Advertisement

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಿಲ್ಲದ ಪಾಕ್‌ ಪುಂಡಾಟ ತಕ್ಕ ಪಾಠ ಕಲಿಸಿ

12:50 AM Nov 28, 2020 | sudhir |

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನ‌ ಪುಂಡಾಟವನ್ನು ಇನ್ನೂ ನಿಲ್ಲಿಸಿಲ್ಲ. ಕಳೆದೊಂದು ತಿಂಗಳಿಂದೀಚೆಗೆ ಪಾಕ್‌ ಸೇನೆ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪದೇಪದೆ ಕದನ ವಿರಾಮವನ್ನು ಉಲ್ಲಂ ಸಿ ಭಾರತೀಯ ಪಡೆಗಳ ಮೇಲೆ ದಾಳಿ ನಡೆಸುತ್ತಲೇ ಇದೆ. ಈ ಮೂಲಕ ಗಡಿ ಭದ್ರತೆಗೆ ನಿಯೋಜಿಸಲ್ಪಟ್ಟಿರುವ ಭಾರತೀಯ ಭದ್ರತಾ ಪಡೆಗಳ ಗಮನವನ್ನು ಬೇರೆಡೆಗೆ ಸೆಳೆದು ಉಗ್ರರನ್ನು ಭಾರತದೊಳಗೆ ನುಸುಳಿಸುವ ಕುತಂತ್ರ ಅದರದ್ದು.

Advertisement

ಗುರುವಾರವಷ್ಟೇ ಪೂಂಛ…ನಲ್ಲಿ ಪಾಕ್‌ ಸೇನೆಯ ಇಂಥದ್ದೇ ಗುಂಡಿನ ದಾಳಿಗೆ ಭಾರತೀಯ ಸೇನೆಯ ಜೆಸಿಒ ಓರ್ವರು ಹುತಾತ್ಮರಾಗಿದ್ದರೆ, ಉಗ್ರರ ದಾಳಿಗೆ ಇಬ್ಬರು ಯೋಧರು ಬಲಿಯಾಗಿದ್ದರು. ಶುಕ್ರವಾರವೂ ಪಾಕ್‌ ಸೇನೆಯ ದುಷ್ಕೃತ್ಯ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಸುಂದರ್‌ಬನಿ ಸೆಕ್ಟರ್‌ನಲ್ಲಿ ಭಾರತೀಯ ಪಡೆಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಈರ್ವರು ಯೋಧರು ಹುತಾತ್ಮರಾಗಿದ್ದಾರೆ.

ಚಳಿಗಾಲವನ್ನು ಬಳಸಿಕೊಂಡು ಆದಷ್ಟು ಹೆಚ್ಚು ಉಗ್ರರನ್ನು ಭಾರತದೊಳಗೆ ನುಸುಳಿಸುವುದು ಪಾಕ್‌ ಸೇನೆಯ ಲೆಕ್ಕಾಚಾರ. ನಗ್ರೋತಾ ಘಟನೆಯು ಪಾಕಿಸ್ಥಾನಿ ಸೇನೆ ಮತ್ತು ಅಲ್ಲಿನ ಸರಕಾರದ ಇರಾದೆಯನ್ನು ಜಗಜ್ಜಾಹೀರುಗೊಳಿಸಿದೆ. ಆದರೂ ಪಾಕ್‌ ಸೇನೆ ಮಾತ್ರ ತನ್ನ ನರಿಬುದ್ಧಿಯನ್ನು ತೊರೆದಿಲ್ಲ.

ಪಾಕಿಸ್ಥಾನಿ ಪಡೆಗಳು ಮತ್ತು ಉಗ್ರರು ದಾಳಿ ನಡೆಸಿದ ಸಂದರ್ಭಗಳಲೆಲ್ಲ ತಕ್ಕ ಪ್ರತ್ಯುತ್ತರ ನೀಡುತ್ತಿರುವ ಭಾರತೀಯ ಪಡೆಗಳು ಪ್ರತೀ ಬಾರಿಯೂ ವಿರೋಧಿ ಪಡೆಗಳು ಮತ್ತು ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಪಾಕಿಸ್ಥಾನ‌ದ ಈ ಕುಕೃತ್ಯಗಳಿಂದಾಗಿ ಅಮಾಯಕ ನಾಗರಿಕರು ಮತ್ತು ಯೋಧರು ಮರಣವನ್ನ ಪ್ಪುತ್ತಿರುವುದು ತೀವ್ರ ಚಿಂತೆಗೀಡು ಮಾಡಿದೆ.
ಪಾಕ್‌ನ ಗೋಸುಂಬೆತನಕ್ಕೆ 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್‌ ಎಲ್‌ಇಟಿ ಸ್ಥಾಪಕ ಹಫೀಜ್‌ ಸಯೀದ್‌ನನ್ನು ಬಂಧಿಸಿ ಜೈಲಿನಲ್ಲಿರಿಸಿರುವುದಾಗಿ ವಿಶ್ವ ಸಮುದಾಯದ ಎದುರು ಸುಳ್ಳು ಹೇಳುತ್ತಿರುವ ಪ್ರಕರಣ ಪ್ರತ್ಯಕ್ಷ ಸಾಕ್ಷಿ. ಸಯೀದ್‌ನಿಗೆ ಲಾಹೋರ್‌ನಲ್ಲಿರುವ ಮನೆಯಲ್ಲಿ ವಿಲಾಸಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿರುವುದನ್ನು ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ. ಅಲ್ಲದೆ ಆತನನ್ನು ಭೇಟಿಯಾಗಲು ಉಗ್ರಗಾಮಿ ಸಂಘಟನೆಗಳ ನಾಯಕರಿಗೆ ಅವಕಾಶವನ್ನೂ ನೀಡಿದೆ.

ಭಯೋತ್ಪಾದನೆಗೆ ಪ್ರತ್ಯಕ್ಷ ನೆರವು ಮತ್ತು ಸಹಕಾರ ನೀಡುವ ಮೂಲಕ ಪಾಕಿಸ್ಥಾನ‌ ಕೇವಲ ಭಾರತ ಮಾತ್ರವಲ್ಲದೆ ವಿಶ್ವಶಾಂತಿಗೆ ಪರೋಕ್ಷ ಬೆದರಿಕೆಯೊಡ್ಡುತ್ತಿದೆ. ಪಾಕಿಸ್ಥಾನ‌ದ ಈ ದುಷ್ಕೃತ್ಯಗಳಿಗೆ ನಮ್ಮ ಮತ್ತೂಂದು ನೆರೆಯ ರಾಷ್ಟ್ರ ಚೀನದ ಪರೋಕ್ಷ ಸಹಕಾರವಿರುವುದು ರಹಸ್ಯವೇನಲ್ಲ. ಇವೆಲ್ಲದರ ಹೊರತಾಗಿಯೂ ವಿಶ್ವಸಂಸ್ಥೆ ಯಾಗಲೀ ಜಾಗತಿಕ ಸಮುದಾಯವಾಗಲೀ ಪಾಕಿಸ್ಥಾನ‌ದ ವಿರುದ್ಧ ನಿಷ್ಠುರ ಮತ್ತು ಕಠಿನ ನಿರ್ಧಾರಕ್ಕೆ ಹಿಂಜರಿಯುತ್ತಿರುವುದೇ ಅಚ್ಚರಿಯ ಸಂಗತಿ.

Advertisement

ಕಣ್ಣೆದುರು ನೂರಾರು ಸಾಕ್ಷ್ಯಗಳು ಸಿಕ್ಕರೂ ಸುಮ್ಮನಾಗುವ ಬದಲು ಜಾಗತಿಕ ಸಮುದಾಯ, ವಿಶ್ವಶಾಂತಿಯ ನೆಲೆಯಲ್ಲಿ ಹಾಗೂ ನೆರೆಹೊರೆ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲ ಉದ್ದೇಶದ ಜಾರಿಯ ದೃಷ್ಟಿಯಿಂದಾಗಲೀ ಕೂಡಲೇ ಪಾಕಿಸ್ಥಾನ‌ಕ್ಕೆ ಬುದ್ಧಿ ಹೇಳಬೇಕು. ವಿಶ್ವಸಂಸ್ಥೆ ಅಥವಾ ವಿಶ್ವದ ಬಲಾಡ್ಯ ರಾಷ್ಟ್ರಗಳು ಪಾಕಿಸ್ಥಾನ‌ಕ್ಕೆ ವಾಸ್ತವವನ್ನು ಮನವರಿಕೆ ಮಾಡಿಕೊಡುವ ಕಾರ್ಯವನ್ನು ಮಾಡಬೇಕಿದೆ. ಆಗಲೂ ಅದು ತನ್ನನ್ನು ತಿದ್ದಿಕೊಳ್ಳದಿದ್ದರೆ ಕಠಿನವಾದ ತೀರ್ಮಾನ ಕೈಗೊಳ್ಳುವ ಮೂಲಕ ಪಾಠ ಕಲಿಸಬೇಕು. ಅದು ವಿಶ್ವಶಾಂತಿಯ ದೃಷ್ಟಿಯಿಂದಲೂ ಆಗಬೇಕಾದ ತುರ್ತು ಕಾರ್ಯ.

Advertisement

Udayavani is now on Telegram. Click here to join our channel and stay updated with the latest news.

Next