Advertisement

ಬೆದರಿಕೆಗೆ ಬಗ್ಗದಿರಿ; ಸಹಜತೆಗೆ ಮರಳಿ

11:32 PM Oct 11, 2019 | Team Udayavani |

ಶ್ರೀನಗರ/ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್‌ ಪಡೆದು 68 ದಿನಗಳು ಕಳೆದರೂ, ಜನರು ಮಾತ್ರ ಅಂಗಡಿ-ಮುಂಗಟ್ಟುಗಳ ಬಾಗಿಲು ತೆರೆಯದೇ, ಮನೆಗಳಿಂದ ಹೊರಬರದೇ “ಸ್ವಯಂಪ್ರೇರಿತ ಕರ್ಫ್ಯೂ’ ವಿಧಿಸಿಕೊಂಡಿದ್ದಾರೆ. ಇನ್ನು ಕೆಲವರು ಉಗ್ರರ ಭೀತಿಯಿಂದ ಹೊರಗೆ ಕಾಲಿಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಆಡಳಿತ ಶುಕ್ರವಾರ ಸ್ಥಳೀಯ ಪತ್ರಿಕೆಗಳಲ್ಲಿ ಫ‌ುಲ್‌ ಪೇಜ್‌ ಜಾಹೀರಾತು ಪ್ರಕಟಿಸಿ ನಾಗರಿಕರ ಮನವೊಲಿಸಲು ಮುಂದಾಗಿದೆ.

Advertisement

“ನಾವು ಭಯೋತ್ಪಾದಕರ ಪ್ರಚೋದನೆಗೆ ಬಲಿಯಾಗಬೇಕೇ? 70 ವರ್ಷಗಳಿಂದಲೂ ಜಮ್ಮು-ಕಾಶ್ಮೀರದ ಜನರ ಹಾದಿ ತಪ್ಪಿಸುತ್ತಾ ಬರಲಾಗಿದೆ. ಉಗ್ರವಾದ, ಹಿಂಸಾಚಾರ, ನಾಶ ಮತ್ತು ಬಡತನದ ವ್ಯೂಹ ಹೆಣೆದು, ಅದರೊಳಗೆ ನಾಗರಿಕರು ಸಿಲುಕಿ ಬಲಿಪಶು ಗಳಾಗುವಂತೆ ಮಾಡಲಾಗಿದೆ’ ಎಂದು ಈ ಜಾಹೀರಾತಿನಲ್ಲಿ ಪ್ರಕಟಿಸಲಾಗಿದೆ. ಜತೆಗೆ, ಪ್ರತ್ಯೇಕತಾವಾದಿಗಳು ತಮ್ಮ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕೆ ಕಳುಹಿಸಿ, ಉತ್ತಮ ವೇತನ ಪಡೆಯುವಂತೆ ಮಾಡುತ್ತಾರೆ. ಆದರೆ, ಉಳಿದವರ ಮಕ್ಕಳನ್ನು ಹಿಂಸಾ ಚಾರ, ಉಗ್ರವಾದಕ್ಕೆ ನೂಕುತ್ತಾರೆ ಎಂದೂ ವಿವರಿಸಲಾಗಿದೆ. ನೀವಿನ್ನೂ ಈ ಭೀತಿಯಿಂ ದಲೇ ಬದುಕಲು ಬಯಸುತ್ತೀರಾ ಅಥವಾ ಸೂಕ್ತ ನಿರ್ಧಾರ ಕೈಗೊಂಡು ರಾಜ್ಯವು ಸಹಜ ಸ್ಥಿತಿಗೆ ಮರಳುವಂತೆ ಮಾಡುತ್ತೀರಾ ಎಂಬ ಪ್ರಶ್ನೆಯನ್ನೂ ಹಾಕಲಾಗಿದೆ.

ಇಂದಿನಿಂದ ಸಂಪರ್ಕ ಪುನಾರಂಭ: ರಾಜ್ಯದಲ್ಲಿ ಪೋಸ್ಟ್‌-ಪೇಯ್ಡ ಮೊಬೈಲ್‌ ಸೇವೆಯು ಶನಿವಾರದಿಂದ ಪುನಾರಂಭ ಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಆದರೆ, ಇಂಟರ್ನೆಟ್‌ ಸೇವೆ ಆರಂಭವಾಗಲು ಇನ್ನೂ ಕೆಲವು ದಿನ ಕಾಯಬೇಕಾಗುತ್ತದೆ ಎಂದಿದ್ದಾರೆ.

ಮಕ್ಕಳನ್ನೇ ಉಗ್ರವಾದಕ್ಕೆ ತಳ್ಳುತ್ತಿದೆ ಪಾಕಿಸ್ತಾನ: ಮಕ್ಕಳ ತಲೆಗೆ ತೀವ್ರಗಾಮಿ ಸಿದ್ಧಾಂತವನ್ನು ತುಂಬಿ, ಅವರನ್ನು ಭಯೋತ್ಪಾ ದಕ ಸಂಘಟನೆಗಳಿಗೆ ನೇಮಕ ಮಾಡುತ್ತಿರುವ ಪಾಕಿಸ್ತಾನವು ಈಗ ಜಮ್ಮು -ಕಾಶ್ಮೀರದ ಮಕ್ಕಳ ಕುರಿತು ಕಟ್ಟುಕಥೆಗಳನ್ನು ಸೃಷ್ಟಿಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿಕಾರಿದೆ. ಮಹಾಧಿವೇಶನದ ಥರ್ಡ್‌ ಕಮಿಟಿ ಸೆಷನ್‌ನಲ್ಲಿ ಮಾತನಾಡಿದ ಭಾರತದ ರಾಜತಾಂತ್ರಿಕ ಅಧಿಕಾರಿ ಪೌಲೋಮಿ ತ್ರಿಪಾಠಿ, ನಮ್ಮ ದೇಶದ ಆಂತರಿಕ ವಿಚಾರಗಳ ಬಗ್ಗೆ ಅನಗತ್ಯವಾಗಿ ಪ್ರಸ್ತಾಪಿಸುತ್ತಿರುವ ದೇಶವು ಸುಳ್ಳುಗಳನ್ನು ಸರಾಗವಾಗಿ ಹೆಣೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

500 ಉಗ್ರರು ನುಸುಳಲು ರೆಡಿ!
ಪಾಕ್‌ ಆಕ್ರಮಿತ ಕಾಶ್ಮೀರದ ಎಲ್‌ಒಸಿಯಾದ್ಯಂತ ವಿವಿಧ ಉಗ್ರ ತರಬೇತಿ ಶಿಬಿರಗಳಲ್ಲಿ ಸುಮಾರು 500 ಉಗ್ರರು ಭಾರತದೊಳಕ್ಕೆ ನುಸುಳಲು ಸಜ್ಜಾಗಿ ಕುಳಿತಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿ ಲೆ.ಜ. ರಣಬೀರ್‌ ಸಿಂಗ್‌ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದೊಳಗೆ 200 ರಿಂದ 300 ಉಗ್ರರು ಸಕ್ರಿಯವಾಗಿದ್ದಾರೆ. ಪಾಕಿಸ್ತಾನದ 500ರಷ್ಟು ಉಗ್ರರು ಕಣಿವೆ ರಾಜ್ಯ ಪ್ರವೇಶಿಸಲು ಹವಣಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

ಕಾಶ್ಮೀರದಲ್ಲಿ ಉಗ್ರರು ಶಸ್ತ್ರಾಸ್ತ್ರಗಳ ಕೊರತೆ ಎದುರಿಸುತ್ತಿದ್ದಾರೆ. ಅವುಗಳನ್ನು ಪೂರೈಸಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರ್ಯಾಯ ಮಾರ್ಗವೆಂಬಂತೆ, ಪೊಲೀಸರು ಹಾಗೂ ಭದ್ರತಾ ಪಡೆಗಳಿಂದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳುವಂತೆ ಸೂಚಿಸಲಾಗುತ್ತಿದೆ.
ಲೆ.ಜ.ರಣಬೀರ್‌ ಸಿಂಗ್‌, ಸೇನಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next