Advertisement

ಜಮ್ಮು-ಕಾಶ್ಮೀರ ಚುನಾವಣೆ : ಬದಲಾವಣೆಯ ಸಂಕೇತ

02:20 AM Dec 25, 2020 | sudhir |

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯಾಗಿ ಸರಿಸುಮಾರು ಒಂದೂವರೆ ವರ್ಷಗಳಾಗುತ್ತಿವೆ. ಆರಂಭದಲ್ಲಿ ಅಲ್ಲಿ ಸುರಕ್ಷ‌ತ ದೃಷ್ಟಿಯಿಂದ ಹಲವಾರು ನಿರ್ಬಂಧಗಳನ್ನು ಹೇರಲಾಗಿತ್ತು. ರಾಜಕೀಯ ಚಟುವಟಿಕೆಗಳು ಬಹುತೇಕ ನಿಂತೇ ಹೋಗಿದ್ದವು. ಅಬ್ದುಲ್ಲಾ, ಮುಫ್ತಿಯಂಥ ಕಾಶ್ಮೀರಿ ರಾಜಕಾರಣಿಗಳು ಅನೇಕ ತಿಂಗಳು ಗೃಹಬಂಧನದಲ್ಲೇ ಇದ್ದರು. ಅವರೆಲ್ಲ ಗೃಹ ಬಂಧನದಿಂದ ಮುಕ್ತರಾಗಿದ್ದು, ರಾಜಕೀಯವಾಗಿ ಮರುಶಕ್ತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

Advertisement

ವಿಶೇಷ ಸ್ಥಾನಮಾನ ರದ್ದಾದ ಬಳಿಕ ಇದೇ ಮೊದಲ ಬಾರಿ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ನಡೆದು ಫ‌ಲಿತಾಂಶವೂ ಪ್ರಕಟವಾಗಿದೆ. 280 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ನೇತೃತ್ವದ ಪೀಪಲ್ಸ್‌ ಅಲಯನ್ಸ್‌ ಫಾರ್‌ ಗುಪ್ಕರ್‌ ಡಿಕ್ಲರೇಷನ್‌ ಮುನ್ನಡೆ ಸಾಧಿಸಿದ್ದರೆ, ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿರುವುದು ವಿಶೇಷ.

ಕಣಿವೆ ಪ್ರಾಂತ್ಯದಲ್ಲಿ ಲೋಕತಂತ್ರ ಪ್ರಕ್ರಿಯೆಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಬೇಕೆಂದು ಕೇಂದ್ರ ಸರಕಾರ ಬಯಸುತ್ತಿತ್ತು. ಈ ವಿಚಾರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮಹತ್ವ ಪಡೆದಿತ್ತು. ಏಕೆಂದರೆ ಇವುಗಳ ಮೂಲಕವೇ ಕೇಂದ್ರದ ಅನೇಕ ಯೋಚನೆಗಳು ಸಕ್ರಿಯವಾಗಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಸ್ಥಗಿತಗೊಂಡಿದ್ದ ಅನೇಕ ಯೋಜನೆಗಳು ಮತ್ತೆ ವೇಗ ಪಡೆಯಲು ಹಾಗೂ ಹೊಸ ಯೋಜನೆಗಳ ಅನುಷ್ಠಾನಕ್ಕೆ ಈಗ ದ್ವಾರ ತೆರೆಯಲಿವೆ. ಕೆಲವು ಸಮಯದ ಹಿಂದೆ ಕಣಿವೆ ಪ್ರದೇಶದಲ್ಲಿ ಪಂಚಾಯತ್‌ ಚುನಾವಣೆಗಳು ನಡೆದಿದ್ದವಾದರೂ ಸ್ಥಳೀಯರಿಂದ ಚುನಾವಣೆಗೆ ಅಷ್ಟೊಂದು ಸ್ಪಂದನೆ ಸಿಕ್ಕಿರಲಿಲ್ಲ. ಆದರೆ, ಈಗಿನ ಚುನಾವಣೆ , ಜನರಲ್ಲಿ ಬದಲಾಗುತ್ತಿರುವ ಭಾವನೆಗಳ ಸಂಕೇತವಾಗಿ ಗೋಚರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೊಂದಕ್ಕೆ ಚುನಾವಣೆಗಳು ಬಲಿಷ್ಠ ಬುನಾದಿ. ಆದರೆ, ದಶಕಗಳಿಂದಲೂ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿ ಸಂಘಟನೆಗಳು ಪ್ರಜಾಪ್ರಭುತ್ವಿಯ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾ, ಚುನಾವಣೆಗಳನ್ನು ಬಹಿಷ್ಕರಿಸುತ್ತಾ ಬಂದಿದ್ದವು. ಅಲ್ಲದೇ, ಮತದಾನದಲ್ಲಿ ಪಾಲ್ಗೊಳ್ಳದಂತೆ ಜನರಿಗೂ ಬೆದರಿಕೆ ಒಡ್ಡುತ್ತಾ ಬರುತ್ತಿದ್ದವು.

ಗಮನಾರ್ಹ ಸಂಗತಿಯೆಂದರೆ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು, ಪಾಕ್‌ ಪರ ದುಷ್ಟಶಕ್ತಿಗಳ ಸದ್ದಡಗುತ್ತಿದೆ. ಪಾಕ್‌ ಬೆಂಬಲದೊಂದಿಗೆೆ ಪ್ರತ್ಯೇಕತಾವಾದದ ಧ್ವನಿಯೆತ್ತುತ್ತಾ, ಅಭಿವೃದ್ಧಿ ಕಾರ್ಯಗಳಿಗೆ, ಪ್ರಜಾಪ್ರಭುತ್ವಿಯ ಪ್ರಕ್ರಿಯೆಗಳಿಗೆಲ್ಲ ಅಡ್ಡಗಾಲು ಹಾಕುತ್ತಾ ಬರುತ್ತಿದ್ದವರ ಹಾವಳಿ ಕಡಿಮೆಯಾಗಿರುವುದು ಈಗಿನ ಚುನಾವಣೆಗೆ ಸಿಕ್ಕ ಜನಸ್ಪಂದನೆಯನ್ನು ಗಮನಿಸಿದಾಗ ಅರ್ಥವಾಗುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕಾಶ್ಮೀರದಲ್ಲಿ ಖಾತೆ ತೆರೆದಿರುವುದೂ ವಿಶೇಷ. ಇದು ಬದಲಾವಣೆಯ ಸಂಕೇತವೇ ಸರಿ. ಇನ್ನೊಂದೆಡೆ ಜಮ್ಮು ಪ್ರಾಂತ್ಯದಲ್ಲಿ ಗುಪ್ಕರ್‌ ಮೈತ್ರಿಗೆ ಹಿನ್ನಡೆಯಾಗಿದ್ದು, ಬಿಜೆಪಿಯೇ ಮುಂದಿದೆ.

ದಶಕಗಳಿಂದ ಪಿಡಿಪಿ, ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕರು ತಮ್ಮ ರಾಜಕಾರಣವನ್ನೆಲ್ಲ ಕೇವಲ ಕಾಶ್ಮೀರ ಕೇಂದ್ರಿತವಾಗಿ ಸಿದ್ದು ಜಮ್ಮು ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗುತ್ತಲೇ ಇತ್ತು. ಆ ಅಸಮಾಧಾನ ಇನ್ನೂ ಇದೆ ಎನ್ನುವುದನ್ನು ಚುನಾವಣೆಯ ಫ‌ಲಿತಾಂಶಗಳು ಸಾರುತ್ತಿವೆ. ಭಾರತಕ್ಕೆ ಸದಾ ತೊಂದರೆಯುಂಟು ಮಾಡಲು ಮಾರ್ಗ ಹುಡುಕುವ ಪಾಕ್‌ ಹಾಗೂ ಚೀನ ಜಮ್ಮು-ಕಾಶ್ಮೀರದ ರಾಜಕೀಯವನ್ನು ಎಚ್ಚರಿಕೆಯಿಂದ ಗಮನಿಸುತ್ತಿವೆ. ಯಾವುದೇ ಕಾರಣಕ್ಕೂ ಅವುಗಳ ಕುತಂತ್ರ ದಾಟಕ್ಕೆ ಕಾಶ್ಮೀರದ ಯಾವ ರಾಜಕಾರಣಿಯೂ ದಾಳವಾಗಬಾರದು. ಇನ್ನು, ಅಭಿವೃದ್ಧಿ ಯೋಜನೆಗಳು ಪ್ರಭಾವಪೂರ್ಣವಾಗಿ ಅನುಷ್ಠಾನವಾಗಬೇಕೆಂದರೆ, ಕೇಂದ್ರ ಹಾಗೂ ಸ್ಥಳೀಯ ಸಂಸ್ಥೆಗಳ ನಡುವೆ ತಾಳ ಮೇಳವಿರುವುದು ಬಹಳ ಅಗತ್ಯ. ಈ ಹಿನ್ನೆಲೆಯಲ್ಲಿ ಕಣಿವೆಯಿಂದ ಶುಭ ಸಂಕೇತಗಳು ಸಿಗಲಾರಂಭಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next