ದತಿಗೆ ವಿರೋಧ ವ್ಯಕ್ತಪಡಿಸಿದರು. ಇದೊಂದು ಆಂತರಿಕ ವಿಷಯ ಅಂತ ಹೇಳುತ್ತೀರಿ. ನೀವು ರಾಜ್ಯವನ್ನು ಇಬ್ಭಾಗ ಮಾಡಿದ್ದೀರಿ. ಜಮ್ಮು-ಕಾಶ್ಮೀರ ಆಂತರಿಕ ವಿಷಯವಾಗಿದ್ದರೆ ನೀವು ಈ ಹಿಂದಿನ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಒಪ್ಪಂದವನ್ನು ಪರಿಗಣಿಸಬೇಕಿತ್ತು ಎಂದು ಅಧೀರ್ ರಂಜನ್ ಪ್ರಶ್ನಿಸಿದರು.

ಪ್ರತಿಪಕ್ಷಗಳ ಆರೋಪಕ್ಕೆ ಶಾ ತಿರುಗೇಟು-ಪಿಒಕೆಗಾಗಿ ನಾವು ಸಾಯಲೂ ಸಿದ್ಧ:

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಕಾನೂನನ್ನು ರೂಪಿಸಲು ಈ ದೇಶದ ಸಂಸತ್ತು ಯಾವತ್ತೂ ತಡೆಯೊಡ್ಡುವುದಿಲ್ಲ. ಕಾಂಗ್ರೆಸ್ ಹೇಳುವಂತೆ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಬಗೆಹರಿಸುತ್ತದಾ ಎಂದು ಅಮಿತ್ ಶಾ ತಿರುಗೇಟು ನೀಡಿದರು.

ನಾನು ಜಮ್ಮು-ಕಾಶ್ಮೀರ ಕುರಿತು ಮಾತನಾಡುವಾಗ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯಿ ಚಿನಾದ ಬಗ್ಗೆ ಸೇರಿಸಿಯೇ ಹೇಳಿದ್ದೆ ಎಂದು ಶಾ ಸ್ಪಷ್ಟನೆ ನೀಡಿದ್ದಾರೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಿಒಕೆ(ಪಾಕ್ ಆಕ್ರಮಿತ ಕಾಶ್ಮೀರ) ಕೂಡಾ ಇದರ ಅಡಿಯಲ್ಲೇ ಬರುತ್ತದೆ. ಪಿಒಕೆಗಾಗಿ ನಾವು ಸಾಯಲೂ ಸಿದ್ಧರಿದ್ದೇವೆ ಎಂದು ಶಾ ಲೋಕಸಭೆಯಲ್ಲಿ ಗುಡುಗಿದ್ದಾರೆ.

Advertisement

ಕ್ಷೇತ್ರ ಪುನರ್ ವಿಂಗಡಣೆ:

ಅಮಿತ್ ಶಾ ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಿದ್ದ ಜಮ್ಮು ಮತ್ತು ಕಾಶ್ಮೀರ ವಿಭಜನೆ ಮಸೂದೆಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಬಗ್ಗೆಯೂ ಪ್ರಸ್ತಾಪ ಮಾಡಲಾಗಿತ್ತು. ಸದ್ಯ ರಾಜ್ಯದಲ್ಲಿ 107 ವಿಧಾನಸಭೆ ಕ್ಷೇತ್ರಗಳಿದ್ದು, ಇವುಗಳ ಸಂಖ್ಯೆ 114ಕ್ಕೆ ಏರಿಕೆಯಾಗಲಿದೆ. ವಿಶೇಷವೆಂದರೆ 24 ಕ್ಷೇತ್ರಗಳು ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ಬರಲಿದ್ದು, ಈ ಭಾಗ ಭಾರತಕ್ಕೆ ವಾಪಸ್ ಬರುವವರೆಗೂ ಖಾಲಿಯಾಗಿಯೇ ಉಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next